ತುಣುಕು - ಮಿಣುಕು ೧
ನಮ್ಮ ಮನೆಗೆ ನನ್ನ ದೊಡ್ಡಮ್ಮನ ಮಕ್ಕಳು ಮೊಮ್ಮಕ್ಕಳು ಬಂದಿಳಿದರು . ಸ್ವಲ್ಪ ಹೊತ್ತಿನ ಬಳಿಕ ಮಕ್ಕಳೆಲ್ಲ ಆಟ ಆಡಲು ಆರಂಭಿಸಿದವು . ಸುತ್ತಲೂ ನಾವೂ ಮನೆಯವರೆಲ್ಲ ಕುಳಿತು ಆ ಮಕ್ಕಳು ಆಡುವುದನ್ನು ನೋಡುತ್ತಾ ನಮ್ಮ ಪಾಡಿಗೆ ನಮ್ಮದೇ ನೋ ವಿಷಯಗಳನ್ನು ಮಾತನಾಡಿಕೊಂಡು ಕುಳಿತಿದ್ದೆವು . ಆ ಮಕ್ಕಳಲ್ಲಿ ಒಬ್ಬಳು ತುಂಬಾ ಪ್ರಶ್ನೆ ಕೇಳುವವಳು. ಬಂದೂ ಬಂದೂ ನನ್ನ ಕಸಿನ್ ಬ್ರದರ್ ಗೆ ಪ್ರಶ್ನೆ ಕೇಳಲಾರಂಭಿಸಿದಳು . ಮೊದಮೊದಲು ಅವನಿಗೆ ಅವಳ ಪ್ರಶ್ನೆ ಅರ್ಥವಾಗಲಿಲ್ಲ . ಎಸ್ ಎಸ್ ಕಂ ಎಗೈನ್ ಎಂದು ಸ್ಟೈಲಾಗಿ ಇಂಗ್ಲಿಷ್ ನಲ್ಲಿ ಹೇಳಿದ . ಆ ಪೋರಿ ಬರೀ ಎಸ್ ಎಸ್ ಮಾತ್ರ ಕೇಳಿಸಿಕೊಂಡು " ಈ ಅಂಕಲ್ ಗೆ ಎಸ್ ಎಸ್ ಬಿಟ್ಟರೆ ಬೇರೇನೂ ಬರಲ್ಲ ಕಣ್ರೇ " ಅಂತ ಜೋರಾಗಿ ಹೇಳಿದಾಗ ಅಲ್ಲಿದ್ದವರಿಗೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಗು ಬಂತು. ಮೊನ್ನೆ ಮೊನ್ನೆ ಆ ಬಜಾರಿಯ ಮದುವೆಯಲ್ಲಿ ಇದನ್ನೆಲ್ಲಾ ನೆನಪಿಸಿಕೊಂಡು ಎಲ್ಲರೂ ಮತ್ತೆ ಮತ್ತೆ ನಕ್ಕೆವು.
ತುಣುಕು ಮಿಣುಕು ೨
ಕೆಲವು ವರ್ಷಗಳ ಹಿಂದೆ ನಾನೊಂದು ಸರ್ಕಾರಿ ಶಾಲೆಯಲ್ಲಿ ಹಂಗಾಮಿ ಬೋಧಕನಾಗಿ ಕೆಲಸ ಮಾಡುತ್ತಿದ್ದೆ . ಒಂದು ದಿನ ನಾನು ಕೆಲಸ ಮಾಡುತ್ತಿದ್ದ ಜಾಗದ ಕ್ಷೇತ್ರ ಎಂಎಲ್ಎ ಶಾಲೆಗೆ ಭೇಟಿ ನೀಡುತ್ತಾರೆ ಎಂದು ತಿಳಿದುಬಂತು. ನಾವೆಲ್ಲ ನಮ್ಮ ನಮ್ಮ ತಯಾರಿ ನಡೆಸಿಕೊಂಡು ಎಂಎಲ್ಎ ಸಾಹೇಬರನ್ನು ಎದುರುಗೊಳ್ಳಲು ಸಜ್ಜಾದೆವು
ಎಂಎಲ್ಎ ಸಾಹೇಬರ ಜೊತೆಗೆ ಬಿಇಓ ಕೂಡಾ ಬಂದರು . ಅವರಿಗೆ ಬೇಕಾದ ಕಡತ ಪರಿಶೀಲನೆ ನಡೆಸಿದಮೇಲೆ ಎಲ್ಲಾ ಬೋಧಕರನ್ನೂ ಒಂದೆಡೆ ಸೇರಿಸಿದರು . ನಾವೆಲ್ಲ ನಿಂತು ಇವರಿಬ್ಬರ ಬರುವಿಕೆಗಾಗಿ ಕಾಯುತ್ತಾ ಇದ್ದೆವು.
ಬಂದರು ಎಂಎಲ್ಎ ಸಾಹೇಬರು ಮತ್ತು ಬಿಇಓ ಇಬ್ಬರೂ . ಎಂಎಲ್ಎ ಸಾಹೇಬರು ಮಕ್ಕಳ ಓದಿನ ಮತ್ತು ಫಲಿತಾಂಶದ ಬಗ್ಗೆ ನಮ್ಮನ್ನು ವಿಚಾರಿಸಲಾಗಿ ಕಳಿಸಿದರು.
ಎಂಎಲ್ಎ : " ಏನ್ರಪ್ಪಾ , ಪಾಟ ಗೀಟ ಎಲ್ಲಾ ಚೆನ್ನಾಗಿ ನಡೀತಿದಿಯೋ ? "
ಹೆಚ್ ಎಂ " ಹ್ಞಾಂ ಎಲ್ಲಾ ಸರಿಯಾಗಿ ನಡೀತಿದೆ ಸಾರ್ "
ಎಂಎಲ್ಎ : ನೀನ್ ಸುಮ್ನಿರಪ್ಪಾ ಮೇಷ್ಟ್ರು ಮೇಡಂಗುಳು ಹೇಳ್ಳಿ "
ಮೇ ಮೇ " ನಡೀತಿದೆ ಸಾರ್. ಸರಿಯಾಗೇ ನಡೀತಿದೆ "
ಎಂಎಲ್ಎ:" ರಿಸಲ್ಟ್ ಎಲ್ಲಾ ಹೆಂಗ್ ಬರ್ತಿದೇ "
ಮೇ ಮೇ : " ನಮ್ಮಲ್ಲಿ ರಿಸಲ್ಟ್ ಹಂಡ್ರೆಡ್ ಪರ್ಸೆಂಟ್ ಸಾರ್ "
ಎಂಎಲ್ಎ : " ಸಾಲ್ದು . ಏನೇನೂ ಸಾಲ್ದು. ನೀವೆಲ್ಲ ತುಂಬಾ ಕಷ್ಟ ಪಟ್ಟು ಕೆಲಸ ಮಾಡ್ಬೇಕೂ . ಮಕ್ಕಳು ಚೆನ್ನಾಗಿ ಓದಿ ಮುಂದಕ್ಬರ್ಬೇಕೂ . ಇನ್ನೂ ಚೆನ್ನಾಗಿ ಪಾಠ ಮಾಡಿ ಮಕ್ಳಿಗೆ ಸರಿಯಾಗಿ ಹೇಳ್ಕೊಡಿ. ತಿಳೀತಾ "
ಮೇ ಮೇ : ...........
ಸಭೆ ಮುಗೀತು
ಅವರೆಲ್ಲಾ ಹೋದಮೇಲೆ ಇವನ ಪಿಂಡ ಹಂಡ್ರೆಡ್ ಪರ್ಸೆಂಟೂ ಸಾಲ್ದಂತೆ . ಕಿತ್ತೋದೋನು " ಅಂತ ಬೈದು ಎಲ್ಲಾ ಬಿದ್ದು ಬಿದ್ದು ನಕ್ಕಿದ್ದೆವು .
ಮೊನ್ನೆ ಆ ಶಾಲೆಯ ಶಿಕ್ಷಕಿ ಒಬ್ಬರು ಅಚಾನಕ್ಕಾಗಿ ಭೇಟಿಯಾಗಿ ಇಬ್ಬರೂ ಮತ್ತೆ ಅದನ್ನೇ ನೆನಪಿಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು.
ತುಣುಕು ಮಿಣುಕು ೩
ಆಗಿನ್ನೂ ನನ್ನ ಮಗ ತುಂಬಾ ಚಿಕ್ಕವನು ಮಾತು ಇನ್ನೂ ಬರುತ್ತಿರಲಿಲ್ಲ. ಮಾತು ಬರಲಿ ಎಂದು ನನ್ನ ಪತ್ನಿ ಎರಡೆರಡು ಅಕ್ಷರ ಇರುವ ಪದಗಳನ್ನು ಗಾದೆಗಳನ್ನು ಹೇಳಿಕೊಡುತ್ತಿದ್ದಳು ಹೀಗೆ ದಿನವೂ ಅಭ್ಯಾಸ ಮಾಡಿಸುತ್ತಾ ಸುಮಾರು 150 ಗಾದೆಗಳನ್ನು ಕಲಿತು ಬಿಟ್ಟಿದ್ದ. ಮಗ ಈ ಕಡೆ ಮಾತು ಕಲಿಯುತ್ತಿದ್ದರೆ , ಅಪ್ಪನಾದ ನಾನು ನನ್ನ ಸಮಸ್ಯೆಯ ತೀರುವಳಿಗಾಗಿ ಸಾಲಕ್ಕಾಗಿ ಬ್ಯಾಂಕುಗಳನ್ನು ಎಡತಾಕುತ್ತಿದ್ದೆ. ಆಗ ಪರಿಚಯವಾದ ಬ್ಯಾಂಕೊಂದರ ಮ್ಯಾನೇಜರ್ ನ ಸ್ನೇಹಿತರು ನಂತರ ಸ್ವಲ್ಪ ಕಾಲದಲ್ಲೇ ಹಿತೈಷಿಗಳೂ ಆದರು. ಅವರ ಬಳಿ ನನ್ನ ಅವಶ್ಯಕತೆಯನ್ನು ಹೇಳಿಕೊಂಡೆ. ಸಾಲಕ್ಕೆ ಸಂಬಂಧಿಸಿದಂತೆ ಮಾತುಕತೆಗಾಗಿ ಸಂಬಂಧಪಟ್ಟ ಕಾಗದ ಪತ್ರಗಳನ್ನು ತೆಗೆದುಕೊಂಡು ಬರುವಂತೆ ಹೇಳಿದರು. ನಾನು ನನ್ನ ಪತ್ನಿ ಮತ್ತು ಮಗು ಮೂರು ಜನ ಅವರ ಮನೆಗೆ ಹೋದೆವು. ಸ್ವಲ್ಪಹೊತ್ತಿನಲ್ಲೇ ಸಾಲದ ಬಗ್ಗೆ ಮಾತುಕತೆ ಆರಂಭಿಸಿದರು ಹೋಗಬೇಕಾದ ಬ್ಯಾಂಕ್ ಅನುಸರಿಸಬೇಕಾದ ಕೆಲವು ನಿಯಮಗಳು ಇವುಗಳ ಬಗ್ಗೆ ತಿಳುವಳಿಕೆ ನೀಡಲಾರಂಭಿಸಿದರು. ಎಲ್ಲವನ್ನೂ ಮುಗಿಸಿ ಇನ್ನೇನು ನಾವು ಅವರ ಮನೆ ಬಿಟ್ಟು ಹೊರಡಬೇಕು ಎನ್ನುವಷ್ಟರಲ್ಲಿ ಅವರು" ಅಯ್ಯೋ ನಮ್ಮ ಪುಟ್ಟೂನೆ ಮಾತಾಡಿಸಲಿಲ್ಲ. ಏನೋ ಪುಟ್ಟ ಏನ್ ಸಮಾಚಾರ " ಅಂತ ಕೇಳಿದ್ರು. ನಾವು ಅವನಿಗಿನ್ನೂ ಮಾತು ಸರಿಯಾಗಿ ಬರುವುದಿಲ್ಲ ಎಂದೆಲ್ಲಾ ಹೇಳಬೇಕು ಎನ್ನುವಷ್ಟರಲ್ಲಿ ಪಟ್ಟನೆ ಮುದ್ದು ಮುದ್ದಾಗಿ ನುಡಿದ " ಕೊಟ್ಟ ಸಾಲ ಕೇಳ ಬೇಡ" . ಮೂರು ಜನ ಉರುಳಾಡಿ ನಕ್ಕಿದ್ದೆವು. ಅವರು " ಸರಿಯಾದ ಆಸಾಮಿ ಕಣ್ರೀ " ಎಂದು ಹೇಳಿ ಅಂಗಡಿಯಿಂದ ಚಾಕ್ಲೆಟ್ ತರಿಸಿ ಕೊಟ್ಟು ಮುದ್ದುಮಾಡಿ ಕಳಿಸಿದರು. ಈಗಲೂ ಭೇಟಿಯಾದಾಗ ಅದನ್ನೇ ನೆನಪಿಸಿಕೊಂಡು ನಗುತ್ತಿರುತ್ತಾರೆ.
ತುಣುಕು ಮಿಣುಕು ೪
ನಾನು ಚಿಕ್ಕವನಿದ್ದಾಗ ನಡೆದ ಘಟನೆ. ಮನೆಯಿಂದ ಶಾಲೆಗೆ ಅಥವಾ ಪೇಟೆಗೆ ಹೋಗಿ ಬರುವಾಗ ಕೆಲವರು ಬೀಡಿ ಸಿಗರೇಟು ಸೇದುತ್ತಾ ಬಾಯಿಂದ ಹೊಗೆ ಬಿಡುವುದನ್ನು ಅವ್ಯಕ್ತ ಕುತೂಹಲದಿಂದ ನೋಡುತ್ತಿದ್ದೆ. ನಾನೂ ಹಾಗೆ ಬಾಯಿಂದ ಹೊಗೆ ಬಿಟ್ಟರೆ ಹೇಗಿರುತ್ತದೆ ಎನ್ನುವ ಕಲ್ಪನೆಯೇ ಬೇರೆ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಅಪ್ಪ ಅಮ್ಮನನ್ನು ಕೇಳಲು ಭಯ . ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ಕುತೂಹಲ ಎಷ್ಟಾಗಿತ್ತೆಂದರೆ ಆದಷ್ಟು ಬೇಗ ಈ ಸಾಧನೆ ಮಾಡಿ ಮುಗಿಸಿಬಿಡಬೇಕು ಎನ್ನಿಸಿತ್ತು. ಒಂದು ದಿನ ಬೆಳಿಗ್ಗೆ ಅಮ್ಮ ಮನೆಯಿಂದ ಹೊರಗೆ ಹೋದರು. ಇದೇ ಸರಿಯಾದ ಸಮಯ ಎಂದುಕೊಂಡು ನಾನು ದೇವರ ಮೂರ್ತಿಯ ಎದುರು ಹಚ್ಚಿಟ್ಟಿದ್ದ ಊದಿನಕಡ್ಡಿಯನ್ನು ಬಾಯೊಳಗೆ ಬಾಯಿಸುಡದ ಹಾಗೆ ಕೆಲಸಮಯ ಬಾಯಿತುಂಬಾ ಹೊಗೆ ತುಂಬಿಕೊಳ್ಳುವ ವರೆಗೂ ಇಟ್ಟುಕೊಂಡು ಊದಿನಕಡ್ಡಿಯನ್ನು ತುಂಬಾ ಹುಷಾರಾಗಿ ಹೊರಗೆ ತೆಗೆದು ಬಾಯಲ್ಲಿ ತುಂಬಿದ್ದ ಹೊಗೆಯನ್ನು ನಿಧಾನವಾಗಿ ಹೊರಬಿಟ್ಟೆ. ಜಗತ್ತನ್ನೇ ಗೆದ್ದ ಭಾವ. ಊದಿನಕಡ್ಡಿ ಆರಿದರೆ ಹಚ್ಚಿಕೊಂಡು ಮತ್ತೆ ಮತ್ತೆ ಮಾಡುತ್ತಾ ನನ್ನ ಲೋಕದಲ್ಲೇ ಮೈಮರೆತಿದ್ದೆ .
ಎಲ್ಲೆಂದರಲ್ಲಿ ಲೆಕ್ಕವೇ ಇಲ್ಲದಂತೆ ಸೀಬೇಮರದ ಕೋಲಿನಿಂದ ರಪ್ ರಪ್ ಎಂದು ಮೈಮೇಲೆ ಏಟುಗಳು ಬೀಳಲಾರಂಭಿಸಿದವು. " ಎಷ್ಟು ದಿನದಿಂದ ನಡೀತಿದೆ ಈ ದರಿದ್ರ ಹೊಲಸು ಕೆಲಸ ? ನನ್ನ ಪ್ರಾಣ ತಿನ್ನೋಕೇ ಹುಟ್ಟಿದೀಯಾ ಅನಿಷ್ಟ ಮುಂಡೇದೇ . ಇನ್ನೊಂದು ಸಲ ನೋಡಿದೀನಿ ಅನ್ನೋ ಅನುಮಾನ ಬಂದ್ರೂ ನಿನ್ನ ಹುಟ್ಲಿಲ್ಲಾ ಅನ್ನಿಸ್ಬಿಡ್ತೀನಿ ಪಾಪಿಮುಂಡೇದೆ. ಒಳ್ಳೇದ್ ಕಲಿ ಅಂದ್ರೆ ಬರೀ ಇಂಥದೇ ಕಲೀತೀಯಾ ." ಅಂತ ಅಮ್ಮ ಮನಸೋ ಇಚ್ಛೆ ಬಾರಿಸಿದ್ದು ಸಿಗರೇಟು ಬೀಡಿ ಸೇದುವವರನ್ನು ನೋಡುವಾಗ ನೆನಪಾಗುತ್ತದೆ.
ತುಣುಕು ಮಿಣುಕು ೫
ಹತ್ತಿರದ ಸಂಬಂಧಿಕರ ಮನೆಯ ಗೃಹ ಪ್ರವೇಶ. ಬೆಳಿಗ್ಗೆಯಿಂದ ಅವರು ಹೊಸ ಮನೆಯ ಪೂಜೆ ಪುನಸ್ಕಾರದಲ್ಲಿ ಪಾಲ್ಗೊಂಡೆವು. ಊಟದ ಸಮಯಕ್ಕೆ ಸ್ವಲ್ಪ ಮುಂಚೆ ಒಂದು ಮುದ್ದಾದ ಸುಮಾರು ಮೂರು ವರ್ಷ ವಯಸ್ಸಿನ ಹೆಣ್ಣು ಮಗುವಿನ ಹಿಂದೆ ಸುತ್ತಾಡುತ್ತಾ ಅವರಮ್ಮ ಊಟ ಮಾಡಿಸಲು ಹೆಣಗುತ್ತಿದ್ದಳು. ನಾವೆಲ್ಲರೂ ಊಟಕ್ಕೆ ಕುಳಿತುಕೊಳ್ಳಲಾರಂಭಿಸಿದ್ದೆವು. ಆ ಮಗು ಏನ್ಬೇಕಾದ್ರೂ ತಿನ್ಸು ಆದ್ರೆ ಲಾಡು ಮಾತ್ರ ಬೇಡ ಅಂತ ಮುದ್ದು ಮುದ್ದಾಗಿ ಹೇಳಿತು. ಎಲ್ಲರೂ ಅದನ್ನು ಕೇಳಿಸಿಕೊಂಡು ಎಂಜಾಯ್ ಮಾಡ್ತಿದ್ವಿ. ಎಲೆ ಹಾಕಿ ಊಟ ಬಡಿಸಲು ಆರಂಭಿಸಿದರು . ಈ ಮಗು ಲಾಡು ತಿಂಬೇಡೀ ಲಾಡೂ ತಿಂಬೇಡೀ ಅಂತ ಜೋರಾಗಿ ಹೇಳೋಕೆ ಶುರು ಮಾಡ್ತು. ಅಲ್ಲೇ ಬಡಿಸಲು ಬಂದಿದ್ದ ಅಡಿಗೆಯವನು ಯಾಕೆ ಬಂಗಾರಾ ಲಾಡೂ ತಿನ್ಬೇಡೀ ಅಂತ ಎಲ್ರಿಗೂ ಹೇಳ್ತಿದೀಯಾ ಅಂದ . ಯಾಕೇಂದ್ರೆ ಅದು ನೆನ್ನೆ ಮಾಡಿದ್ದು. ತಂಗಳು. ತಂಗಳು ಯಾರಾದ್ರೂ ತಿಂತಾರಾ ಅಂತ ತನ್ನ ಬಟ್ಟಲುಗಣ್ಣುಗಳನ್ನು ಜೋರಾಗಿ ಬಿಡುತ್ತಾ ಕೇಳಿದಾಗ ಅಡಿಗೆಯನ್ನೂ ಸೇರಿದಂತೆ ನಾವೆಲ್ಲ ಬಿದ್ದೂ ನಕ್ಕಿದ್ದೆವು .
ತುಣುಕು ಮಿಣುಕು - ೬
ನನ್ನ ಮಗ ಯುಕೆಜಿ ಯಲ್ಲಿ ಓದುತ್ತಿದ್ದಾಗಿನ ಸಮಯ . ಒಂದು ದಿನ ಸಂಜೆ ನಾನು ನನ್ನ ಪತ್ನಿ ಮತ್ತು ನನ್ನ ಮಗ ಮೂರೂ ಜನ ರಾಯರ ಮಠಕ್ಕೆ ಹೋಗಿ ವಾಪಸ್ಸು ಬರುವಾಗ ನನ್ನ ಮಗನನ್ನು ಭುಜದ ಮೇಲೆ ಕೂರಿಸಿಕೊಂಡು ಬರುತ್ತಿದ್ದೆ. ನನ್ನ ಪತ್ನಿ ಅಂದು ಇವನು ತನ್ನ ಶಾಲೆಯಲ್ಲಿ ಏನೋ ಗಲಾಟೆ ಮಾಡಿಕೊಂಡು ಯಾರಿಗೂ ಹೊಡೆದು ಬಂದಿದ್ದಾನೆ ಎಂದು ಹೇಳಿದಳು. ನಾನು " ಚಿನ್ನು , ಹಾಗೆಲ್ಲಾ ಜಗಳ ಮಾಡಬಾರದಪ್ಪಾ , ಎಲ್ಲರ ಜೊತೆ ಫ್ರೆಂಡ್ ಆಗಿ ಇರಬೇಕಪ್ಪಾ. ಯಾರ ಜೊತೇನೂ ಜಗಳ ಗಲಾಟೆ ಮಾಡ್ಕೋಬಾರ್ದು. ಯಾರಿಗೂ ಹೊಡೆದು ಬೈದು ಮಾಡ್ಬಾರ್ದೂ ಅಂತ ನಿಧಾನವಾಗಿ ಹೇಳಿದೆ. ಅದನ್ನೆಲ್ಲಾ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ನನ್ನ ಮಗ ಒಂದೇ ಒಂದು ಮಾತು ಆಡಿದ . ಆ ಮಾತಿಗೆ ನನ್ನ ಪತ್ನಿ ಇಡೀ ದಿನ ನಕ್ಕಿದ್ದಳು. ನಾನು ಬಾಯಿಮುಚ್ಚಿಕೊಂಡು ತೆಪ್ಪಗಾದೆ. ಅಪ್ಪನ ಬಾಯನ್ನೇ ಮುಚ್ಚಿಸುವಂಥಾ ಮಾತು ಯಾವುದದು ಅವನು ಹೇಳಿದ್ದು ?
ತಂದೆಯಂತೆ ಮಗ ಮತ್ತು ರಾಜನಂತೆ ಪ್ರಜೆ
ಈಗಲೂ ನೆನೆಸಿಕೊಂಡರೆ ನಗು ಬರುತ್ತದೆ.
ತುಣುಕು ಮಿಣುಕು ೭
ನೆನ್ನೆ ಅಂದರೆ ೭/೨/೨೦೨೦ ಶುಕ್ರವಾರದಂದು ನಡೆದ ಘಟನೆ. ನನ್ನ ದೊಡ್ಡಪ್ಪನ ಮೊಮ್ಮಗಳ ನಿಶ್ಚಿತಾರ್ಥ ನಡೆದಿತ್ತು. ನಾವೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಊಟದ ಸಮಯಕ್ಕೆ ಊಟದ ಟೇಬಲ್ ಮುಂದೆ ಕುಳಿತು ಊಟ ಮಾಡುತ್ತಿದ್ದೆವು . ನನ್ನಿಂದ ಸ್ವಲ್ಪ ದೂರದಲ್ಲಿ ಒಂದು ಚಿಕ್ಕ ಹುಡುಗಿ ಅದರ ಅಜ್ಜಿಯ ಜೊತೆ ಊಟಕ್ಕೆ ಕುಳಿತಿತ್ತು. ತುಂಬಾ ಚೂಟಿ ಅದು. ಮುದ್ದು ಮುದ್ದು ಮುದ್ದಾಗಿ ಒಂದು ಕ್ಷಣವೂ ಸುಮ್ಮನಿರದೇ ಮಾತಾಡುತ್ತಾ ಇತ್ತು. ಅಡಿಗೆಯವರಲ್ಲಿ ಒಬ್ಬರು ತಮಾಷೆಯಾಗಿ ಹಸನ್ಮುಖಿಯಾಗಿ ಬಡಿಸುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಎಲ್ಲರೂ ಜೋರಾಗಿ ನಗಲಾರಂಭಿಸಿದರು. ನಮಗೂ ವಿಷಯ ಏನೆಂದು ತಿಳಿಯಲಿಲ್ಲ. ವಿಷಯ ತಿಳಿದ ಬಳಿಕ ನಮಗೂ ನಗೆ ತಡೆಯಲಾಗಲಿಲ್ಲ .
ಆ ಹಸನ್ಮುಖಿ ಅಡಿಗೆಯವರು ಎಲ್ಲರನ್ನೂ ಬಿಟ್ಟು ಈ ಮಗುವನ್ನು ಅಡಿಗೆ ಹೇಗಿದೆ ಪುಟ್ಟಾ ಎಂದು ಕೇಳಿದರು. ಈ ಮಗು " ಅಂಕಲ್ ಉಪ್ಪು ಮಾತ್ರ ತುಂಬಾ ಚೆನ್ನಾಗಿ ಮಾಡಿದ್ದೀರಾ. ಬೇರೇನೂ ಚೆನ್ನಾಗಿಲ್ಲ " ಅಂತ ಬಾಲಭಾಷೆಯಲ್ಲಿ ಹೇಳಿದಾಗ ಆತ ಅಡಿಗೆಯವರು ಏನೂ ಹೇಳಲಾಗದೇ ಒಂದು ಕ್ಷಣ ಕಕ್ಕಾಬಿಕ್ಕಿಯಾದರು.
ತುಣುಕು ಮಿಣುಕು - ೮
ಇತ್ತೀಚೆಗೆ ನಾನು ಮತ್ತು ನನ್ನ ಪತ್ನಿ ನಾವು ಬಹಳ ಹಿಂದೆ ವಾಸಿಸಿದ್ಧ ಊರಿಗೆ ಹೋದಾಗ ಒಬ್ಬಳು ತನ್ನ ಗಂಡ ಮತ್ತು ಇಬ್ಬರು ಮಕ್ಕಳೊಂದಿಗೆ ಎದುರು ಬಂದಳು. ಆಕೆಯೇ ತಕ್ಷಣ ಗುರುತು ಹಿಡಿದು " ಸಾರ್ , ನಾನು . ನೆನಪಿದೀನಾ " ಎಂದು ಅತೀವ ಸಂತೋಷದಿಂದ ಕಣ್ಣರಳಿಸಿಕೊಂಡು ಕೇಳಿದಳು . ನನಗೆ ತಕ್ಷಣಕ್ಕೆ ನೆನಪಾಗಲಿಲ್ಲ. ಅವಳು ನೆನಪು ಮಾಡಿಸಲು ಯತ್ನಿಸುವಾಗ ತಕ್ಷಣವೇ ನೆನಪಾಗಿ ಅವಳ ಕಿವಿಯಲ್ಲಿ ಏನೋ ಹೇಳಿದೆ. ಹೌದು ಹೌದು ಎಂದಳು. ಇಬ್ಬರೂ ಬಿದ್ದು ಬಿದ್ದು ನಗುತ್ತಿದ್ದರೆ ಅವಳ ಗಂಡ ಮತ್ತು ನನ್ನ ಪತ್ನಿ ಇಬ್ಬರೂ ನಮ್ಮನ್ನೇ ನೋಡುತ್ತಾ ನಿಂತಿದ್ದರು. ಕಡೆಗೆ ನಾನು " ನೋಡಿ , ನಿಮ್ಮಾಕೆ ನನ್ನ ವಿದ್ಯಾರ್ಥಿನಿ. ಒಮ್ಮೆ ಪರೀಕ್ಷೆ ಯೊಂದರಲ್ಲಿ ಮೂಳೆಗಳು ಗಟ್ಟಿಯಾಗಿ ಇರಲು ದೇಹಕ್ಕೆ ವಿಟಮಿನ್ ಡಿ ಬೇಕು ಎಂದು ಬರೆಯುವ ಬದಲು ಮೂಳೆಗಳು ಗಟ್ಟಿಯಾಗಿ ಇರಲು ವಿಟಾ ದೇಹಕ್ಕೆ ಮಿಂಡಿ ಬೇಕು ಎಂದು ಬರೆದಿದ್ದಳು. " ಎಂದೆ . ಈಗ ನಗುವವರ ಸಂಖ್ಯೆ ಹೆಚ್ಚಾಗಿತ್ತು. ಅವಳ ಮಕ್ಕಳಿಗೆ ಎಷ್ಟು ಅರ್ಥ ಆಯಿತೋ ಏನೋ ಗೊತ್ತಿಲ್ಲ. ಆದರೆ ಅವೂ ನಮ್ಮ ಜೊತೆಗೆ ನಗುತ್ತಿದ್ದವು.
ತುಣುಕು - ಮಿಣುಕು ೯
ಬಹಳ ವರ್ಷಗಳ ಹಿಂದಿನ ಮಾತು. ನಾವು ಮನೆ ಕಟ್ಟಿಸುತ್ತಿದ್ದೆವು. ಮೋಲ್ಡು ಹಾಕಿ ಮೇಲೆ ಸಿಮೆಂಟಿನಲ್ಲಿ ಚಿಕ್ಕ ಚಿಕ್ಕ ಬದುಗಳನ್ನು ನಿರ್ಮಿಸಿ ಅದರಲ್ಲಿ ನೀರನ್ನು ತುಂಬಿಸಿದರೆ ಕ್ಯೂರಿಂಗ್ ಗೆ ಸಹಾಯಕ ಎಂದು ಮೇಸ್ತ್ರಿ ಹಾಗೆಯೇ ಮಾಡಿದ್ದ. ನನ್ನ ಮಗ ಆಗ ತುಂಬಾ ಚಿಕ್ಕವನು. ಸ್ವಲ್ಪ ಮಾತು ಬರುತ್ತಿತ್ತು . . ಅವನಿಗೆ ಇಂಥದ್ದೆಲ್ಲಾ ತುಂಬಾ ಇಷ್ಟ. ಮಾರನೇ ದಿನ ಸಂಜೆ ಮೇಸ್ತ್ರಿ ಮನೆಗೆ ಬಂದ. ನಾನು ನನ್ನ ಮಗ ಮತ್ತು ಮೇಸ್ತ್ರಿ ಮೂವರೂ ತಾರಸಿಗೆ ಹೋದೆವು . ತನ್ನ ಪುಟ್ಟ ಕಾಲುಗಳಿಂದ ನಿಂತ ನೀರಲ್ಲಿ ಆಟವಾಡುತ್ತಾ. " ಹ್ಞಾಂ ಚಮುದಾ " ಅವನು ತೆಗೆದ ಉದ್ಗಾರ ನಾನು ಮತ್ತು ಮೇಸ್ತ್ರಿ ಬಿದ್ದು ಬಿದ್ದು ನಗುವಂತೆ ಮಾಡಿತ್ತು. ಮೇಸ್ತ್ರಿಯಂತೂ " ಇದೇ ಸಮುದ್ರನಾ ಚಿನ್ನವೂ " ಎಂದು ಹೇಳಿಕೊಂಡು ಮತ್ತೂ ನಕ್ಕ .
ತುಣುಕು - ಮಿಣುಕು ೧೦.
ನನ್ನ ಮಗ ತುಂಬಾ ಚಿಕ್ಕವನಾಗಿದ್ದಾಗ ನಡೆದ ಘಟನೆ . ಬಹುಶಃ ಆಗತಾನೇ ಅವನು ಪ್ರಾಣಿಗಳು ಪಕ್ಷಿಗಳನ್ನು ಚಿತ್ರದಲ್ಲಿ ನೋಡಿ ಕಲಿಯುತ್ತಿದ್ದ ಕಾಲ . ನನ್ನ ಪತ್ನಿ ಮತ್ತು ಮಗ ಅಂಗಡಿಗೆ ಸಾಮಾನು ತರಲೆಂದು ಹೋದವರು ಮರಳಿ ಬರುವಾಗ ಒಂದು ಕಜ್ಜಿನಾಯಿಮರಿ ಕುಂಟುತ್ತಾ ಇವರ ಮುಂದೆ ಹೋಯಿತಂತೆ . ಅದನ್ನು ಕಂಡವನೇ ನನ್ನ ಮಗ " ಹ್ಞಾಂ ಲೆಪರ್ಡ್ " ಎಂದು ಅವರಮ್ಮನ ಬಳಿ ಹೇಳಿದ್ದ. ಅದನ್ನು ಕೇಳಿ ನಾವಿಬ್ಬರೂ ಬಹಳ ಹೊತ್ತು ನಕ್ಕಿದ್ದೆವು.
ತುಣುಕು ಮಿಣುಕು ೧೧
ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಬಲಗಡೆಯ ಚಕ್ರವೊಮ್ಮೆ ಗುಂಡಿಗೆ ಇಳಿದು ಧಡಾರನೆ ಸದ್ದು ಮಾಡಿ ನನ್ನನ್ನು ಎತ್ತಿ ಹಾಕಿದರೆ ಎಡಗಡೆಯದು ಇನ್ನೊಮ್ಮೆ. ಹೀಗೇ ಕೆಲವು ಸಲ ಆದ ಮೇಲೆ ನನಗೆ ಪಕ್ಕೆ ಹಿಡಿದುಕೊಂಡು ನೋವು ಬರಲಾರಂಭಿಸಿತು. ನಾನು ಆಟೋ ಡ್ರೈವರ್ ಗೆ " ಏನಪ್ಪಾ , ಗಾಡಿಯನ್ನು ಗುಂಡಿಯಲ್ಲಿ ಹೀಗೆ ಇಳಿಸಿದರೆ ಹೇಗೆ ? " ಎಂದೆ. " ಓನರ್ ನನ್ಮಗ ಬಲೇ ಕಂಜ್ಯೂಸು ಸಾರ್. ಕಾಸ್ ಬಿಚ್ಚಕ್ಕೇ ಸಾಯ್ತಾನೆ. ಅದೇ ಗಾಡಿ ಹಾಳಾದ್ರೆ ಎಷ್ಟು ಬೇಕಾದ್ರೂ ಖರ್ಚು ಮಾಡ್ತಾನೆ. ಈ ಗಾಡಿ ರಿಪೇರಿ ಮಾಡೋ ಮೆಕಾನಿಕ್ ಜೊತೆ ಅಂಡರ್ ಸ್ಟ್ಯಾಂಡಿಂಗ್ ಮಡಿಕ್ಕಂಡಿದೀನಿ. ಗಾಡಿ ಹಾಳಾದ್ರೆ ರಿಪೇರಿಗೋದ್ರೆ ನಂಗೂ ಸ್ವಲ್ಪ ಕಾಸಾಯ್ತದೆ " ಅಂದ.
ಇವನಿಗೆ ಕಾಸಾಗೋಕೆ ನಾನು ಪಕ್ಕೆ ಉಳುಕುಸ್ಕೋಬೇಕಾ ?
ತುಣುಕು ಮಿಣುಕು ೧೨
ಬಲಿಪಾಡು ಬೇಡ
ಬಹಳ ವರ್ಷಗಳ ಹಿಂದಿನ ಮಾತು. ನನ್ನ ಮಗ ಆಗ ತಾನೇ ಎರಡೆರಡು ಅಕ್ಷರಗಳ ಪದಗಳನ್ನು ಮಾತನಾಡುತ್ತಿದ್ದ. ದೀಪಾವಳಿ ಹಬ್ಬ ಬಂದಾಗ ಬಲಿ ಪಾಡು ಬೇಡ ಅಂದ. ಏಕೆ ಮಗು ಹೀಗೆ ಹೇಳುತ್ತದೆ ಎಂದು ಎಷ್ಟು ತಲೆಕೆರೆದುಕೊಂಡರೂ ಹೊಳೆಯಲಿಲ್ಲ. ನಿಧಾನವಾಗಿ ತಿಳಿಯಿತು. ದೀಪಾವಳಿ ಹಬ್ಬಕ್ಕೆಂದು ಪಟಾಕಿ ತಂದು ಎಲ್ಲಾ ಮೊದಲ ದಿನವೇ ಹೊಡೆಯಬೇಡ. ಬಲಿಪಾಡ್ಯಮಿ ಗೂ ಇಟ್ಟುಕೋ ಎಂದು ನನ್ನವಳು ಮಗನಿಗೆ ಹೇಳಿದ್ದಕ್ಕೆ ಮಗರಾಯ ಬಲಿಪಾಡ್ಯಮಿವರೆಗೂ ಕಾಯೋದು ಬೇಡ ಇವತ್ತೇ ಎಲ್ಲಾ ಮುಗಿಸಿ ಬಿಡ್ತೀನಿ ಎನ್ನುವುದನ್ನು ತನ್ನ ಬಾಲ ಭಾಷೆಯಲ್ಲಿ ಹೇಳಿದ ರೀತಿ. ಈಗಲೂ ನೆನಪಾಗಿ ನಗು ಬರುತ್ತದೆ.
ತುಣುಕು ಮಿಣುಕು ೧೩
ಸ್ನೇಹಿತರೆಲ್ಲಾ ಮಾತನಾಡುತ್ತಾ ಕುಳಿತಿದ್ದೆವು. ಸಂಬಳದ ವಿಚಾರವೂ ನುಸುಳಿತು. ನಮ್ಮಲ್ಲೊಬ್ಬನೆಂದ. ನಮ್ಮ ಸಂಬಳ ಜಾಸ್ತಿ ಹೇಳಿಕೊಂಡೆ ಅನ್ಕೋ. ಸಾಲ ಕೇಳ್ತಾರೆ. ವಾಪಸ್ ಕೊಡೋದಿಲ್ಲ. ಬರೋ ಸಂಬಳಾನೇ ಮುಚ್ಚು ಮರೆ ಇಲ್ಲದೆ ಹೇಳ್ದೇ ಅನ್ಕೋ. ಮರ್ಯಾದೆನೇ ಬರೋದಿಲ್ಲ ಅಂದ . ಎಲ್ಲರೂ ನಕ್ಕೆವು
ತುಣುಕು - ಮಿಣುಕು ೧೪
ಕೇಳಬಾರದಿತ್ತು
ಎಂದಿನಂತೆ ಅಂದೂ ಕೂಡ ಬೆಳಗ್ಗೆ ಶಾಲೆಗೆ ಹೊರಟೆ. ಎದುರಿಗೆ ಪಕ್ಕದ ಮನೆಯ ಹುಡುಗಿ ಕೇಸರಿ ಬಣ್ಣದ ಹಾಲಿನ ಪ್ಯಾಕೆಟ್ ಹಿಡಿದುಕೊಂಡು ಬರುತ್ತಿದ್ದಳು.
ನಾನು ತಮಾಷೆಗೆ " ಪುಟ್ಟಿ , ಇಷ್ಟು ಹೊತ್ತಿಗೆ ಹಾಲು ತಂದರೆ ನಾನು ಕಾಫಿ ಕುಡಿಯೋದು ಯಾವಾಗ ? " ಎಂದೆ.
" ಇದು ನಾಯಿಗೆ ಹಾಕೋಕೆ ಅಣ್ಣಾ " ಅಂದಳು
ಬಾಯ್ ಮುಚ್ಕೊಂಡು ಇರ್ಬೇಕಿತ್ತು ನಾನು.