ಮಾತಿನ ಮದ್ದು
ಮಾತೇ ಮುತ್ತು ಮಾತೇ ಮೃತ್ಯು- ಈ ಗಾದೆ ಜನ ಸಾಮಾನ್ಯರನ್ನು ಕುರಿತು.
ಮದ್ದು ಮಾತಿನದ್ದೋ ಅಥವಾ ರಾಸಾಯನಿಕದ್ದೋ, ಜೀವರಕ್ಷಕವಾಗಬೇಕೇ ಪರಂತು ಪ್ರಾಣಭಕ್ಷಕವಾಗಕೂಡದು.
ಡಾಕ್ಟರ್ ಎಂದರೆ ನನ್ನ ಕಣ್ಣಾಲಿಗಳು ತಮಗೆ ತಾವೇ ತುಂಬಿ ಕೊಳ್ಳುತ್ತವೆ.
ನಾನಾಗ ಸಣ್ಣ ಹುಡುಗ. ಬಹುಶಃ ಐದನೇ ಅಥವಾ ಆರನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ನಮ್ಮ ತಂದೆ ಸಾಗರದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯ ಸರ್ಕಾರೀ ಆಸ್ಪತ್ರೆಯಲ್ಲಿ ಡಾಕ್ಟರ್ ರಂಗೇಗೌಡರು ಅಂತ. ಬಹುಶಃ ನಮ್ಮ ಪಾಲಿಗೆ ದೇವರೇ ಎನ್ನುವಷ್ಟು ಗೌರವ . ನಮ್ಮ ಮನೆಯಲ್ಲಿ ಯಾರಿಗೇ ಏನೇ ಜಡ್ಡು ಜಾಪತ್ರೆಗಳಾದರೂ ಸೀದಾ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿ ರಂಗೇಗೌಡರು ಒಮ್ಮೆ ಪಲ್ಸ್ ಹಿಡಿದು ಮಂದಹಾಸದಲ್ಲಿ " ಇಷ್ಟಕ್ಕೆಲ್ಲಾ ಹೆದರಿಕೊಳ್ತಾರೇನೋ . ಥೂ ನಿನ್ನ. ಮುಠ್ಠಾಳ. ಈ ಮೂರು ಮಾತ್ರೆ ತಗೋ. ಎಲ್ಲಾ ಸರಿಹೋಗುತ್ತದೆ. " ಎಂದುಬಿಟ್ಟರೆ ದೊಡ್ಡ ಪ್ರಮಾಣದ ಅಭಯವೇ ದೊರೆತಷ್ಟು ಸಮಾಧಾನ ನನ್ನ ತಂದೆ ತಾಯಿಗಳಿಗೆ.
ನಮ್ಮ ಮನೆಯಲ್ಲಿ ಯಾರೇ ಆಸ್ಪತ್ರೆಗೆ ಹೋದರೂ ಅಥವಾ ಇತರರು ಯಾರೇ ಆಸ್ಪತ್ರೆಗೆ ಹೋದರೂ ರಂಗೇಗೌಡರು ರೋಗಿಗಳನ್ನು ನೋಡುತ್ತಿದ್ದ, ಉಪಚರಿಸುತ್ತಿದ್ದ ಪರಿ ಅನನ್ಯ. ಹೀಗಿರುವಾಗ ಒಮ್ಮೆ ನನಗೆ ವಿಪರೀತ ಛಳಿ ಜ್ವರ ಮೈಕೈ ನೋವು ಬಂದಿತು. ನಮ್ಮಪ್ಪ ಅಮ್ಮ ಕಂಗಾಲಾಗಿ ಹೋದರು. ಸಾಲದ್ದಕ್ಕೆ ನಮ್ಮಮ್ಮನಿಗೂ ಜ್ವರ. ದಿಕ್ಕು ತೋಚದೆ ನಮ್ಮಪ್ಪ ನಮ್ಮಿಬ್ಬರನ್ನೂ ರಂಗೇಗೌಡರ ಬಳಿ ಒಯ್ದರು. ಗೌಡರು ಸ್ಥೂಲವಾಗಿ ಪರೀಕ್ಷೆ ನಡೆಸಿ ಯಥಾ ಪ್ರಕಾರ ಮೂರು ಮಾತ್ರೆ ಕೊಟ್ಟು ಕಳಿಸಿದರು.
ಈ ಬಾರಿ ದುರದೃಷ್ಟ ಹೆಗಲೇರಿತ್ತು. ಮಾತ್ರೆ ತೆಗೆದುಕೊಂಡಾಗ ಮಾತ್ರ ಕಡಿಮೆ ಆಗುತ್ತಿದ್ದ ಛಳಿ ಜ್ವರ ಮತ್ತೆ ಮರುಕಳಿಸುತ್ತಿತ್ತು. ತಡಮಾಡದೆ ನಮ್ಮಪ್ಪ ಮತ್ತೆ ರಂಗೇಗೌಡರ ಬಳಿಸಾರಿದರು. ಈ ಬಾರಿ ಗೌಡರು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದಾಗ ನಮ್ಮಪ್ಪ ಅಲ್ಲೇ ಭಯಗೊಂಡರು. ಆಗ ಗೌಡರು " ರಾಯರೇ ಯಾಕೆ ಧೈರ್ಯ ಕಳ್ಕೋತೀರಿ? ನಾನಿದೀನಿ. ದೇವರಿದಾನೆ. ನಿಮ್ಮ ಮಗನಿಗೆ ಅಂಥಾ ಸೀರಿಯಸ್ ಏನೂ ಆಗಿಲ್ಲ. ಅವನಿಗೆ ಪ್ಯಾರಾ ಟೈಫಾಯಿಡ್ ಆಗಿದೆ. ಅದಕ್ಕೆ ಮನೆಯಲ್ಲಿ ಸೂಕ್ತ ಉಪಚಾರ ಸಿಗುವುದಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಎಂದೆ " ಎಂದರು. ಆಗ ನಮ್ಮಪ್ಪನಿಗೆ ಹೋದ ಜೀವ ಮರಳಿ ಬಂದಂತಹ ಭಾವ. ಸುಮಾರು ಹದಿನೈದು ದಿನಗಳ ಕಾಲ ಆಸ್ಪತ್ರೆ ವಾಸ ಮುಗಿಸಿ ಮನೆಗೆ ಮರಳುವಾಗ ಗೌಡರನ್ನು ಕಂಡು " ಹೋಗಿಬರುತ್ತೇನೆ ಡಾಕ್ಟ್ರೇ " ಎಂದಾಗ ಡಾಕ್ಟರ್ " ಹೋಗು. ಬರಬೇಡ ಮತ್ತೆ. " ಎಂದು ನಗುನಗುತ್ತಾ ಬೀಳ್ಕೊಟ್ಟಿದ್ದರು. ಅವರ ಕೊನೆಯ ಮಾತಿನ ಅಂತರಾರ್ಥ ನನಗೂ ಅರ್ಥ ಆಗಿತ್ತು.
ಶೃಂಗೇರಿಯಲ್ಲಿ ನಾನು ಡಿಗ್ರಿ ಮಾಡುವಾಗ ಡಾಕ್ಟರ್ ಒಬ್ಬರ ಬಗ್ಗೆ ತಿಳಿದುಬಂತು. ಡಾಕ್ಟರ್ ರಾಮಚಂದ್ರ ಅಂತ. ನನ್ನ ಸ್ನೇಹಿತ ತನಗೆ ಒಮ್ಮೆ ಅನಾರೋಗ್ಯವಾದಾಗ ಅವರ ಬಳಿ ಅವನ ಜೊತೆಗೆ ಹೋಗಿದ್ದೆ. ಅವತ್ತು ತುಂಬಾ ರಶ್ ಇತ್ತು. ಕ್ಲೀನಿಕ್ ನಲ್ಲಿ ಕಾಲಿಡಲು ಆಗದಷ್ಟು ರೋಗಿಗಳು. ಒಬ್ಬೊಬ್ಬರಾಗಿ ಒಳಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಹೊರಗೆ ಬರುತ್ತಿದ್ದರು. ಇಬ್ಬರಾದ ಮೇಲೆ ನನ್ನ ಸ್ನೇಹಿತನ ಸರದಿ. ಆ ಇಬ್ಬರಲ್ಲಿ ಮೊದಲನೆಯವ ನರಳುತ್ತಾ ಒಳಗೆ ಹೋದ. ನಾವಿಬ್ಬರೂ ಮುಂದೆ ಬಂದಿದ್ದ ಕಾರಣ ರೋಗಿ ಮತ್ತು ವೈದ್ಯರ ನಡುವಿನ ಸಂಭಾಷಣೆ ಸ್ಪಷ್ಟವಾಗಿಯೇ ಕೇಳುತ್ತಿತ್ತು
ಡಾ. ಎಂತಾಯ್ತ?
ರೋ. ತುಂಬಾ ಹೊಟ್ಟೆ ನೋವು ಡಾಕ್ಟರ್.
ಡಾ. ಸಿಕ್ತು ಅಂತ ಕಸ ಪಸ ತಿಂದ್ಯನಾ ಪರದೇಶಿ.?
ರೋ.ಇಲ್ಲ ಡಾಕ್ಟರ್
ಡಾ. ನಿನ್ನೆ ಎಂತ ತಿಂದೆ ಸಾಯುಕೆ?
ರೋಗಿ ಏನೋ ಹೇಳಿದ.
ಡಾ. ನಿನಗೆಂತ ದೆವ್ವ ಮೆಟ್ಕಂಡಿದಿಯೇನಾ. ಹಾಳು ಮೂಳು ತಿನ್ನುದು. ಸಿಕ್ಕ ಸಿಕ್ಕಲ್ಲಿ ಬಾಯಾಡ್ಸುದು. ಹಡದಿ ದನದ ಥರಾ. ಇಲ್ಲಿ ಬನ್ಕಂಡ್ ಸರಿ ಮಾಡ್ರಿ ಅಂದ್ರೆ ನಾ ಎಂತ ಮಾಡ್ಲೋ ನಿನ್ನ ಹೆಣ?
ರೋ. ಎಂತಾರೂ ಮಾಡಿ ಡಾಕ್ಟರ್.
ಡಾ. ಬಾಟಲಿ ತಂದಿದಿಯೇನಾ ?
ರೊ. ತಂದಿದೀನಿ ಡಾಕ್ಟರ್
ಡಾ. ಚಂದಮಾಡಿ ತೊಳ್ದಿದೀಯೇನಾ ಬಾಟ್ಳೀನಾ?
ರೊ. ತೊಳ್ದಿದೀನಿ ಡಾಕ್ಟರ್
ಡಾ. ಮುಚ್ಚಳ ತೆಗೆಯೋಕೂ ಹೇಳ್ಬೇಕೇನಾ?
ರೋ. ತೆಗ್ದೆ ಡಾಕ್ಟರ್
ಡಾ. ಇಲ್ಲಿ ಕೊಡಾ. ಇದ್ರಲ್ಲಿ ಔಷಧಿ ಉಂಟು. ನಾ ಹೇಳಿದ ಹಾಗೆ ತಗೊಂಡ್ರೆ ಚಂದ ಬದುಕ್ತೀ. ಇಲ್ಲಾ ಹೀಗೇ ನರಳಿ ಸಾಯ್ತಿ. ಮತ್ತೆ, ಎಂತ ಡಿಸೈಡ್ ಮಾಡ್ದಿ? ಸಾಯುಕಾ ? ಬದುಕುಕಾ?
ಡಾ. ಮತ್ತೆ ಮರೀದೇ ಔಷಧಿ ತಕೋ.
ರೋ. ಸರಿ ಡಾಕ್ಟರ್. ಫೀಸ್ ಎಷ್ಟು?
ಡಾಕ್ಟರ್ ಫೀಸ್ ಹೇಳಿದರು.
ರೋ. ಅಯ್ಯೋ ಡಾಕ್ಟರ್ ನಾನು ದುಡ್ಡು ತರೋದೇ ಮರ್ತೆನಲ್ಲಾ. ಎಂತ ಮಾಡ್ಲಿ?
ಡಾ. ನೀಯೇನು ನಾಳೆನೇ ಸಾಯುದಿಲ್ಲಲ್ಲ. ಆದರೆ ನಾಳೆ ತಂದ್ಕೊಡು. ಇಲ್ಲಾ ನೀ ಸತ್ತೇ ಹೋದರೆ ನಿನ್ನ ಹೆಣದ ಮೇಲೆ ಹಾಕ್ಕೋ. ಸರಿಯಾ ? . ನಿನ್ನ ದುಡ್ಡಿಲ್ಲದಿದ್ರೆ ನಾ ಸಾಯುದಿಲ್ಲಲ್ಲ. ನಿನ್ ಕೈಲಿ ಕೊಡೂಕೆ ಆಗುದಿಲ್ಲ ಅಂದ್ರೆ ದುಡ್ಡೇನೂ ಬ್ಯಾಡ. ಇನ್ಯಾರೋ ಅಲ್ಲಿ?
ಈ ರೋಗಿ ಹೊರಗೆ ಬಂದ. ನಾನು ತಡೆಯಲಾರದೆ ಆ ರೋಗಿಯನ್ನೇ ಕೇಳಿದೆ. ಅಲ್ರೀ ಡಾಕ್ಟರ್ ನಿಮ್ಮನ್ನು ಅಷ್ಟು ಬೈತಿದಾರೆ. ನಿಮಗೆ ಬೇಜಾರೇ ಆಗಿಲ್ವಾ? ಅಂದೆ ಅದಕ್ಕೆ ನನ್ನ ಸ್ನೇಹಿತ ಅವನಿಗೆ ಹೋಗಲು ಹೇಳಿ ಈ ಡಾಕ್ಟರ್ ವಿಷಯ ಹೇಳಿದ. ಇವರು ಮಾತಾಡೋದೇ ಹೀಗೆ ಕಣೋ. ತಿಳಿದೋರು ಯಾರಿಗೂ ಬೇಜಾರಾಗಲ್ಲ. ಹೊಸಬರಿಗೆ ಬೇಜಾರಾದ್ರೂ ಡಾಕ್ಟರ್ ಒಳ್ಳೇ ಗುಣ ಕೈಗುಣ ಎರಡೂ ಅವರ ಬಾಯಿ ಮುಚ್ಚಿಸತ್ತೆ ಅಂದ. ನನಗೂ ಹೌದು ಅನ್ನಿಸಿತ್ತು. ಇಲ್ದೇ ಇದ್ದರೆ ಈ ಪಾಟಿ ಬೈಯೋ ಡಾಕ್ಟರ್ ನ ಜನ ಹಿಗ್ಗಾಮುಗ್ಗಾ ಬಾರ್ಸೊಲ್ಲವೇ ಎಂದುಕೊಂಡು ಸುಮ್ಮನಾದೆ. ನನ್ನ ಸ್ನೇಹಿತನ ಸರದಿ ಬಂದು ಅವನಿಗೂ ಇದೇ ರೀತಿ ಮಂಗಳಾರತಿ ಆಗಿದ್ದು ಸ್ನೇಹಿತನ ಮಾತಿಗೆ ಪುಷ್ಟಿ ನೀಡಿತ್ತು
ಕೆಲವು ವರ್ಷಗಳ ನಂತರ ನಾನು ಬೆಂಗಳೂರಿನಲ್ಲಿ ಕೆಲಸ ಮಾಡಲು ಬಂದೆ. ಡಿಗ್ರಿ ಮುಗಿಸಿ ಸಿಕ್ಕ ಕೆಲಸವೊಂದನ್ನು ಮಾಡುತ್ತಿದ್ದೆ.ಒಂದು ದಿನ ಇದ್ದಕ್ಕಿದ್ದಂತೆ ಅಪ್ಪ ನಾನಿದ್ದ ರೂಮಿಗೆ ಬಂದರು. ಮುಖ ಪೇಲವವಾಗಿ ಹೋಗಿತ್ತು. ಏನು ಎತ್ತ ಎಂದು ವಿಚಾರಿಸಲು ಹೇಳಲಾರಂಭಿಸಿದರು . ನನನ್ನ ಚಿಕ್ಕಪ್ಪ ಈ ನಡುವೆ ತಾನು ತಾನೇ ಮಾತನಾಡಿಕೊಳ್ಳೋದು. ಕಾರಣ ಇಲ್ಲದೇ ನಗೋದು. ಅಳೋದು.ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳೋದು.ಇತ್ಯಾದಿಯಾಗಿ ಆಡಲಾರಂಭಿಸಿದ್ದರೆಂದು ಹತ್ತಿರದ ವೈದ್ಯರಿಗೆ ತೋರಿಸಿದಾಗ ಅವರು ಒಂದು ದಿನ ಇಡೀ ತಮಗೆ ತಿಳಿದ ಪರೀಕ್ಷೆಗಳನ್ನು ಮಾಡಿ ಚಿಕ್ಕಮ್ಮನಿಗೆ ಹೇಳಿದರಂತೆ. " ನೋಡಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಚಿಕ್ಕಪ್ಪನನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ಕರೆದೊಯ್ಯಿರಿ " ಎಂದು ಹೇಳಿ ಧೈರ್ಯ ತುಂಬಿ ಕಳಿಸಿದರಂತೆ. ಆ ವಿಷಯ ತಿಳಿದ ನಮ್ಮಪ್ಪ ಸೀದಾ ನನ್ನ ಬಳಿ ಬಂದಿದ್ದರು.
ತಕ್ಷಣವೇ ಚಿಕ್ಕಪ್ಪನನ್ನು ನಿಮ್ಹಾನ್ಸ್ ಗೆ ದಾಖಲಿಸಿದೆವು. ಚಿಕ್ಕಪ್ಪ ಪ್ರಜ್ಞಾಹೀನನಾಗಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಾರೆ. ಚಿಕ್ಕಮ್ಮ ಅಳುತ್ತಾ ನಿಂತಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ನರರೋಗ ವೈದ್ಯರೊಬ್ಬರು ಬಂದರು. ಚಿಕ್ಕಪ್ಪನ ಕೈ ಹಿಡಿದು ಏನೋ ಪರೀಕ್ಷೆಗಳನ್ನು ನಡೆಸಿದರು. ಸೀದಾ ಚಿಕ್ಕಮ್ಮನ ಕಡೆ ತಿರುಗಿದವರೇ " ಈ ಪೇಷೆಂಟ್ ಕಡೆಯೋರು ನೀನೇ ಏನಮ್ಮಾ? ಈವಾಗ್ಲಾ ಕರ್ಕೊಂಬರೋದು? ಈಗ ಏನೂ ಮಾಡೋಕಾಗಲ್ಲ. ನಿನ್ನ ಗಂಡ ಸತ್ತೋದ." ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿ ಹೊರಟೇ ಹೋದರು. ಚಿಕ್ಕಮ್ಮ ಅಲ್ಲೇ ಕುಸಿದೇ ಹೋದಳು. ನನಗೆ ದಿಕ್ಕೇ ತೋಚದೆ ಚಿಕ್ಕಮ್ಮನಿಗೆ ಸಮಾಧಾನ ಮಾಡಿ ಒಂದು ಮಟ್ಟಕ್ಕೆ ತರುವಷ್ಟರಲ್ಲಿ ಸಾಕುಸಾಕಾಗಿಹೋಗಿತ್ತು. ಕಡೆಗೆ ಇನ್ನೊಬ್ಬರು ವೈದ್ಯರು ಬಂದು ಬೇರೆ ಬೇರೆ ಪರೀಕ್ಷೆಗಳನ್ನು ನಡೆಸಲಾರಂಭಿಸಿದರು
ಸುಮಾರು ಒಂದು ವಾರ ಹತ್ತು ದಿನಗಳಲ್ಲಿ ನಾವೆಲ್ಲರೂ ಸೋತು ಸುಣ್ಣವಾಗಿ ಹೋಗಿದ್ದೆವು.
ಚಿಕ್ಕಪ್ಪನ ಶವ ಮನೆಗೆ ತಂದು ಅಂತ್ಯಕ್ರಿಯೆ ನೆರವೇರಿಸಿದೆವು.
ಕೆಲವು ವರ್ಷಗಳ ನಂತರ ನನಗೆ ಮದುವೆ ಆಗಿ ಮಗ ಹುಟ್ಟಿದ. ಅವನಿಗೆ ಒಂದು ವರ್ಷ ತುಂಬಿತ್ತು. ಶಿವರಾತ್ರಿಯ ದಿನ . ಮನೆಯಲ್ಲಿ ಪೂಜೆ ಮಾಡಲು ಕುಳಿತೆ. ಮಗ ಕುರ್ಚಿಯ ಮೇಲಿಂದ ಕೆಳಗೆ ಬಿದ್ದು ಹಣೆಗೆ ಗಾಯ ಮಾಡಿಕೊಂಡ. ಹಣೆಯಿಂದ ಬಳಬಳ ರಕ್ತ ಹರಿಯಲಾರಂಭಿಸಿತ್ತು. ನನಗೆ ಜಂಘಾಬಲವೇ ಉಡುಗಿಹೋಯಿತು. ಮಗುವನ್ನು ಎತ್ತಿಕೊಂಡು ಹತ್ತಿರದ ಡಾಕ್ಟರ್ ಬಳಿ ತೆರಳಿ ಅತೀವ ಆತಂಕದಲ್ಲಿ" ಡಾಕ್ಟರ್ ದಯವಿಟ್ಟು ಏನಾದರೂ ಮಾಡಿ. " ಎಂದಷ್ಟೇ ಹೇಳಲು ನನಗೆ ಸಾಧ್ಯವಾಗಿದ್ದು. ಹೆದರಿದ್ದ ನನ್ನನ್ನು ಸಮಾಧಾನ ಪಡಿಸುವ ಬದಲಿಗೆ ಆ ಡಾಕ್ಟರ್ "ನೀವೇ ಭಯ ಪಟ್ಟರೆ ನಾವೇನು ಮಾಡಬೇಕು? ಸ್ವಲ್ಪ ತಡ್ಕೊಳ್ರೀ. ಯಾಕ್ಹಂಗಾಡ್ತೀರಾ ? " ಎಂದು ರೇಗಿಬಿಟ್ಟ. ನಾನಿದ್ದ ಅಸಹಾಯಕ ಪರಿಸ್ಥಿತಿಯಲ್ಲಿ ಹಾಗೂ ಹೀಗೂ ಹಲ್ಲು ಕಚ್ಚಿಕೊಂಡು ಇದನ್ನೆಲ್ಲಾ ಸಹಿಸಿಕೊಂಡೆ. ರೇಗುತ್ತಲೇ ಆ ಡಾಕ್ಟರ್ ನನ್ನ ಮಗುವಿನ ಹಣೆಯ ಮೇಲೆ ಆದ ಗಾಯಕ್ಕೆ ಹೊಲಿಗೆ ಹಾಕಿಬಿಟ್ಟರು.
ಕೆಲವು ದಿನಗಳ ನಂತರ ಮತ್ತೇನೂ ಕಾರಣಕ್ಕೆ ಮಗುವನ್ನು ಹತ್ತಿರದ ಇನ್ನೊಂದು ಡಾಕ್ಟರ್ ಬಳಿ ಕರೆದೊಯ್ದಾಗ " ಯಾವನ್ರೀ ಡಾಕ್ಟರ್, ಈ ಎಳೇ ಮಗು ಹಣೆಗೆ ಹೊಲಿಗೆ ಹಾಕಿದ ಅಡ್ಡಕಸುಬಿ. ಬ್ಯಾಂಡೇಜ್ ಮಾಡಿದ್ರೇ ಸಾಕಿತ್ತು. ಏನು ಜನಗಳಪ್ಪಾ . ಆ ಎಳೇ ಎಷ್ಟು ನೋವು ತಿಂತೋ ಏನೋ "ಎಂದು ನಿಡುಸುಯ್ದರು.
ನಾನು ಆ ಡಾಕ್ಟರ್ ಗೆ ಥ್ಯಾಂಕ್ಸ್ ಹೇಳಿ ಫೀಸ್ ಕೊಟ್ಟು ಮನೆಗೆ ಬಂದೆ.

0 Comments:
Post a Comment
Subscribe to Post Comments [Atom]
<< Home