Thursday, May 9, 2019

ಗಡ್ಡದ ಭೂತ

ಗಡ್ಡದ ಭೂತ

ಸಹೋದ್ಯೋಗಿ ಒಬ್ಬರು ಸಾರ್ ತುಂಬಾ ಕಾಫಿ ಒಳ್ಳೇದಲ್ಲಾ ಸಾರ್ . ಎಲ್ಲಾ ತಿಳಿದಿರೋರು ನಿಮಗೆ ಹೇಳಬೇಕೆ ಎಂದರು .

ಛೇ ಎಂಥಾ ಪರಿಸ್ಥಿತಿ ಬಂತಯ್ಯಾ .

ಹೆಣ್ಣು ಮಕ್ಕಳಿಗೆ ಅರಿಷಿಣ ಕುಂಕುಮ ಹೇಗೋ ನಮಗೆ ಗಂಡುಮಕ್ಕಳಿಗೆ ಕಾಫಿ ಹಾಗೆ.

ಅದನ್ನೇ ಒಳ್ಳೇದಲ್ಲಾ ಎಂದು ಹೇಳಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಸಿದರಲ್ಲಾ ಎಂದು ನನ್ನ ಸಹೋದ್ಯೋಗಿ ಮೇಲೆ ನವಿರಾದ ಅಸಹಾಯಕ ಕೋಪ ಬಂತು .

ತಡೆದು ಕೊಂಡೆ.

ಮನೆಗೆ ಬಂದು ನನ್ನ ಪ್ರಿಯ ಪತ್ನಿಯ ಬಳಿ ನನ್ನ ಸಹೋದ್ಯೋಗಿಯ ಹಿತವಚನ ಹೇಳಿದೆ .

ನಿಮಗೆ ಎಷ್ಟೋ ದಿನಗಳಿಂದ ಹೇಳಬೇಕೆಂದುಕೊಂಡಿದ್ದೆ .

ನನ್ನ ಮಾತು ನೀವೆಲ್ಲಿ ಕೇಳುತ್ತೀರಾ ಎಂದುಕೊಂಡು ಸುಮ್ಮನಾಗಿದ್ದೆ.

ನಿಮಗೆ ಬೇರೆಯವರು ಹೇಳಿದರೇ ಹಿತವಾಗಿರುತ್ತದೆ ಅಲ್ಲವೇ ಎಂದು ಮೂತಿ ತಿವಿದಳು .

ಮನೆಯಲ್ಲಿ ಇವಳದೇ ರಾಜ್ಯ ಭಾರವಾದರೂ ಈ ಮಾತಿಗೇನೂ ಕೊರತೆ ಇಲ್ಲ .

ಇದು ತಲೆಯಲ್ಲಿ ತುರಿಕೆ ಆಯಿತೆಂದು ಉರಿಯುವ ಕೊಳ್ಳಿಯಿಂದ ತಲೆ ತುರಿಸಿಕೊಂಡ ಹಾಗಾಯಿತು .

ಸರಿ. ಇಷ್ಟ ಇಲ್ಲ ದಿದ್ದರೂ ಕಾಫಿಯ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.

ಕೆಲವು ದಿನಗಳ ಬಳಿಕ ರೀ ತುಂಬಾ ಕೋಪ ಒಳ್ಳೆಯದಲ್ಲರೀ.

ಅದು ನಿಮ್ಮ ಹೃದಯದ ಮೇಲೆ ಮೂತ್ರ ಪಿಂಡದ ಮೇಲೆ ಪರಿಣಾಮ ಬೀರುತ್ತದೆ .

ಸಣ್ಣ ಪುಟ್ಟ ವಿಷಯ ಗಳಿಗೂ ಕೋಪ ಮಾಡಿಕೊಳ್ಳುವುದನ್ನು ಆದಷ್ಟೂ ಅವಾಯ್ಡ್ ಮಾಡಿ ಎಂದು ತಾನೂ ಉಪದೇಶಿಸಿದ್ದಲ್ಲದೇ ಮನೆಗೆ ಬಂದಿದ್ದ ಒಬ್ಬ ಡಾಕ್ಟರ್ ಅತಿಥಿಯಿಂದಲೂ ಪ್ರವಚನ ಕೊಡಿಸಿದಳು .

 ತಾನು ಕೋಪ ಮಾಡಿಕೊಳ್ಳುವುದರ ಬಗ್ಗೆ ಚಕಾರ ಕೂಡಾ ಎತ್ತಲಿಲ್ಲ.

ತಾನು ತುಂಬಾ ಸಮಾಧಾನಿ ಎನ್ನುವುದನ್ನು ಆ ಅತಿಥಿ ಡಾಕ್ಟರ್ ಬಾಯಿಂದ ಹೇಳಿಸಿ ಗೆದ್ದು ಬಿಟ್ಟಳು.

 ಹೀಗೆ ನನ್ನ ಜೀವನದಲ್ಲಿ ಅದನ್ನು ಬಿಡು ಇದನ್ನು ಹಿಡಿ ಅದು ಒಳ್ಳೆಯದಲ್ಲಾ ಇದರಿಂದ ಪ್ರಯೋಜನ ಇಲ್ಲ ಎನ್ನುವ ಸಲಹೆಗಳನ್ನು ( ಅನವಶ್ಯಕ ವಾದರೂ ) ಪಡೆಯುತ್ತಾ ಬರುತ್ತಿದ್ದ ನನಗೆ ಇದ್ದಕ್ಕಿದ್ದಂತೆ  ಥೋ ನನ್ನ ಬದುಕಿನಲ್ಲಿ ಸ್ವಾತಂತ್ರ್ಯ ವನ್ನೇ ಕಳೆದುಕೊಂಡು ಸ್ವತಂತ್ರ ಭಾರತದಲ್ಲಿ ಪರತಂತ್ರ ಜೀವಿಯಾಗಿ ಬದುಕುತ್ತಿದ್ದೇನಲ್ಲಾ ಎನ್ನಿಸಲಾರಂಭಿಸಿತ್ತು.

ಇದೇ ಯೋಚನೆಯಲ್ಲೇ ಕಾಲ ಸರಿದು ಬೇಸಿಗೆ ರಜೆ ಆರಂಭವಾಯಿತು.

ಇದ್ದಿದ್ದರಲ್ಲಿ ಸ್ವಲ್ಪ ಮಟ್ಟಿಗೆ ಚೆನ್ನಾಗಿ ಗಡ್ಡ ಬೆಳೆದಿತ್ತು

ಆರಂಭವಾಯಿತು

ಪತ್ನಿಯ ಒಂದೇ ವರಾತ.

ರೀ ಶೇವ್ ಮಾಡಿಕೊಂಡು ಟ್ರಿಮ್ ಆಗಿ ಇರಲು ನಿಮಗೇನು ಧಾಡಿ ? ನೀವು ಗಡ್ಡ ಬಿಟ್ಟರೆ ಎಷ್ಟು ಕೆಟ್ಟದಾಗಿ ಕಾಣುತ್ತೀರ ಗೊತ್ತಾ.

ಯಾವುದಾದರೂ ಫಂಕ್ಷನ್ ಗೆ ಹೋಗಬೇಕೆಂದಾಗ ಹೀಗೆ ಹೋದರೆ ಚೆನ್ನಾಗಿರುತ್ತದಾ ಎಂದು ಎಮೋಷನಲ್ ಬ್ಲಾಕ್ ಮೇಲ್ ಮಾಡಲಾರಂಭಿಸಿದಳು .

ನನ್ನ ದಾಡಿಯ ಮೇಲೆ ನಿನಗೇಕೆ ಕಣ್ಣು 
ಮಾಡಿರುವ ಅಡಿಗೆಯನು ತೆಪ್ಪಗೆ ಉಣ್ಣು
ನನ್ನದೊಂದಾಸೆಯಿದೆ ದಾಡಿಬಿಡಬೇಕು
ಹೇಳು ಅನುಮತಿಗೆಷ್ಟು ಲಂಚ ಕೊಡಬೇಕು

ಎಂದೆ .

ನೀವೇ ಮೆಚ್ಚಿಕೋಬೇಕು ನಿಮ್ಮ ಸಾಯಿತ್ಯವನ್ನು ಎಂದು ಮೂಗು ಮುರಿದಳು

ಕಡೇಪಕ್ಷ ಇದೊಂದು ವಿಷಯದಲ್ಲಾದರೂ ಹೆಂಡತಿಯ ಮಾತನ್ನು ಮೀರಿ ನನ್ನ ಧೈರ್ಯ (?)  ಪ್ರದರ್ಶನ ಮಾಡಲೇಬೇಕು ಎನ್ನುವ ಕೆಟ್ಟ ಹಟಕ್ಕೆ ಬಿದ್ದೆ .

ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ನನ್ನ ಮಗನೂ ಬಂದು ಅಪ್ಪ ಶೇವ್ ಮಾಡಿಕೊಳ್ಳಿ ಚೆನ್ನಾಗಿ ಕಾಣುತ್ತೀರಾ ಎಂದು ಹೇಳಿ ಹೋದ.

ಹೋಗಲೇ ನನ್ನಿಂದ ನೀನು , ನಿನ್ನ ಮಾತನ್ನು ಈ ಸಂದರ್ಭದಲ್ಲಿ ಎಳ್ಳಷ್ಟೂ ಕೇಳುವುದಿಲ್ಲ ಎಂದು ಮನಸ್ಸಿನಲ್ಲೇ ಅಂದುಕೊಂಡೆ .
(ಜೋರಾಗಿ ಆಡಿದರೆ ನನಗೇ ಮರಳುವ ಸಾಧ್ಯತೆ ಹೆಚ್ಚಿದ್ದರಿಂದ )

ಇಷ್ಟೆಲ್ಲಾ ಆದ ಎರಡು ದಿನಗಳ ಬಳಿಕ ಸಂಬಂಧಿಕರ ಮಗನ  ಉಪನಯನ ಮಹೋತ್ಸವ ಇತ್ತು. ತುಂಬಾ ಬಲವಂತ ಮಾಡಿ ಆಹ್ವಾನಿಸಿದ್ದರಿಂದ ಹೋಗಲೇ ಬೇಕಾದ ಪರಿಸ್ಥಿತಿ ಎದುರಾಗಿತ್ತು .

ನನ್ನ ಬಹುದಿನಗಳ ಆಸೆ ಕೈಗೂಡುವ ತಕ್ಕ ಸಮಯ ತಾನಾಗಿಯೇ ಒದಗಿ ಬಂದಿತ್ತು .

ರೀ ಕಡೇದಾಗಿ ಕೇಳ್ತಿದ್ದೀನಿ . ಗಡ್ಡ ತೆಗೀತೀರಾ ಇಲ್ವಾ ಎಂದು ಗೃಹಲಕ್ಷ್ಮಿ ಕೇಳಿದಳು

ದನಿಯನ್ನು ಅವಲೋಕಿಸಿದೆ

ವ್ಯಂಗ್ಯ ಸಿಟ್ಟು ಯಾವುದೂ ಇಲ್ಲದ ಸಾಮಾನ್ಯ ಮಟ್ಟದ ಸಮಾಧಾನದ ದನಿಯಾಗಿತ್ತು.

ನಾನೂ ಇದ್ದ ಬದ್ದ ಧೈರ್ಯ (?) ವನ್ನೆಲ್ಲಾ ಒಗ್ಗೂಡಿಸಿಕೊಂಡು ಡಾಕ್ಟರ್ ರಾಜ್ ಕುಮಾರ್ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಜಯಪ್ರದಾ ರವರನ್ನು ಏಯ್ ಚಿನ್ನಾ ಎನ್ನುತ್ತಾರಲ್ಲ ಅದನ್ನೇ ನಕಲು ಮಾಡಿ
ಏಯ್ ಚಿನ್ನಾ , ಇನ್ನೆಷ್ಟು ದಿನ ನಾನು ಗಡ್ಡ ಬಿಡಬಹುದು ಹೇಳು ಎಂದು ಕ್ವಿಜ್ ಸ್ಪರ್ಧೆಯಲ್ಲಿ ಕೇಳುವಂತೆ ಪ್ರಶ್ನೆ ಕೇಳಿದೆ .

ರೀ ಅದೆಲ್ಲಾ ಗೊತ್ತಿಲ್ಲ . ಕೇಳಿದಷ್ಟಕ್ಕೆ ಉತ್ತರ ಕೊಡಿ . ಗಡ್ಡ ತೆಗೀತೀರಾ ಇಲ್ವಾ ಎಂದಳು.

ಓಹೋ ಬೇರೆ ಏನೋ ಖೆಡ್ಡಾ ತಯಾರಾಗ್ತಾ ಇದೆ ಎಂದು ನನ್ನ ಸಿಕ್ಸ್ತ್ ಸೆನ್ಸ್ ( ಅದು ನನಗಿದೆಯೇ ಎಂದು ಕೇಳಬೇಡಿ . ನನಗೂ ಅನುಮಾನ ಇದೆ ) ಹೇಳಲಾರಂಭಿಸಿತ್ತು.

ಧೈರ್ಯಂ ಸರ್ವತ್ರ ಸಾಧನಂ ಎನ್ನುವಂತೆ ಧೈರ್ಯ ಮಾಡಿ ಇಲ್ಲ ನಾನು ಗಡ್ಡ ತೆಗೆಯುವುದಿಲ್ಲ . ಎಂದು ಹೇಳಿ ಏನೀಗ ಎನ್ನುವ ದೃಷ್ಟಿಯನ್ನು ಅವಳೆಡೆಗೆ ಬೀರಿದೆ . ( ನನ್ನ ಹೆಂಡತಿಯ ಮುಂದೆ ಇಷ್ಟು ಹೇಳಲು ಧೈರ್ಯ ಪ್ರಸಾದಿಸಿದ ಆ ದೇವರನ್ನು ತಕ್ಷಣವೇ ವಂದಿಸಿದೆ )

ಅವಳು ನನ್ನ ನೋಟಕ್ಕೆ ಕ್ಯಾರೇ ಎನ್ನದೇ ಅದೇನೋ ಜುಬ್ಬಾ ಹಾಕಿಕೊಂಡು ಹೋದರೆ ಹೇಗ್ಹೇಗೋ ಕಾಣುತ್ತೀರಿ ಎಂದು ಬೀಗುತ್ತಿದ್ರಲ್ಲಾ ಮುಂಜಿಗೆ ಹಾಕಿಕೊಂಡು ಹೋಗೋಕೆ ಬೀರುವಿನಿಂದ ಜುಬ್ಬಾ (ಇದ್ದದ್ದೇ ಒಂದು ) ತೆಗೆದು ಹೊರಗಿಟ್ಟಿದ್ದೇನೆ .
ಆದರೆ ಐರನ್ ಮಾಡಿಕೊಳ್ಳಿ . ಇಲ್ಲ ಮಾಡಿಸಿಕೊಂಡು ಬನ್ನಿ ಎಂದು ಬೇರೆ ಕೆಲಸದಲ್ಲಿ ತೊಡಗಿದಳು .

ಭಲೇ ಭಲೇ ಏನು ಅದೃಷ್ಟನೋ ನಿನ್ನದು . ಸುತರಾಂ ಒಪ್ಪಳು ಎಂದುಕೊಂಡರೆ ಗ್ರೀನ್ ಸಿಗ್ನಲ್ಲೇ ಕೊಟ್ಟು ಬಿಟ್ಟಳಲ್ಲೋ ಎಂದು ಚಿಗರೆಯ ಮರಿಯಂತೆ ಜಿಗಿಯುತ್ತಾ ನನ್ನ ಏಕೈಕ ಜುಬ್ಬಾ ವನ್ನು ನಾನೇ ಶ್ರದ್ಧೆಯಿಂದ ನಿಂತು ಐರನ್ ಮಾಡಿಸಿಕೊಂಡು ಬಂದೆ .( ನಾನು ಮಾಡಲು ಹೋಗಿ ಇರುವ ಒಂದೇ ಜುಬ್ಬಾ ಗೆ ಹೀನಸ್ಥಿತಿ ತಲುಪಿಸಲು ನಾನು ಸಿದ್ಧನಿರಲಿಲ್ಲ ಅದಕ್ಕೆ )

ಆ ಜುಬ್ಬಾ ಹಾಕಿಕೊಂಡು ಮುಂಜಿ ಮನೆಗೆ ಕಾಲಿಟ್ಟರೆ ತುಂಬಾ ಹತ್ತಿರದ ಬಂಧುಗಳಲ್ಲೇ ಕೆಲವರು ಗುರುತೇ ಹಿಡಿಯಬಾರದೇ ?

ಇನ್ನು ಕೆಲವರಂತೂ ಯಾಕೆ ಮೈಗೆ ಯಾ ಮನಸ್ಸಿಗೆ ಹುಷಾರಿಲ್ಲವೇ ಎಂದೆಲ್ಲಾ ಕೇಳಿ ನನ್ನ ಉತ್ಸಾಹವನ್ನೇ ಕುಂದಿಸಲು ಯತ್ನಿಸಿದರು .

ನನ್ನ ಸೋದರತ್ತೆಯ ಮಕ್ಕಳಂತೂ ಏನೋ ಆಗಿದೆ ನಿಂಗೆ ಸ್ವಾಮಿ ಗೀಮಿ ಆಗ್ಬೇಕು ಅಂತ ಮನಸ್ಸು ಮಾಡಿದಿಯೇನೋ ? ಎಲ್ಲೋ ನಿನ್ನ ಕಿತ್ತೋದ ಆಶ್ರಮ ? ಎಷ್ಟು ಜನ ಶಿಷ್ಯರೋ ? ಶಿಷ್ಯರೋ ಶಿಷ್ಯೆಯರೋ ?  ಇನ್ನೂ ಹಲವಾರು ರೀತಿಯಲ್ಲಿ ಪ್ರಶ್ನೆಗಳ ಸುರಿಮಳೆ ಸುರಿದು ಗಾಯ ಮಾಡಿ ಆ ಉರಿಯುವ ಗಾಯಕ್ಕೆ ಉಪ್ಪು ತುಂಬಿದ್ದು ಸಾಲದು ಎಂಬಂತೆ ನನ್ನವಳನ್ನೂ ಕರೆದು ಪ್ರಶ್ನೆಗಳ ಸುರಿಮಳೆ ಗೈದರು .

ನಾನು ಎಲ್ಲವನ್ನೂ ನಗುಮುಖದಿಂದಲೇ ಸಹಿಸುತ್ತಿದ್ದರೆ ನನ್ನ ಹೆಂಡತಿ ನೇರವಾಗಿ ಗಡ್ಡ ಬಿಟ್ಟವರನ್ನು ಕೇಳೋದು ಬಿಟ್ಟು ನನ್ನನ್ನು ಕೇಳಿದರೆ ಏನು ಪ್ರಯೋಜನ ಎಂದು ಹೇಳಿ ಸುಮ್ಮನಾದಳು .

ನಾನೂ ಜಗ್ಗಲಿಲ್ಲ .

ಗಡ್ಡ ಬಿಡುವ ನನ್ನ ಆಸೆ ಎಷ್ಟು ಬಲವಾಗಿತ್ತೆಂದರೆ ಡಿವಿಜಿಯವರ ಚೌಪದಿ ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು ನೆನಪಾಗಿತ್ತು.

ಇದರಲ್ಲೇನು ಘನತತ್ವ ಇದೆಯೋ ಮೂರ್ಖ ಶಿಖಾಮಣಿ ಎಂದು ನೀವು ಕೇಳಬಹುದು .

ಘನತತ್ವ ಎನ್ನುವುದು ಅವರವರ ಬುದ್ದಿ ಮಟ್ಟಕ್ಕೆ ಅನುಗುಣವಾಗಿ ಆದರ್ಶ ಗಳು ಅವುಗಳನ್ನು ಪಾಲಿಸಲು ಬೇಕಾದ ಬದ್ಧತೆ ಗಳ ಮೇಲೆ ಅವಲಂಬಿತವಾಗಿದೆ ಎಂದು ಯಾರೋ ಮಹನೀಯರು ಬರೆದಿದ್ದುದನ್ನು ಯಾವಾಗಲೋ ಓದಿದ್ದು ಈಗ ಇದ್ದಕ್ಕಿದ್ದಂತೆ ನೆನಪಾಯಿತು.

ಈಗ್ಗೆ ಈ ಕ್ಷಣಕ್ಕೆ ಗಡ್ಡ ಬಿಡುವುದೇ ಘನತತ್ವ ಎಂದು ನನಗೆ ನಾನೇ ತೋಚಿಸಿಕೊಂಡು ಇಂಥದ್ದೊಂದು ಉತ್ತರ ಹೊಳೆದಿದ್ದಕ್ಕೆ ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ .

ಇಷ್ಟಾದ ಮೇಲೆ ಶೇವಿಂಗ್ ಯೋಚನೆಯನ್ನೇ ಕೈಬಿಟ್ಟು ಗಡ್ಡ ಬೆಳೆಸುವುದರಲ್ಲಿ ನಿರತನಾದೆ.

ಬೇರೆ ಎಲ್ಲಾ ಉಪದೇಶ ಸಲಹೆಗಳನ್ನು ಹೇಗೋ ಅರೆಮನಸ್ಸಿನಿಂದಲೇ ಒಪ್ಪಿಕೊಂಡು ಪಾಲಿಸಲಾರಂಭಿಸಿದ್ದೆ.

ಗಡ್ಡ ಬಿಟ್ಟರೆ ಎಷ್ಟು ಚೆನ್ನಾಗಿರುತ್ತದೆ ಮುಖದ ಮೇಲೆ ಒಂದು ವಿಲಕ್ಷಣ ಖಳೆ ಮೂಡುತ್ತದೆ ಎಂದುಕೊಂಡು ಇಷ್ಟ ಪಟ್ಟು ಗಡ್ಡ ಬಿಡಲಾರಂಭಿಸಿದರೇ ಎಲ್ಲರಿಗೂ ನನ್ನ ಗಡ್ಡದ ಮೇಲೇ ಕಣ್ಣು.

ಯಾರದಾದರೂ ಸ್ನೇಹಿತರು , ಬಂಧುಗಳು , ಪರಿಚಯದವರ ಮನೆಗೇನಾದರೂ ಹೋದರೆ ಅಲ್ಲೂ ನನ್ನ ಗಡ್ಡದ ಮೇಲೆ ಸ್ವಲ್ಪ ದೀರ್ಘ ಎನ್ನಬಹುದಾದ ಚರ್ಚೆ.

ಮಗನಿಗೂ ಬೇಸಿಗೆ ರಜೆ ಶುರುವಾಗಿ ಬಹಳ ದಿನಗಳಾಗಿದ್ದು ಅವನನ್ನು ಅಜ್ಜಿ ಮನೆಗೆ ಬಿಟ್ಟು ಬರಲು ಹೋದರೆ ಅಲ್ಲೂ ಅತ್ತೆ ಮಾವನಿಂದ ಗಡ್ಡದ ಮೇಲೇ ಪ್ರಶ್ನೋತ್ತರ ಮಾಲೆ.

ಕಾರಣಕ್ಕೆ ಪ್ರಶ್ನೆ ಸಂಖ್ಯೆ ಪತ್ನಿಯದಷ್ಟಿರಲಿಲ್ಲ ಎನ್ನುವುದು ನನಗೆ ಸಮಾಧಾನ ತಂದರೂ ನನ್ನವಳ ಉತ್ತರ ಅವಳ ಅಪ್ಪ ಅಮ್ಮನ ಬಳಿ ಬೇರೆಯದೇ ಇತ್ತು.

ನಾನೂ ಹೇಳಿ ಹೇಳಿ ಸಾಕಾಯ್ತಮ್ಮ.

ಗಡ್ಡದ ವಿಷಯಕ್ಕೆ ಬಂದರೆ ಸಾಕು ಇವರಿಗೆ ಮೂಗಿನ ತುದಿಗೇ ಕೋಪ ಕುಣಿಯಲಾರಂಭಿಸುತ್ತದೆ ಎಂದು ಹೇಳಿಬಿಟ್ಟಳು.

ಇವರೆಲ್ಲರಿಗೂ ನಾನು ಗಡ್ಡ ಬಿಡುವುದರಿಂದ ಆಗುವ ಸಮಸ್ಯೆಯಾದರೂ ಏನು ಎನ್ನುವುದು ತಿಳಿಯಲಿಲ್ಲ
.
ಏನೋ ಬೇರೆಯವರ ಕಣ್ಣಿಗೆ ಸ್ವಲ್ಪ ವಿಚಿತ್ರವಾಗಿ ಕಾಣಬಹುದೇನೋ .

ಎಂಥೆಂಥವರೋ ಗಡ್ಡದಲ್ಲಿ ಹೇಗೆಲ್ಲಾ ಕಾಣುತ್ತಾರೆ ಅಂಥದ್ದರಲ್ಲಿ ನಾನೇಕೆ ಹಿಂಜರಿಯಬೇಕು ಎಂದುಕೊಂಡೆ

ಅತ್ತೆಯ ಮನೆಗೆ ಮಗ ಮತ್ತು ಪತ್ನಿ ಜತೆಗೆ ಹೋದಾಗ ಅಲ್ಪ ಪರಿಚಯದವರೊಬ್ಬರು  ಎದುರು ಸಿಕ್ಕು ಲೋಕಾಭಿರಾಮವಾಗಿ ಮಾತನಾಡುತ್ತಾ ನಮ್ಮ ಸಂಬಂಧಿಕರೊಬ್ಬರು ಥೇಟು ನಿಮ್ಮ ಹಾಗೆಯೇ ಇದ್ದಾರೆ ಎಂದ

ಓ ಹೌದಾ. ಇರಬಹುದು ಸಾರ್ ಎಂದು ನಾನು ಮಾತು ಮುಂದುವರೆಸುವಷ್ಟರಲ್ಲಿ ಅವರಿಗೆ ಸ್ವಲ್ಪ ಹುಚ್ಚು . ತಪ್ಪಿಸಿಕೊಂಡು ಬಹಳ ತಿಂಗಳೇ ಆದವು . ಎಂದು ಹೇಳಿದಾಗಲಂತೂ ತೀರಾ ಕಸಿವಿಸಿ ಆಗಿ ಅಲ್ಲಿಂದ ಕಾಲ್ಕಿತ್ತೆ

ನಾನು ಕನ್ನಡಿ ಮುಂದೆ ನಿಂತು ನೋಡಿಕೊಂಡಾಗಲೆಲ್ಲಾ ಬುದ್ಧಿ (?) ಜೀವಿಯಂತೆ  ಸಾಹಿತಿಯಂತೆ  ಕಾಣುತ್ತೇನೆ ಎಂದುಕೊಂಡು ಎಷ್ಟು ಖುಷಿ ಪಟ್ಟೆನೋ .

ನನಗೇ ಗೊತ್ತು.

ಹೆಮ್ಮೆಯಿಂದ ಲೇ ಇವಳೇ ಈ ಜುಬ್ಬಾ ಹಾಕಿಕೊಂಡು ಹೊರಗೆ ಕಾಲಿಟ್ಟರೆ ಸಾಕು ಯಾರೋ ಸಾಹಿತಿಗಳಿರಬೇಕು ಎಂದು ಎಷ್ಟು ಗೌರವ ಕೊಡುತ್ತಾರೆ ಗೊತ್ತಾ ಎಂದು ಹೇಳಿದರೆ

ಹೌದು ಹೌದು ದೂರದಿಂದ ನೋಡಿ ಗೌರವ ಕೊಟ್ಟರೂ ಹತ್ತಿರ ಬಂದು ಬಾಯಿ ಬಿಟ್ಟ ಕೂಡಲೇ ಬಂಡವಾಳ ಬಯಲಾಗಿ ಸಿಗುವ ಗೌರವವೇ ಬೇರೆ ಎಂದು ಹೇಳಿ ಕಿಸಕ್ಕನೆ ನಕ್ಕಳು.

ಸತ್ಯವೇ .....

ಆದರೂ ನನ್ನ ಗಡ್ಡದ ಕುರಿತಾದ್ದರಿಂದ ನನಗೆ ಒಪ್ಪಲು ಮನಸ್ಸಾಗಲಿಲ್ಲ .

ಅಪ್ಪ ಅಮ್ಮ ಕೂಡಾ  ಶೇವ್ ಮಾಡಿಕೊಳ್ಳೋ . ಗಡ್ಡ ಬಿಡಬೇಡ ಎಂದು ಸುತ್ತ ಮುತ್ತಲಿನ ಎಲ್ಲರಿಗೂ ಕೇಳುವಂತೆ ಮೆಲ್ಲಗೆ ಹೇಳಿದರು .

ಆದರೂ ಯಾರ ಆಕ್ಷೇಪಣೆಗಳಿಗೂ ತಲೆ ಕೆಡಿಸಿಕೊಳ್ಳದೇ ಗಡ್ಡ ಬಿಡಲಾರಂಭಿಸಿದೆ.
ಸ್ವಲ್ಪ ದಿನಗಳಲ್ಲಿ ಹುಲುಸಾಗಿ ಬೆಳೆಯಲಾರಂಭಿಸಿತ್ತು.

ಕನ್ನಡಿಯ ಮುಂದೆ ನಿಂತು ಹುಲುಸಾದ ಗಡ್ಡದಲ್ಲಿ ಕೈಯಾಡಿಸುತ್ತಿದ್ದರೇ
ಸಪ್ತ ಲೋಕಗಳಲ್ಲಿ ಸಂತೋಷದಿಂದ ವಿಹರಿಸುತ್ತಿರುವ ಅನುಭವ.

ಈ ಸಂತೋಷಕ್ಕೂ ಕೆಲವೇ ದಿನಗಳಲ್ಲಿ ಕಲ್ಲು ಬಿತ್ತು.

ಪೋಲಿಸ್ ಕಾನ್ಸ್ಟೇಬಲ್ ಒಬ್ಬರು ನನ್ನನ್ನು ನೋಡಿ ತೀರಾ ಹತ್ತಿರಕ್ಕೆ ಬಂದು ಏನೇನೋ ಪ್ರಶ್ನೆಗಳನ್ನು ಕೇಳಲಾರಂಭಿಸಿದರು.

ನೀವ್ಯಾರು ?

ಹೇಳಿದೆ

ಕರ್ನಾಟಕದಲ್ಲಿ ಎಷ್ಟು ವರ್ಷಗಳಿಂದ ಇದೀರಾ ?

ಹುಟ್ಟಿದಾಗಿನಿಂದ.

ಏನು ಕೆಲಸ ಮಾಡ್ತಾ ಇದ್ದೀರ ಇತ್ಯಾದಿ ಕೇಳಲಾರಂಭಿಸಿದರು.

ನಾನು ಏನು ವಿಷಯ ಸಾರ್ ಎಂದು ಎದೆಯಲ್ಲಿ ಇದ್ದ ನಡುಕವನ್ನು ದನಿಯಲ್ಲಿ ತೋರದೇ ಕೇಳಿದೆ.

ನೊಟೋರಿಯಸ್ ಕಳ್ಳ ಒಬ್ಬ ಥೇಟ್ ನಿಮ್ಮ ಹಾಗೇ ಇದ್ದಾನೆ . ಪೋಲೀಸ್ ಸ್ಟೇಷನ್ ನಿಂದ ತಪ್ಪಿಸಿಕೊಂಡಿದ್ದಾನೆ .
ಅವನನ್ನೇ ಹುಡುಕುತ್ತಿದ್ದೇವೆ. ಎಂದರು .

ಬುದ್ಧನ ಉಪದೇಶದಲ್ಲಿನ ಸತ್ಯ ಅನಾವರಣಗೊಳ್ಳಲಾರಂಭಿಸಿತ್ತು

ಆಸೆಯೇ ದುಃಖ ಕ್ಕೆ ಮೂಲ ಎಂದುಕೊಂಡು ಇನ್ನೂ ಆ ಕಾನ್ಸ್ಟೇಬಲ್ ನಿಂತು ಮಾತನಾಡುತ್ತಿರುವಾಗಲೇ ಒಳಗೆ ಓಡಿಹೋಗಿ ಎರಡೇ ನಿಮಿಷಗಳಲ್ಲಿ ಗಡ್ಡ ಬೋಳಿಸಿಕೊಂಡು ಅವರೆದುರು ನಿಂತೆ

ಓ ನೀವಾ ಸಾರ್ ಗಡ್ಡ ಬಿಟ್ಟು ಎಷ್ಟು ಕನ್ಫ್ಯೂಸ್ ಮಾಡಿದಿರಲ್ಲಾ . ನನ್ನ ಮಗನ ಮೇಷ್ಟ್ರು ನೀವು ನಿಮ್ಮನ್ನು ಅನುಮಾನಿಸೋಹಾಗೆ ಮಾಡಿಬಿಟ್ರಲ್ಲಾ ಎಂದು ಹೇಳಿ ಕೈ ಕುಲುಕಿ ಸಾರಿ ಸಾರ್ ಎಂದು ಹೇಳಿ ಹೊರಟೇ ಹೋದರು .

ಬಾಯಿಗೆ ಬಂದಿದ್ದ ಜೀವ ಮತ್ತೆ ಸ್ವಸ್ಥಾನ ಸೇರಿತ್ತು .

ನನ್ನ ಹೆಂಡತಿ ನನ್ನತ್ತ ನೋಡಿ ಬೇಕಿತ್ತ ಇಷ್ಟೆಲ್ಲಾ ಎನ್ನುವಂತೆ ಕಿಸಕ್ಕನೆ ನಕ್ಕಳು .

ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳಂಥಾ ಅರಿಷಡ್ವರ್ಗಗಳನ್ನಂತೂ ಬಿಡಲಾಗಲಿಲ್ಲ

ಗಡ್ಡವನ್ನಾದರೂ ಸುಲಭವಾಗಿ ಬಿಡಬಹುದು ಎಂದುಕೊಂಡಿದ್ದೆ

ಅದೂ ಕೂಡಾ ಅಸಾಧ್ಯ ಎಂದು ಮನವರಿಕೆಯಾಗಿಹೋಯಿತು.

ಛೇ ಛೇ ನನ್ನ ಬಾಳು ಹೀಗಾಗಬಾರದಾಗಿತ್ತು.