ಕೊಂದವರಾರು?
ಮಹೇಶ್ ಕುಟುಂಬ ಮತ್ತು ಅವಿನಾಶ್ ನ ಕುಟುಂಬದ ಸ್ನೇಹ ಸುಮಾರು ಹತ್ತಿರ ಹತ್ತಿರ ಎರಡು ದಶಕಗಳಷ್ಟು. ಮಹೇಶ್ ಕಂಡ ಹಾಗೆ ಅವಿನಾಶ್ ಯಾವುದೇ ದುಶ್ಚಟಗಳಿಂದಲೂ ಮಾರು ದೂರ. ಮೃದು ಭಾಷಿ. ತನ್ನ ಕೈಯಲ್ಲಿ ಸಾಧ್ಯವಾದಷ್ಟೂ ಇನ್ನೊಬ್ಬರ ಕಷ್ಟಕ್ಕೆ ನೆರವಾಗುವ ಗುಣ. ಅವಿನಾಶ್ ನ ಒಡನಾಟದಲ್ಲಿ ಅವರ ಈ ಗುಣ ಮಹೇಶ್ ನ ಅರಿವಿಗೆ ಬಂತು.
ಆರತಿಗೊಬ್ಬಳು ಕೀರ್ತಿಗೊಬ್ಬ ಎನ್ನುವಂತೆ ಅವಿನಾಶ್ ಗೆ ಇಬ್ಬರು ಮಕ್ಕಳು. ಅವಿನಾಶ್ ಪತ್ನಿ ನಳಿನಿ ಕೂಡ ವಿದ್ಯಾವಂತೆ. ಮನೆ ಹತ್ತಿರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಮಹೇಶ್ ಬಾಡಿಗೆ ಮನೆಯಲ್ಲಿ ವಾಸಿಸುವಾಗ ಅವರ ಮನೆ ಮಹೇಶ್ ಮನೆಗೆ ಕಲವೇ ಹೆಜ್ಜೆಗಳಷ್ಟು ಸನಿಹ.
ಇಬ್ಬರೂ ಅವಕಾಶ ಸಿಕ್ಕಾಗಲೆಲ್ಲಾ ಭೇಟಿಯಾಗುತ್ತಿದ್ದರು. ಉಭಯಕುಶಲೋಪರಿಯ ನಂತರ ಸ್ವಲ್ಪ ಸಮಯದವರೆಗೆ ರಾಜಕೀಯವೋ ಅವಿನಾಶ್ ನ ಕೆಲಸಕ್ಕೆ ಸೇರುವಾಗ ಆಗಿದ್ದ ಅನುಭವಗಳನ್ನೋ ಮಾತನಾಡಿ ಪರಸ್ಪರ ಬೀಳ್ಕೊಳ್ಳುತ್ತಿದ್ದರು. ಇದು ಆಗಾಗ ನಡೆಯುತ್ತಿತ್ತು. ಹಾಗೆಂದು ಮನೆ ಹೊರಗೆ ನಿಂತು ಗಂಟೆ ಗಟ್ಟಲೆ ಪಟ್ಟಂಗ ಹೊಡೆಯುವ ಅಭ್ಯಾಸ ಇಬ್ಬರಲ್ಲೂ ಇರಲಿಲ್ಲ. ಏನೇ ಮಾತುಕತೆ ನಡೆದರೂ ಮನೆಯ ಒಳಗೆ.
ಇಬ್ಬರೂ ಹೋಟೇಲ್ ಅಷ್ಟು ಇಷ್ಟ ಪಡುವವರಲ್ಲ. ಆದರೆ ಅವಿನಾಶ್ ಗೆ ದಾವಣಗೆರೆ ಬೆಣ್ಣೆ ದೋಸೆ ಎಂದರೆ ಸ್ವಲ್ಪ ಅಕ್ಕರಾಸ್ತೆ. ಯಾವಾಗಲಾದರೂ ಒಮ್ಮೆ ಹತ್ತಿರದ ಹೋಟೆಲ್ ನಿಂದ ಪಾರ್ಸೆಲ್ ತರುವಾಗ ಮಹೇಶ್ ಮನೆಗೂ ಮರೆಯದೇ ತರುತ್ತಿದ್ದರು.
ಒಮ್ಮೆ ಮಹೇಶ್ ಪುರಸೊತ್ತು ಮಾಡಿಕೊಂಡು ಅವಿನಾಶ್ ಬಳಿ ಬೆಣ್ಣೆ ದೋಸೆ ಯ ಕರ್ಮಕಾಂಡವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ತದನಂತರ ಅವಿನಾಶ್ ಗೆ ಬೆಣ್ಣೆ ದೋಸೆ ಮೇಲೆ ಸಂಪೂರ್ಣ ಅಸಹ್ಯ. ಮತ್ತೆಂದೂ ಕನಸಿನಲ್ಲೂ ಸ್ಮರಿಸಲಿಲ್ಲ.
ಮಕ್ಕಳು ಬೆಳೆದು ದೊಡ್ಡವರಾದಂತೆ ಅವಿನಾಶ್ ಮನೆಯ ವಾತಾವರಣವೂ ನಿಧಾನವಾಗಿ ಬದಲಾವಣೆ ಹೊಂದಲಾರಂಭಿಸಿತ್ತು. ಈ ನಡುವೆ ಮಹೇಶ್ ತಾನಿದ್ದ ಬಾಡಿಗೆ ಮನೆಯನ್ನು ಬಿಡಬೇಕಾಗಿ ಬಂತು.
ಆಗಿದ್ದಿಷ್ಟು. ಮಹೇಶ್ ಸುಮಾರು ನಾಲ್ಕು ವರ್ಷಗಳ ಕಾಲ ಆ ಮನೆಯಲ್ಲಿ ಬಾಡಿಗೆಗೆ ಇದ್ದ. ಎಂದೂ ಬಾಡಿಗೆಯನ್ನು ಪ್ರತಿ ತಿಂಗಳು ಒಂದನೇ ತಾರೀಖು ಇಲ್ಲವೇ ಅಬ್ಬಬ್ಬಾ ಎಂದರೆ ಎರಡನೇ ತಾರೀಖು ಕೊಟ್ಟು ಬಿಡುತ್ತಿದ್ದ. ಮನೆಯೊಡತಿಯ ಮಗಳು ಮಹೇಶ್ ಬಾಡಿಗೆಗೆ ಬಂದಾಗ ಏಳನೇ ತರಗತಿಯಲ್ಲಿ ಓದುತ್ತಿದ್ದಳು. ಮಹೇಶ್ ಆ ಮಗುವಿಗೆ ದಿನವೂ ತನ್ನ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದಮೇಲೆ ಗಣಿತ ವಿಜ್ಞಾನಗಳನ್ನು ಉಚಿತವಾಗಿ ಓನರಮ್ಮನ ಮಗಳು ಎನ್ನುವ ಮುಲಾಜಿಗೆ ಹೇಳಿಕೊಡುತ್ತಿದ್ದ. ಮಹೇಶ್ ಮನೆಗೆ ಬಂದ ಐದನೇ ವರ್ಷ ಓನರಮ್ಮನ ಮಗಳು ಹತ್ತನೇ ತರಗತಿ ಮುಗಿಸಿ ಕಾಲೇಜಿಗೆ ಹೋಗಲಾರಂಭಿಸಿದಳು.
ಐದನೇ ವರ್ಷ ಓನರಮ್ಮನ ತಂಗಿಯೂ ಜೊತೆಗೆ ಬಂದು ಇರಲಾರಂಭಿಸಿದಳು. ನಿಧಾನವಾಗಿ ಅಕ್ಕನ ತಲೆ ತಿರುಗಿಸಲಾರಂಭಿಸಿದಳು. ಓನರಮ್ಮನ ತಲೆ ತಿರುಗಿದುದದರ ಪ್ರಭಾವ ಮಹೇಶ್ ಮೇಲೆ ಆಯಿತು. ಸಣ್ಣ ಕಾರಣವೊಂದನ್ನು ಗುಡ್ಡದಷ್ಟು ಮಾಡಿ ಜೋರು ಗಲಾಟೆ ಮಾಡಲಾರಂಭಿಸಿದಳು. ಆಗ ಅವಿನಾಶ್ ಮಹೇಶ್ ನೆರವಿಗೆ ಬಂದು ಅನವಶ್ಯಕವಾಗಿ ಓನರಮ್ಮ ಹಿಂಸೆ ಕೊಟ್ಟರೆ ತನಗೆ ತಿಳಿಸುವಂತೆ ಹೇಳಿದ. ತನಗೆ ಕೆಲವು ಪೋಲೀಸ್ ವರಿಷ್ಠರೇ ಗೊತ್ತಿದ್ದಾರೆ ಸಹಾಯ ಮಾಡುತ್ತೇನೆ ಹೆದರಬೇಡಿ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದ.
ಆ ಸಮಯಕ್ಕೆ ಸರಿಯಾಗಿ ಇನ್ನೊಂದು ಮನೆಯೂ ಸಿಕ್ಕಿ ಮಹೇಶ್ ಈ ಮನೆ ಬಿಟ್ಟು ಹೊಸ ಮನೆಗೆ ಪತ್ನಿ ಮತ್ತು ಮಗುವಿನ ಜೊತೆಗೆ ಕಾಲಿಟ್ಟ. ಅಲ್ಲಿಂದ ಮುಂದೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳ ನಂತರ ಭೇಟಿಯಾಗುವ ಮಟ್ಟದಲ್ಲಿ ಬದಲಾಯಿತು.
ಮಹೇಶ್ ಹೊಸ ಮನೆಗೆ ಕಾಲಿಟ್ಟ ಘಳಿಗೆ ಎರಡೇ ವರ್ಷಗಳಲ್ಲಿ ಅವಿನಾಶ್ ಮನೆಯಿಂದ ಅನತಿ ದೂರದಲ್ಲಿ ಸಣ್ಣ ನಿವೇಶನ ಒಂದನ್ನು ಖರೀದಿಸುವ ಯೋಗ ಕೂಡಿಬಂತು. ಮಹೇಶ್ ನ ಇನ್ನೋರ್ವ ಸ್ನೇಹಿತರು ತಾವೇ ಸ್ವತಃ ಮುಂದೆ ನಿಂತು ಮನೆಕಟ್ಟಲು ಬ್ಯಾಂಕ್ ಸಾಲವನ್ನೂ ಕೊಡಿಸಿಬಿಟ್ಟರು.
ಮಹೇಶ್ ನ ಮನೆ ಕಟ್ಟಿಸುವ ಕೆಲಸ ಭರದಿಂದ ಸಾಗಿತ್ತು. ಮಹೇಶ್ ಗೆ ಮಧ್ಯೆ ಹಣದ ಮುಗ್ಗಟ್ಟಾಯ್ತು. ಎಲ್ಲರನ್ನೂ ಕೇಳುವಂತೆ ಅವಿನಾಶ್ ನ್ನೂ ಬಹಳ ಸಂಕೋಚ ಪಟ್ಟುಕೊಂಡೇ ಹಣದ ಸಾಲ ಕೇಳಿದ . ಅದಕ್ಕೆ ತಗಲುವ ಬಡ್ಡಿಯನ್ನು ಕೂಡಾ ನೀಡುವೆನೆಂದ. ಅವಿನಾಶ್ " ಕ್ಷಮಿಸಿ ಮಹೇಶ್, ನನಗೆ ಬಡ್ಡಿಗೆ ದುಡ್ಡು ಕೊಟ್ಟು ಅಭ್ಯಾಸ ಇಲ್ಲ. " ಎಂದ. ಮಹೇಶ್ ಏನೇ ಸಮಜಾಯಿಷಿ ನೀಡಲೆಂದು ಹೋದರೂ ಅವಿನಾಶ್ ಕೇಳಲಿಲ್ಲ. ಅಯ್ಯೋ ನನ್ನ ಒಂದು ಮಾತು ನಮ್ಮಿಬ್ಬರ ಸ್ನೇಹವನ್ನೇ ಹಾಳುಗೆಡವಿತಲ್ಲಾ ಎಂದು ಯೋಚಿಸಿ ಮರುಗಿದ.
ಮಾರನೆಯ ದಿನವೇ ಅವಿನಾಶ್ ಮಹೇಶ್ ನನ್ನು ಮನೆಗೆ ಕರೆದು " ನಾನು ಹೇಳಿದ್ದನ್ನು ನೀವು ಹೇಗೆ ಭಾವಿಸಿದಿರೋ ಏನೋ ? ನಾನು ಬಡ್ಡಿ ವ್ಯಾಪಾರ ಮಾಡುವವನಲ್ಲ ಎನ್ನುವುದನ್ನು ಹೀಗೆ ಹೇಳಿದೆ ಅಷ್ಟೇ. ಇನ್ನೊಂದು ಮಾತು. ದಯವಿಟ್ಟು ಮಾರ್ಚ್ ತಿಂಗಳ ಕೊನೆಯೊಳಗೆ ನನ್ನ ಹಣವನ್ನು ಮರಳಿಸದರೆ ಸಾಕು. ನನಗೆ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಅವಶ್ಯಕತೆ ಬೀಳುತ್ತದೆ ಅದಕ್ಕೆ ಅಷ್ಟೇ"ಎಂದ.
ಮಹೇಶ್ ಗೆ ಹಣಕ್ಕಿಂತ ಹೆಚ್ಚಾಗಿ ಸ್ನೇಹ ಸಂಬಂಧ ಉಳಿಯಿತಲ್ಲ ಎಂದು ಸಮಾಧಾನ ಹೊಂದಿ ಖಂಡಿತಾ ಮರಳಿಸುತ್ತೇನೆ. ಸಾಧ್ಯವಾದರೆ ಸಂಪೂರ್ಣ ಹಣವನ್ನೂ ಮರಳಿಸಲು ಪ್ರಯತ್ನಿಸುತ್ತೇನೆಂದು ಮಾತು ಕೊಟ್ಟ.
ಮಹೇಶ್ ನ ಮನೆ ಸಂಪೂರ್ಣಗೊಂಡಿತ್ತು. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಮಹೇಶ್ ದಂಪತಿಗಳು ಕುಳಿತು ಲೆಕ್ಕ ಹಾಕಿ ಎಲ್ಲಾ ಖರ್ಚು ಹೋಗಿ ಎಷ್ಟು ಹಣ ಉಳಿದಿದೆ ಎಂದು ನೋಡಿ ಮೊದಲು ಮಾಡಿದ ಕೆಲಸವೆಂದರೆ ಯಾರ್ಯಾರು ಕೈಸಾಲ ನೀಡಿದ್ದರೋ ಅವರುಗಳಿಗೆ ಯಥಾಶಕ್ತಿ ಸಾಲ ಮರುಪಾವತಿ ಮಾಡಿದ್ದು. ಕೆಲವರಂತೂ ನನಗೆ ಈಗ ಸದ್ಯಕ್ಕೆ ಬೇಡ. ನಿಮ್ಮಲ್ಲಿಯೇ ಇರಲಿ ನಾನು ಮುಂದೆ ಬೇಕೆಂದಾಗ ಕೇಳುತ್ತೇನೆ ಎಂದಾಗ ಮಹೇಶ್ ಆ ಹಣವನ್ನೂ ಸೇರಿಸಿದಾಗ ಅವಿನಾಶ್ ನಿಂದ ಸಾಲ ಪಡೆದುದಕ್ಕಿಂತ ಇನ್ನೂ ಹೆಚ್ಚಿನ ಮೊತ್ತವೇ ಆಗಿತ್ತು. ತಕ್ಷಣವೇ ಅವಿನಾಶ್ ಮನೆಗೆ ತೆರಳಿ ಎಲ್ಲಾ ರೀತಿಯ ಸಹಾಯ ಮಾಡಿದ್ದಕ್ಕೆ ಹೃತ್ಪೂರ್ವಕ ಕೃತಜ್ಞತೆ ತಿಳಿಸಿ ಅವಿನಾಶ್ ನಿಂದ ಪಡೆದ ಸಾಲವನ್ನು ಸಂಪೂರ್ಣವಾಗಿ ಮರಳಿಸಿಬಿಟ್ಟ.
ಅವಿನಾಶ್ ಚಕಿತನಾಗಿ ಹೋದ. " ಮಹೇಶ್, ನನ್ನ ಇಷ್ಟು ವರ್ಷಗಳ ಅನುಭವದಲ್ಲಿ ನಾನು ಕೇಳದೆಯೇ ಅವಧಿಗೂ ಬಹಳ ಮುನ್ನವೇ ಮರಳಿಸಿದವರಲ್ಲಿ ನೀವೇ ಮೊದಲು. ನೀವು ಸಾಲ ಕೇಳಿದಾಗ ಸ್ವಲ್ಪ ಬೇಸರವಾಗಿತ್ತು. ಪರಿಚಯ ಇದೆ ಎಂದ ಮಾತ್ರಕ್ಕೆ ಸಾಲ ಕೇಳುವುದು ಸರಿಯಲ್ಲ ಎನಿಸಿತ್ತು. ಆದರೆ ಏಕೋ ಕೊಟ್ಟು ನೋಡುವ ಮನಸ್ಸಾಯಿತು. ಮನಸ್ಸಿಲ್ಲದ ಮನಸ್ಸಿನಿಂದಲೇ ಕೊಟ್ಟಿದ್ದೆ. ನಿಮ್ಮ ಈ ಸ್ವಭಾವ ನನಗೆ ನಿಮ್ಮ ಮೇಲೆ ಗೌರವವನ್ನು ಹೆಚ್ಚಿಸಿದೆ " ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ.
ಮಹೇಶ್ "ಅದರಲ್ಲಿ ನನ್ನ ವಿಶೇಷತೆ ಏನೂ ಇಲ್ಲ ಸಾರ್. ಕೆಲಸ ಮುಗಿದ ಮೇಲೆ ಉಳಿದ ಹಣವನ್ನು ಇಟ್ಟುಕೊಂಡು ನಾನು ಸಾಧಿಸುವುದಾದರೂ ಏನಿದೆ? ನನ್ನ ಅವಶ್ಯಕತೆ ತೀರಿದ ಮೇಲೆ ನಿಮ್ಮ ಹಣವನ್ನು ನಿಮಗೆ ಮರಳಿಸುವುದು ನ್ಯಾಯ , ಧರ್ಮ. ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ. ದೊಡ್ಡ ಮನಸ್ಸು ನಿಮ್ಮದು ಅದಕ್ಕೇ ಹೀಗೆ ಹೊಗಳುತ್ತಿದ್ದೀರಿ " ಎಂದು ಹೇಳಿ ಅವರಿಂದ ಬೀಳ್ಕೊಂಡ.
ಕಾಲ ಉರುಳಿತು. ಅವಿನಾಶ್ ನ ಮಕ್ಕಳು ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಬಂದರು. ನಳಿನಿ ತಾನು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ವರ್ಷಗಳೇ ಆಗಿದ್ದವು .ಅವಿನಾಶ್ ತಾನು ಕೆಲಸ ಮಾಡುವ ಕಂಪನಿಗೆ ರಾಜೀನಾಮೆ ನೀಡಿ ತನ್ನದೇ ಹೊಸದೊಂದು ಬಿಸಿನೆಸ್ ಶುರು ಮಾಡಿದ. ಮಗನ ಬಗ್ಗೆ ಅಪಾರವಾದ ನಿರೀಕ್ಷೆ ಬೆಳೆಸಿಕೊಂಡಿದ್ದನೇನೋ ತಿಳಿಯದು. ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ಅವಿಧೇಯರಾಗಲಾರಂಭಿಸಿದ್ದರು. ಅಪ್ಪ ಹೇಳಿದ ಮಾತನ್ನು ಕೇಳುವುದು ತಮಗೆ ಅವಮಾನಕರ ಎಂಬ ಧೋರಣೆ ಬೆಳೆಸಿಕೊಂಡರು. ಇಬ್ಬರು ಮಕ್ಕಳೂ ಒಂದು ಮಟ್ಟದ ಓದು ಮುಗಿಸಿದರು.
ಅಲ್ಲಿಂದ ಆರಂಭ ಹೊಸ ಅಧ್ಯಾಯ. ಅವಿನಾಶ್ ಬದುಕಿನ ಕಷ್ಟದ ದಿನಗಳು ಅನಾವರಣಗೊಂಡವು.
ಅವಿನಾಶ್ ಬಿಸಿನೆಸ್ ಕೈ ಕೊಡಲಾರಂಭಿಸಿತ್ತು. ಹಣದ ಅವಶ್ಯಕತೆ ಇತ್ತೋ ಏನೋ ಯಾರ ಬಳಿಯೂ ಹೇಳಿಕೊಂಡವನಲ್ಲ. ತನ್ನ ಸಮಸ್ಯೆ ತನಗೆ ಮಾತ್ರ ಎನ್ನುವ ಮನೋಭಾವದವನು. ಸಾಕಷ್ಟು ಪ್ರಮಾಣದಲ್ಲಿ ದುಡಿದು ಮನೆ ಆಸ್ತಿ ಮಾಡಿದ್ದರೂ ಏರುತ್ತಿರುವ ಖರ್ಚುಗಳಿಗೆ ಒಬ್ಬನ ದುಡಿಮೆ ಸಾಲದಾಗಲಾರಂಭಿಸಿತು.
ಮಗಳೂ ದುಡಿಯಲಾರಂಭಿಸಿದಳು. ಅದು ನಾಮ್ಕಾವಾಸ್ತೆಗೆ ಎನ್ನುವಂತೆ. ಹೆಸರಿಗಷ್ಟೇ ಕೆಲಸ. ಆದಾಯ ಅಲ್ಪ. ಜೊತೆಗೆ ಅಪ್ಪನಂತೆ ನಾನೂ ದುಡಿಯುತ್ತಿದ್ದೇನೆ ಎನ್ನುವ ಮದ. ಅಪ್ಪ ಮಗಳು ಯಾವ ವಿಷಯದಲ್ಲಿ ಮಾತು ಆರಂಭಿಸಿದರೂ ಜೋರು ಜಗಳದಲ್ಲಿ ಮುಕ್ತಾಯ.
ಮಗನದ್ದು ಇದಕ್ಕೆ ಭಿನ್ನ ಏನಲ್ಲ. ಅವನೂ ಪಿ..ಜಿ. ಮುಗಿಸಿ ಮನೆಯಲ್ಲಿ ಕೆಲಸವಿಲ್ಲದೇ ಕುಳಿತಿದ್ದ. ಸ್ನೇಹಿತರ ಹುಚ್ಚು ಹುಚ್ಚು ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರುವ ವ್ಯರ್ಥ ಪ್ರಯತ್ನ. ಅದಕ್ಕೆ ಬೇಕಾದ ಬಂಡವಾಳಕ್ಕೆ ಮತ್ತೆ ಅಪ್ಪನ ಶ್ರಮಪಟ್ಟು ಗಳಿಸಿದ ಹಣ ಬಲಿ. ಕೊಟ್ಟರೆ ಮರಳಿಬಾರದಂಥ ನಷ್ಟ. ಕೊಡದಿದ್ದರೆ ತೀರದ ಜಗಳ. ಮಗನ ಸ್ವಂತ ಬಿಸಿನೆಸ್ ನ ಪ್ಲಾನ್ ಕೇಳಿದರೆ ಕೇಳಿದವರು ಹುಚ್ಚರಾಗುವುದು ಖಚಿತ.
ಇದಕ್ಕೆ ಸರಿಯಾಗಿ ಅವಿನಾಶ್ ಕೂಡಾ ಕೆಲವೊಮ್ಮೆ ಆತುರದ ನಿರ್ಧಾರ ಕೈಗೊಂಡು ಮಗನಿಗೆ ಮತ್ತು ಮಗಳಿಗೆ ಅವರ ದುಡಿಮೆಯೊಂದಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದಾದರೆ ಮಾಡಲಿ ಎಂದು ಪ್ರೋತ್ಸಾಹಿಸಿ ಅವರುಗಳ ಒಪ್ಪಿಗೆ ಪಡೆದು ಅವರಿಷ್ಟ ಪಟ್ಟ ಕೋರ್ಸ್ ಗಳಿಗೆ ನೋಂದಾಯಿಸಿ ಸಾವಿರಾರು ರೂಪಾಯಿ ಹಣ ಕಟ್ಟಿ ಬಂದ ಕೆಲವೇ ದಿನಗಳಲ್ಲಿ ಮಕ್ಕಳು ಇಬ್ಬರೂ ಆ ಕೋರ್ಸ್ ನಿಂದ ಲಾಭ ಇಲ್ಲ ಆ ಕೋರ್ಸ್ ಹಾಗೆ ಹೀಗೆ ಎಂದೆಲ್ಲಾ ಹೇಳಿ ಒಂದೆರಡು ತಿಂಗಳು ಹೋಗಿ ನಂತರ ತಿಲಾಂಜಲಿ ನೀಡಿದರು.
ಇದೆಲ್ಲವೂ ಮಹೇಶ್ ನ ಅರಿವಿಗೆ ಬಂದಾಗ ತಾನೇ ಸ್ವಯಿಚ್ಛೆಯಿಂದ ಇಬ್ಬರು ಮಕ್ಕಳಿಗೂ ಬುದ್ಧಿ ಹೇಳುವ ಪ್ರಯತ್ನ ಮಾಡಿದ. ಎಲ್ಲೋ ರಾಗ ಶೃತಿ ತಪ್ಪುತ್ತಿದೆ ಎನ್ನಿಸಿ ಮನೆಮಂದಿಯನ್ನೆಲ್ಲಾ ಮಹೇಶ್ ಕಷ್ಟಪಟ್ಟು ಕೌನ್ಸೆಲಿಂಗ್ ಗೆ ಹಲವಾರು ಬಾರಿ ಕರೆದೊಯ್ದರೂ ಏನೂ ಫಲಕಾರಿಯಾಗದೆ ಮಹೇಶ್ ಕೈಚೆಲ್ಲಿದ . ಮಕ್ಕಳ ಬಾಯಿಂದ ಬಂದ ಮಾತುಗಳು ಮಹೇಶ್ ನ ಮನಸ್ಸಿಗೆ ಘಾಸಿಯುಂಟುಮಾಡಿದವು. ದಯವಿಟ್ಟು ಕ್ಷಮಿಸಿ ಮಕ್ಕಳೇ ಎಂದಷ್ಟೇ ಹೇಳಿ ನಿರ್ಗಮಿಸಿದ.
ಬೆಳೆದ ಮಗನನ್ನು ಎದುರು ಹಾಕಿಕೊಳ್ಳಲು ಇಷ್ಟವಿಲ್ಲದೇ ಅವಿನಾಶ್ ಲಕ್ಷಾಂತರ ರೂಪಾಯಿಗಳನ್ನು ಪೋಲು ಮಾಡಿಕೊಂಡ. ಹೋಗಲಿ ಮಗನೇನಾದರೂ ಗಂಭೀರವಾಗಿ ದುಡಿಮೆ ಮಾಡಲಾರಂಭಿಸಿದನೇ? ಅದೂ ಇಲ್ಲ. ಸಾಲದ್ದಕ್ಕೆ ಮನೆ ಮುಂದೆ ರಾತ್ರಿ ಎರಡರವರೆಗೆ ಮಗ, ಮಗಳು ಅವರ ಸ್ನೇಹಿತರು ಸೇರಿ ದಿನಾ ಆಟ. ಗಲಾಟೆ. ಅಕ್ಕ ಪಕ್ಕದ ಮನೆಯವರು ನೇರವಾಗಿಯೇ ನಳಿನಿಗೆ ದೂರಿತ್ತರೂ ಫಲ ನಿಷ್ಫಲ. ನಳಿನಿ ಮಕ್ಕಳಿಗೆ ಏನೂ ಹೇಳುತ್ತಿರಲಿಲ್ಲ. ಹೇಳಿದರೂ ಆ ಮಕ್ಕಳು ಕೇಳುತ್ತಲೂ ಇರಲಿಲ್ಲ.
ನಳಿನಿ ಯಾರನ್ನೂ ತಿದ್ದಲು ಆಗದೇ ಮನಸ್ಸೂ ಮಾಡದೇ ಮನೆಬಿಟ್ಟು ಹೊರಗೆ ತಿರುಗಲಾರಂಭಿಸಿದಳು. ಯಾವುದೋ ಸಂಘಗಳಲ್ಲಿ ಸದಸ್ಯೆಯಾಗಿ ಸಾಕಷ್ಟು ಸಮಯ ಹೊರಗೇ ಕಳೆಯಲಾರಂಭಿಸಿದಳು. ಕೆಲವೇ ದಿನಗಳಲ್ಲಿ ಅದರ ತೆವಲು ಚೆನ್ನಾಗಿ ಮೈಗೂಡಿಬಿಟ್ಟಿತು. ಮಕ್ಕಳು ಸ್ಕೂಲು ಕಾಲೇಜುಗಳಲ್ಲಿ ಓದುವಾಗ ಪಕ್ಕದಲ್ಲಿಯೇ ಕುಳಿತು ಗಮನಿಸುತ್ತಾ ಇದ್ದ ನಳಿನಿ ಇದೀಗ ದಿನಕ್ಕೊಂದು ಬಾರಿ ಮಕ್ಕಳನ್ನು ಭೇಟಿ ಮಾಡಲಾರಂಭಿಸಿದಳು.
ಮಕ್ಕಳೂ ಕೂಡಾ ಬೇಜವಾಬ್ದಾರಿಯನ್ನು ಚೆನ್ನಾಗಿ ಮೈಗೂಡಿಸಿಕೊಂಡು ಬೆಳೆಯಲಾರಂಭಿಸಿದರು. ಅವಿನಾಶ್ ಗೆ ಮಕ್ಕಳು ತನ್ನ ಮಾತು ಕೇಳದ ಹೆಂಡತಿ ಮಕ್ಕಳ ಮೇಲೆ ಒಂದು ರೀತಿಯ ಕೋಪವಲ್ಲದೇ ಮಕ್ಕಳು ನಳಿನಿಯ ಮಾತು ಕೇಳುತ್ತಾರೆ ಎನ್ನುವ ಉರಿ. ಬೆಳೆದ ಮಕ್ಕಳು ಅಚ್ಚುಕಟ್ಟಾಗಿ ದುಡಿಮೆ ಮಾಡಿಕೊಂಡು ಬದುಕುವುದನ್ನು ಕಲಿಯುವುದನ್ನು ನೋಡಲು ಯಾವ ತಂದೆಗೆ ಇಷ್ಟವಿರದು? ಆದರೆ ಮಕ್ಕಳಿಗೆ ಇಂಥಾ ಯಾವ ಉಪದೇಶಗಳೂ ರುಚಿಸದಾದವು.
ಗಳಿಸಿಟ್ಟಿ ಆಸ್ತಿಗಳು ಒಂದೊಂದೇ ಕೈಬಿಟ್ಟು ಹೋಗಲಾರಂಭಿಸಿದ್ದವು. ಅವಿನಾಶ್ ನ ತಮ್ಮ ವಿದೇಶಕ್ಕೆ ಕೆಲಸದ ನಿಮಿತ್ತ ತೆರಳಿದಾಗ ಅಲ್ಲಿಯೇ ಅಪಘಾತದಲ್ಲಿ ಸಾವನ್ನಪ್ಪಿದ. ತಮ್ಮನ ಹೆಣವನ್ನು ಇಲ್ಲಿಗೆ ತರಲೂ ಕೂಡಾ ಅವಿನಾಶ್ ಒಬ್ಬನೇ ಒದ್ದಾಡಬೇಕಾಯಿತು. ಪರಿಣಾಮ ವಿಪರೀತ ಮರಳಿಬಾರದಂಥ ಖರ್ಚು.
ಈಗಂತೂ ಮನೆಯಲ್ಲಿ ಎಲ್ಲಾ ಕುಳಿತು ತಿನ್ನುವವರೇ. ಅವಿನಾಶ್ ಆದಾಯಕ್ಕೆ ಕೆಲವು ದಾರಿಗಳನ್ನು ಮಾಡಿಕೊಂಡಿದ್ದರಿಂದ ಜೀವನ ಹೇಗೋ ಸಾಗುತ್ತಿತ್ತು. ದಿನೇದಿನೇ ಅವಿನಾಶ್ ಮನಸ್ಸು ಹತಾಶೆ ಜಿಗುಪ್ಸೆಗಳ ಗೂಡಾಗಲಾರಂಭಿಸಿತ್ತು. ಮಕ್ಕಳು ತಪ್ಪು ದಾರಿಯಲ್ಲಿ ನಡೆಯುತ್ತಿರುವುದು ನಿಚ್ಚಳವಾಗಿ ತೋರುತ್ತಿದ್ದರೂ ಏನೂ ಮಾಡಲಾಗದ ನಿಸ್ಸಹಾಯಕ ಸ್ಥಿತಿ ತಲುಪಿದ. ಕೈಹಿಡಿದವಳು ಮನೆಯ ಉದ್ಧಾರ ನಿರ್ಲಕ್ಷಿಸಿ ಊರಿನುದ್ಧಾರಕ್ಕೆ ನಿಂತಿರುವುದು ಅವನಿಗೆ ನುಂಗಲಾರದ ತುತ್ತಾಗಿತ್ತು. ಅದರ ಬಗ್ಗೆ ಅವಿನಾಶ್ ನಿಂದ ಯಾವ ಪ್ರತಿಕ್ರಿಯೆಯನ್ನೂ ಕೇಳಿಸಿಕೊಳ್ಳದವಳಾಗಿದ್ದಳು. ಅವಳಿಗೆ ನಾಲ್ಕು ಜನ ಹೊಗಳಿದರೆ ಅಟ್ಟಕ್ಕೇರುವವಳಾಗಿದ್ದಳು.
ಮನೆ ಮನೆಯಾಗಿರಲಿಲ್ಲ. ಎಲ್ಲರೂ ಒಟ್ಟಾಗಿ ಸೇರಿದಾಗ ಅಂದರೆ ರಾತ್ರಿ ಊಟದ ಸಮಯದಲ್ಲಿ ಜಗಳ ಗಲಾಟೆಗಳ ಯುದ್ಧ ಭೂಮಿ ಎನ್ನಬಹುದಾಗಿತ್ತು. ಯಾರಾದರೂ ಸರಿಯೇ ಅವಿನಾಶ್ ನ ಮಕ್ಕಳ ಬೇಜವಾಬ್ದಾರಿ ಮಾತುಗಳನ್ನು ಕೇಳಿದರೆ ಕಪಾಳಮೋಕ್ಷ ಮಾಡುವಷ್ಟು ಕೋಪ ಬರುತ್ತಿತ್ತು. ಅಷ್ಟು ಉದ್ಧಟರಾಗಿ ಹೋಗಿದ್ದರೆಂದರೆ ತಪ್ಪಾಗಲಾರದು.
ಅವಿನಾಶ್ ಮನೆಯಲ್ಲಿ ಈ ಪರಿಸ್ಥಿತಿ ಸುಮಾರು ನಾಲ್ಕೈದು ವರ್ಷಗಳಿಂದ ಬೇರುಬಿಟ್ಟಿತ್ತು. ಈ ವಿಷಯ ತಿಳಿದ ಮಹೇಶ್ ಪರೋಕ್ಷವಾಗಿ ಅವಿನಾಶ್ ಜೊತೆಗೆ ಮಾತನಾಡಲಾರಂಭಿಸಿದಾಗ ಅವಿನಾಶ್ ನ ನಿಸ್ಸಹಾಯಕ ಸ್ಥಿತಿ , ಉಕ್ಕಿ ಬರುವ ಅಳು , ಆ ನೋಟದಲ್ಲಿ.ಮನೆಮಾಡಿದ ವೇದನೆಗಳನ್ನು ನೋಡಲಾರದೇ ವಿಷಯಾಂತರ ಮಾಡಿಬಿಡುತ್ತಿದ್ದ. ಅವಿನಾಶ್ ಗೆ ತಿಳಿಯದಂತೆ ಮಹೇಶ್ ತನ್ನ ಬುದ್ಧಿಗೆ ನಿಲುಕಿದ ಪರಿಹಾರಗಳನ್ನೆಲ್ಲಾ ಮಾಡಿದನಾದರೂ ಪರಿಣಾಮ ಶೂನ್ಯ.
ಅವಿನಾಶ್ ದೈಹಿಕವಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವುದು ಮಹೇಶ್ ಗೆ ತಾಳಿಕೊಳ್ಳಲಾರದ ನೋವಾಗಿತ್ತು. ಏನಾದರೂ ಮಾಡೋಣವೆಂದರೆ ಸಂಪೂರ್ಣ ನಿರುಪಾಯ ಸ್ಥಿತಿ. ಆರು ತಿಂಗಳ ಹಿಂದೆ ಅವಿನಾಶ್ ನನ್ನು ಮಹೇಶ್ ಭೇಟಿಯಾದಾಗ ಅವಿನಾಶ್ ಮೂಳೆಯ ಹಂದರವಾಗಿ ಹೋಗಿದ್ದ. ಉಕ್ಕಿ ಬರುವ ಕಣ್ಣೀರನ್ನು ತೊಡೆದುಕೊಳ್ಳುತ್ತಾ ಮಹೇಶ್ ಅವಿನಾಶ್ ಜೊತೆಗೆ ಮಾತನಾಡಲಾರಂಭಿಸಿದಾಗ ಅವಿನಾಶ್ " ಮಹೇಶ್ ನನ್ನ ಹಣೆಯಲ್ಲಿ ಬರೆದುದನ್ನು ಅಳಿಸಲು ಆ ಭಗವಂತನಿಗೇ ಅಸಾಧ್ಯವಾಗಿರುವಾಗ ನಾನು ಯಃಕಶ್ಚಿತ್ ನರಮಾನವ. ಅನುಭವಿಸಲೇಬೇಕು. ಎಲ್ಲಿಯವರೆಗೆ? ಸಾಯುವವರೆಗೆ ತಾನೇ ? ಆಮೇಲೆ ? ಏನಿಲ್ಲವಲ್ಲ? ಎಂದು ತನ್ನ ವಿಚಿತ್ರ ಹಾಸ್ಯಕ್ಕೆ ತಾನೇ ಪೇಲವದ ನಗೆ ನಕ್ಕು ಮಂತ್ರದ ಕ್ಲಾಸ್ ಗೆ ಹೋಗುತ್ತಿದ್ದೇನೆಂದು ತಿಳಿಸಿ ಹೊರಟೇ ಹೋದ.
ಮನೆಗೆ ಬಂದ ಮಹೇಶ್ ಪತ್ನಿಯ ಜೊತೆಗೆ ಚರ್ಚಿಸಿದ. ಅವಳು ತನಗೆ ಎಲ್ಲವೂ ಗೊತ್ತು. ಈಗ ಅವರ ಕುಟುಂಬದಲ್ಲಿ ಬದಲಾವಣೆ ಕಷ್ಟ ಸಾಧ್ಯ. ಏಕೆಂದರೆ ಯಾರೂ ಯಾರ ಮಾತನ್ನೂ ಕೇಳುವ ಸ್ಥಿತಿ ಮೀರಿಯಾಗಿದೆ. ಯಾರ ಉಪದೇಶವೂ ಅವರುಗಳ ಮನಸ್ಸಿಗೆ ಇಳಿಯುವುದು ಕಷ್ಟ. ದೇವರೇ ಏನಾದರೂ ದಾರಿತೋರಬೇಕಷ್ಟೇ ಎಂದಳು. ಮಹೇಶ್ ಗೂ ಸರಿ ಎನ್ನಿಸಿತು.
ಎರಡು ದಿನಗಳ ಹಿಂದೆ ಮಹೇಶ್ ನ ಪತ್ನಿಗೆ ಇದ್ದಕ್ಕಿದ್ದಂತೆ ಫೋನ್ ಕಾಲ್ ಬಂತು. ಅವಳು ಕ್ಷಣಕಾಲ ನಿಶ್ಚೇಷ್ಟಿತಳಾದಳು. ಎದುರಲ್ಲೇ ಕುಳಿತಿದ್ದ ಮಹೇಶ್ ಗಾಬರಿಯಿಂದ ವಿಚಾರಿಸಿದಾಗ.ಅಳುತ್ತಾ ಅವಿನಾಶ್ ಮರಣಿಸಿದ ವಿಷಯ ತಿಳಿಸಿದಳು. ಮಹೇಶ್ ಗೆ ಕಣ್ಣು ಕತ್ತಲಿಟ್ಟಂತಾಯಿತು. ತಕ್ಷಣವೇ ಸಾವರಿಸಿಕೊಂಡು ಮಹೇಶ್ ದಂಪತಿಗಳು ಅವಿನಾಶ್ ಮನೆಗೆ ಭೇಟಿ ನೀಡಿದರು.
ಅವಿನಾಶ್ ನ ಶವ ಹೊರಗೆ ವೆರಾಂಡದಲ್ಲಿ ಇಡಲ್ಪಟ್ಟಿದೆ. ಮುಖದಲ್ಲಿ ಎಂಥದೋ ವಿಲಕ್ಷಣ ತೃಪ್ತ ಭಾವ. ಕಡೆಗೂ ಈ ಜಂಜಾಟಗಳಿಂದ ಮುಕ್ತಿ ಸಿಕ್ಕಿದ್ದಕ್ಕೆ ದೇವನಿಗೆ ಕೃತಜ್ಞತೆ ಸಲ್ಲಿಸಿದ ಭಾವ. ನಳಿನಿ ಜೋರಾಗಿ ಅಳುತ್ತಿದ್ದಾಳೆ. ಮಗಳೂ ಅಳುತ್ತಿದ್ದಾಳೆ. ಮಗ ಅತ್ತು ಕಣ್ಣು ಕೆಂಪಾಗಿವೆ. ಇದೆಲ್ಲ ಹೇಗಾಯಿತು ಎಂದು ವಿಚಾರಿಸಿದಾಗ ಸಂಜೆ ಐದರ ವೇಳೆ ವಾಕಿಂಗ್ ಗೆ ತೆರಳಿದ್ದನಂತೆ. ಇದ್ದಕ್ಕಿದ್ದಂತೆ ತಲೆ ತಿರುಗಿದಂತಾಗಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ಪರಿಣಾಮ ಕೂಡಲೇ ಪ್ರಜ್ಞಾಹೀನನಾಗಿದ್ದಾನೆ. ಅಲ್ಲಿಯೇ ಹತ್ತಿರ ಇದ್ದವರ್ಯಾರೋ ಆಂಬುಲೆನ್ಸ್ ಗೆ ಫೋನ್ ಮಾಡಿ ಹತ್ತಿರವಿದ್ದ ಅಸ್ಪತ್ರೆಗೆ ಒಯ್ಯುವ ವೇಳೆಗೆ ಸಾವು ಸಂಭವಿಸಿದೆ ಎಂಬ ವಿಷಯ ತಿಳಿಯಿತು.
ಮಹೇಶ್ ನ ಕಣ್ಣಿಂದ ಕಣ್ಣೀರು ಧಾರಾಕಾರವಾಗಿ ಹರಿದು ಹೋಗುತ್ತಿದೆ. ನಳಿನಿ " ನೋಡಿ , ಹೇಗೆ ನಮ್ಮನ್ನು ಬಿಟ್ಟೇ ಹೋದರು. ಹೀಗೆ ಮಾಡಬಹುದೇ " ಎಂದು ಮಹೇಶ್ ನ ನೋಡಿ ಗೋಳಿಡುತ್ತಾ ಹೇಳಿದಳು. ಮಗಳೂ ನಾನು ಬದುಕಿರುವುದಿಲ್ಲ. ನಾನೂ ಅಪ್ಪನ ಜೊತೆಗೆ ಹೋಗುತ್ತೇನೆ ಎಂದೆಲ್ಲಾ ದುಃಖದಲ್ಲಿ ಬಡಬಡಿಸಲಾರಂಭಿಸಿದ್ದಳು.
" ಬಾಯಿ ಮುಚ್ಚಿ. ನಾಯಿಗಳಾ, ನಿಮ್ಮಂಥವರಿಗೆ ಮನೆ ಏಕೆ? ಅಪ್ಪ ಏಕೆ? ನಿಮ್ಮ ನಿಮ್ಮ ಸ್ವಪ್ರತಿಷ್ಠೆಗಳೇ ಅತಿಯಾದವಲ್ಲವೇ? ಅಪ್ಪನ ಮಾತು ಕೇಳುವುದಕ್ಕೆ ನಿಮಗಿಬ್ಬರಿಗೂ ನಿಮ್ಮ ಗೌರವಕ್ಕೆ ಧಕ್ಕೆ ಎಂದುಕೊಂಡ ಬೇವರ್ಸಿಗಳು ನೀವು. ದುರಂಹಂಕಾರದಿಂದ ಮೆರೆದಿದ್ದೂ ಅಲ್ಲದೆ ನನ್ನ ಬಂಗಾರದಂಥ ಸ್ನೇಹಿತನ ಪ್ರಾಣವನ್ನೇ ಬಲಿ ಪಡೆದಿರಲ್ಲಾ. ನೀವಿಬ್ಬರೂ ಮನುಷ್ಯಜಾತಿಯವರಾ? ಏನಮ್ಮಾ ನಳಿನಿ , ನೀನೊಂದು ಹೆಣ್ಣಾ? ಬೀದಿ ಬೀದಿ ಸುತ್ತುತ್ತಾ ಬೆಂದ ಮನೆ ಯಾವುದು ಬೇಯದ ಮನೆ ಯಾವುದು ಎಂದು ಅಲೆಯುತ್ತಾ ನಿನ್ನ ಮನೆಗೇ ಕೊಳ್ಳಿಯಿಟ್ಟು ಬಿಟ್ಟೆಯಲ್ಲಮ್ಮಾ? ಏನು ಸಾಧಿಸಿದೆ ಹೇಳು ? ಸಮಾನತೆ ಸಾಧಿಸಲಿಕ್ಕಾ? ಅಥವಾ ಅವಿನಾಶ್ ಗಿಂತ ನಾನು ಹೆಚ್ಚು ಎಂದು ತೋರಿಸಲಿಕ್ಕಾ? ನಿನ್ನ ಯೋಗ್ಯತೆಗಿಷ್ಟು. ನೀನು ನನ್ನ ಸ್ನೇಹಿತನಿಗೆ ಎಂದೂ ಯಾವತ್ತೂ ಸಮಾನವಾಗಲು ಸಾಧ್ಯವೇ ಇಲ್ಲ. ಈಗ ? ನನ್ನ ಸ್ನೇಹಿತ ಬದುಕಿದ್ದಾಗಲೇ ಚೆನ್ನಾಗಿ ನೋಡಿಕೊಳ್ಳಲಾಗದ ನಿಮ್ಮಂಥವರಿಗೆ ಮದುವೆ ಏಕೆ, ಮನೆ ಏಕೆ, ಮಕ್ಕಳೇಕೆ, ? ದುಡಿದೂ ದುಡಿದೂ ಸಾಯಲಿಕ್ಕೆ ನಿಮಗೆ ಗಂಡ ಅಪ್ಪ ಬೇಕು ಅಲ್ಲವೇ? ಥೋ ನಿಮ್ಮ ಸ್ವಾರ್ಥ ಲಾಲಸೆಗಿಷ್ಟು. ನಿಮಗೇನಾದರೂ ಮನುಷ್ಯತ್ವ ಎನ್ನುವ ಪದದ ಅರ್ಥ ತಿಳಿದಿದ್ದರೆ ನಾಚಿಕೆಯಾಗಬೇಕು " ಎಂದು ಇನ್ನೂ ಏನೆಲ್ಲಾ ಬೈದು ಕ್ಯಾಕರಿಸಿ ಆ ಮೂವರ ಮುಖಗಳಿಗೆ ಉಗಿಯ ಬೇಕೆಂದು ಕೊಂಡ. ಆದರೆ ಉಕ್ಕಿ ಬರುತ್ತಿದ್ದ ದುಃಖ ಗಂಟಲನ್ನು ಕಚ್ಚಿ ಹಿಡಿದು ದನಿ ಹೊರಬರದಂತೆ ತಡೆದಿತ್ತು.
ಈ ದುಃಖದ ನಡುವೆಯೂ ಮಹೇಶ್ ಆಗ ಅಲ್ಲೊಂದು ವಿಷಯ ಗಮನಿಸಿದ. ಆ ಬಡಾವಣೆಯ ಅಕ್ಕ ಪಕ್ಕದ ಮನೆಯವರು , ಮತ್ತು ಅವಿನಾಶ್ ನ ಮೂವರು ಬಂಧುಗಳನ್ನು ಮತ್ತು ಕೆಲವು ಮಂತ್ರದ ತರಗತಿಯ ಸಹಪಾಠಿಗಳನ್ನು ಬಿಟ್ಟರೆ ಇನ್ಯಾರೂ ಕಾಣಲಿಲ್ಲ. ಹಿಂದಿನ ದಿನ ಸಂಜೆ ಸಾವು ಸಂಭವಿಸಿದ್ದು ಮಾರನೆಯ ದಿನ ಹೆಣವನ್ನು ಸಾಗಿಸುವವರೆಗೂ ಅವಿನಾಶ್ ನ ಸಂಬಂಧಿಕರು ಹೆಚ್ಚಿನವರು ಯಾರೂ ಬಂದಂತೆ ಕಾಣಲಿಲ್ಲ. ಕಾರಣ ತಿಳಿದ ಮಹೇಶ್ ಸ್ಥಂಭೀಭೂತನಾಗಿದ್ದ. ತನ್ನ ಕಾಲ ಮೇಲೆ ನಿಂತು ಸ್ವಾಭಿಮಾನಿಯಾಗಿ ಬಾಳುತ್ತಿದ್ದ ಅವಿನಾಶ್ ಕಂಡರೆ ಕೆಲವು ಸಂಬಂಧಿಕರಿಗೆ ಮತ್ಸರವಂತೆ. ಅಬ್ಬಾ ಮನುಷ್ಯನ ಸಾವಿನಲ್ಲೂ ದ್ವೇಷ ವೈಮನಸ್ಸುಗಳನ್ನು ಸಾಧಿಸಬೇಕೆ? ಎನ್ನಿಸಿತು . ದುಃಖದಲ್ಲಿಯೇ ಮಹೇಶ್ ಕಾರ್ಯ ಪ್ರವೃತ್ತನಾದ. ಕೆಲವೆಡೆ ಫೋನ್ ಮಾಡಿ ಶವ ಸಂಸ್ಕಾರಕ್ಕೆ ಮತ್ತು ಮುಂದಿನ ಕಾರ್ಯಗಳಿಗೆ ತಕ್ಕ ಏರ್ಪಾಡು ಮಾಡಿದ.
ಮಹೇಶ್ ಮನಸ್ಸು ನಡುನಡುವೆ ಅವಿನಾಶ್ ಬಗ್ಗೆ ಚಿಂತಿಸಲಾರಂಭಿಸಿತ್ತು. ಆ ಜೀವ ಅದಿನ್ನೆಷ್ಟು ರೋಸಿ ಹೋಗಿರಬಹುದು? ತೀರಾ ಸಾವನ್ನೇ ಅಪ್ಪುವ ಮಟ್ಟಿಗಾ? ಏಕೋ ಆ ಕ್ಷಣಕ್ಕೆ ಏನಿದ್ದರೇನು ಮನಸ್ಸಿಗೆ ಶಾಂತಿ ಸಮಾಧಾನಗಳೇ ಇಲ್ಲದೇ ಇದ್ದರೆ? ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ , ಅಂತ್ಯೇಚ ತವ ಸಾನ್ನಿಧ್ಯಂ ದೇಹಿಮೇ ಕರುಣಾಕರ ಎನ್ನುವ ಅವಿನಾಶ್ ನ ನಿತ್ಯ ಪ್ರಾರ್ಥನೆಗೆ ಆ ದೇವ ಅಸ್ತು ಎಂದಿರಬೇಕು ಎನ್ನಿಸಿತು.
ಅನತಿ ದೂರದಲ್ಲಿ ಡಾ. ರಾಜ್ ಕುಮಾರ್ ಅವರ ಸುಶ್ರಾವ್ಯ ಕಂಠದಲ್ಲಿ ಇದು ಯಾರು ಬರೆದ ಕಥೆಯೋ ಎನ್ನುವ ಗೀತೆ ಕೇಳಿಬರುತ್ತಿತ್ತು.

0 Comments:
Post a Comment
Subscribe to Post Comments [Atom]
<< Home