Monday, February 4, 2019

ಬೇಡಿಕೆ

ಸಮಯವಾಯಿತೆಂದು ನೀನು
ಮುಳುಗಿಹೋದರೇನು ಚೆನ್ನು
ಕತ್ತಲೆ ಸಾಮ್ರಾಜ್ಯ ತಾನು
ರಾರಾಜಿಸದೇನು

ಜಗದ ಜೀವಕೋಟಿಗೆಲ್ಲ
ನಿನ್ನದೆ ಬಲ ಬೇರೆಯಲ್ಲ
ತಿಳಿದು ಮುಳುಗುತಿರುವೆಯಲ್ಲ
ನಿನಗಿದು ಸಲ್ಲ

ಬಳಸಿ ನಿನ್ನ ಶಕ್ತಿಯನ್ನು
ಜೀವಜಾಲ ಧನ್ಯತೆಯನು
ತೋರೆ ಇಲ್ಲಿ ನರನು ತಾನು
ಮೆರೆಯುತಿರುವನು

ಎಲ್ಲೆಡೆ ಬೆಳಕನ್ನು ಬೀರಿ
ಕರ್ತವ್ಯದ ಮಹಿಮೆ ಸಾರಿ
ನಡೆವ ನೀನೆ ಮಾದರಿ
ಭುವಿಗೆ ನೀನೇ ಐಸಿರಿ

ಭುವಿಗೆ ಬೆಳಕ ಬೀರಿ ನೀನು
ಹರಡಿಹ ತಮ ತೊಳೆಯಲೇನು
ನರನ ಮನದ ತಿಮಿರವನು
ತೊಡೆಯಲಾಗದೇನು?

ನಾನೇ ಹೆಚ್ಚು ಎನುವ ತಿಮಿರ
ನನದೆ ಎಲ್ಲ ಎನುವ ಅಮಲ
ದೇವನ ಧಿಕ್ಕರಿಪ ತೆವಲ
ತೆಗೆಯಲಾರೆಯೇನು?

ಇಂದು ನೀನು ಮುಳುಗಲೇನು
ನಾಳೆ ನಿಜದಿ ಬರುವೆ ನೀನು
ಅಹಮಿನಲ್ಲೇ ಮುಳುಗಿದೆನಗೆ
ನಾಳೆ ನಿನ್ನ ಕರುಣ ಕಿರಣ
ನಿಜದಿ ದೊರೆವುದೇನು
ನನಗೆ ನಾಳೆ ಇರುವುದೇನು
ಹೇಳೆನಗೆ ನಾಳೆ ಇರುವುದೇನು



Sunday, February 3, 2019

ನಾನೂ ನನ್ನ ಜೀವನ.

ನಾನೂ ನನ್ನ ಜೀವನ ಅದೊಂದು ವಾಕ್ಯದಿಂದ ತಿರುವು ಪಡೆದೀತು ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಹೊಸ ಶಾಲೆಗೆ ಶಿಕ್ಷಕನಾಗಿ ಸೇರಿದ ಒಂದು ತಿಂಗಳಲ್ಲೇ ನನ್ನ ಮೇಲೆ ನನಗೇ ವಿಶ್ವಾಸ ಕಡಿಮೆಯಾಗಿ ಶಾಲಾ ವಾತಾವರಣ ಪ್ರತಿಕೂಲ ವಾಗಿ ಒಳಸೇರುವ ಆಮ್ಲಜನಕವೇ ಅನಾರೋಗ್ಯ ಕಾರಕವಾಗುವ ಸ್ಥಿತಿ ನಿರ್ಮಾಣವಾಗಿತ್ತು. ಥತ್ ಈ ಉಸಿರು ಕಟ್ಟಿಸುವ ವಾತಾವರಣವೂ ಬೇಡ, ಶಾಲೆಯೂ ಬೇಡ ಬಿಟ್ಟು ತೆರಳೋಣ ಬೇರೆ ಯಾವುದಾದರೂ ಶಾಲೆ ನೋಡಿಕೊಳ್ಳೋಣ ಎಂದು ನಿರ್ಧಾರ ಮಾಡಿದ ಸಂಜೆ ಎಂದಿನಂತೆ ಮನೆಪಾಠಕ್ಕೆ ತೆರಳಿದೆ. ಅಲ್ಲಿ ಆ ದಿನ ಪಾಠ ಶುರು ಮಾಡುವ ಮೊದಲು ನನ್ನ ವಿದ್ಯಾರ್ಥಿನಿಯು ತನ್ನ ನೋಟ್ ಬುಕ್ ನಲ್ಲಿ ಮೊದಲ ಪುಟದಲ್ಲಿ ಬರೆದುಕೊಂಡಿದ್ದ ವಾಕ್ಯ ನನ್ನಲ್ಲಿ ಛಲವೊಂದನ್ನು ಹುಟ್ಟು ಹಾಕಿತು. ಕುಳಿತಲ್ಲಿ ನಿಂತಲ್ಲಿ ಎಲ್ಲೆಂದರಲ್ಲಿ ಎಡಬಿಡದೆ ಮನಸ್ಸನ್ನು ಕಾಡತೊಡಗಿತ್ತು. ಸಾಕಷ್ಟು ಅಂತರ್ಮಥನಕ್ಕೊಳಮಾಡಿತೆಂದರೆ ಅತಿಶಯೋಕ್ತಿಯಾಗಲಾರದು. ತದನಂತರ ನನ್ನ ಪ್ರಯತ್ನಕ್ಕೊಂದು ರೂಪುರೇಷೆ ನೀಡಿ ಅದರಂತೆ ಎಡೆಬಿಡದೆ ಶ್ರಮ ಶ್ರದ್ಧೆ ವಹಿಸಿ ತರಗತಿಗಳನ್ನು ತೆಗೆದುಕೊಳ್ಳಲಾರಂಭಿಸಿದೆ. ಪರಿಣಾಮ ಹೆಚ್ಚಿದ ಆತ್ಮವಿಶ್ವಾಸ. ಧೈರ್ಯ. ಅದರ ಪ್ರತಿಫಲವಾಗಿ ಈ ಶಾಲೆಯಲ್ಲಿ ಮೂರು ದಶಕಗಳಿಂದ ಬೋಧಕನಾಗಿದ್ದೇನೆ. ಎಷ್ಟರಮಟ್ಟಿಗೆ ಎಂದರೆ ಮಕ್ಕಳು ನಮಗೆ ಈ ಸರ್ ಕ್ಲಾಸ್ ಗಳು ಸಿಗಲಿ ಎಂದು ವಂಚಿತ ತರಗತಿಗಳ ಮಕ್ಕಳು ಹಾತೊರೆಯುವಷ್ಟು.
ಅಂದಹಾಗೆ ನನ್ನ ಬದುಕಿನ ತಿರುವಿಗೆ ಕಾರಣವಾದ ಆ ವಾಕ್ಯವಾದರೂ ಯಾವುದು?
ಗೆಲ್ಲುವವನು ತೊರೆಯುವುದಿಲ್ಲ ತೊರೆದವನು ಗೆಲ್ಲುವುದಿಲ್ಲ winner never quits, quitter never wins

ಅಯ್ಯೋ ಹಬ್ಬಗಳೇ.
ಸಂಕ್ರಾಂತಿ ಬಹ ಮುನ್ನ ಪೇಟೆ ಗಿಜಿಗುಡುತಿತ್ತು
ಹೆಜ್ಜೆ ಹೆಜ್ಜೆಗು ಸಿಗುವ ವ್ಯಾಪಾರ ಮಳಿಗೆ
ವರ್ತಕರ ಕಂಗಳವು ಗ್ರಾಹಕರನರಸಿತ್ತು
ಬೆಳಗಿನಿಂ ಕೂಗುತಲಿ ಬೈಗಿನಾವರೆಗೆ

ಮಾವಿನೆಲೆ ಕೊಂಬೆಗಳ ತರಿದ ರಾಶಿಯದೊಂದು
ಪೇರಿಸಿಟ್ಟಿಹ ರಸದ ಕಬ್ಬುಗಳ ಕಟ್ಟು
ತಳ್ಳುಗಾಡಿಯ ತುಂಬ ಬಗೆಬಗೆಯ ಹೂ ತಂದು
ಮಾರುತಿಹರೆಲ್ಲರೂ ಚಿತ್ತವಿಟ್ಟು

ವಿಧಿಯಿಲ್ಲ ಕೊಳ್ಳುವರು ಗ್ರಾಹಕರು ಎಂದೆಂಬ
ಎಣಿಕೆಯಲಿ ವಿಪರೀತ ಬೆಲೆಯನಿಟ್ಟು
ಎಷ್ಟು ಸಾಧ್ಯವೊ ಅಷ್ಟು ಗಳಿಸಲೇಬೇಕೆಂಬ
ಹಟವ ವರ್ತಕರೆಲ್ಲ ಮನದಿ ತೊಟ್ಟು

ಕಬ್ಬು ಕೊಳ್ಳಲು ಬಂದ ಸಿರಿವಂತರೂ ಕೂಡ
ಏರಿರ್ದ ಬೆಲೆಯ ಕಹಿ ಉಂಡರಂದು
ಇದ್ದವರ ಸ್ಥಿತಿ ಹೀಗೆ ಇಲ್ಲದವರದು ಬೇಡ
ಅತ್ಯಲ್ಪವನು ಕೊಂಡು ತಂದರಂದು

ಹಬ್ಬಕ್ಕೆ ಬೇಕಾದ ಸಡಗರವೆ ಮರೆಯಾಯ್ತು
ಶಾಸ್ತ್ರಕ್ಕೆ ಹಬ್ಬವನು ಕೈಕೊಂಡರು
ಸಂಪ್ರದಾಯವನುಳಿಪುದಷ್ಟೇ ಸಾಕಾಗಿತ್ತು
ಎಲ್ಲ ಬೆಲೆ ಬಿಸಿಯಿಂದ ಬಸವಳಿದರು


ಇದನೆಲ್ಲ ಬೆಳೆದಂಥ ರೈತ ಪಡೆದನೆ ಲಾಭ?
ಗ್ರಾಹಕನು ಪಡೆದನೇ ಹೆಚ್ಚು ಸರಕು?
ಹೆಚ್ಚು ಬೆಲೆ ತುಂಬಿತ್ತು ಮಧ್ಯವರ್ತಿಯ ಜೇಬ
ಮರೆಯಾಗುವುದು ಎಂದು ಇಂಥ ತೊಡಕು?

ಹಬ್ಬ ಯಾವುದೆ ಇರಲಿ ಸ್ಥಿತಿ ಮಾತ್ರ ಹೀಗೆ
ಸಾಧ್ಯವಾದಷ್ಟನ್ನು ಗೋರುವಾಸೆ
ಗಳಿಕೆ ತೃಷೆಯನು ತಣಿಪ ಭಾವವದು ಮರೆಯಾಗೆ
ನಿಜದ ಸಂತಸವೆಂಬುದೆಂದಿಗೂ ಕನಸೆ




ಮಗುವಿನ ಮನದಾಳ

ವಾರದಲ್ಲಿ ಒಂದು ದಿನಕೆ ಬಂದು ನಿಂತಿದೆ
ಜಣಗುಡುವ ಬಳೆಧರಿಸುವ ಸಂಭ್ರಮ
ಉಳಿದ ದಿನ ಶಾಲೆ ಎಂಬುದೊಂದಿದೆ
ಧರಿಸೆ ಶಾಲೆಯಲ್ಲಿ ಪಡೆವೆ ಶಿಸ್ತಿನ ಕ್ರಮ

ವಾರದ ರಜೆ ಭಾನುವಾರ ಬಳೆಯ ಧರಿಸಿದೆ
ನಿಮ್ಮ ಕೈಯ ತೆರದಿ ನನದು ಕಾಣಲು
ಮತ್ತೆ ತೊಡಲು ಆರು ದಿನ ಕಾಯಬೇಕಿದೆ
ಗಲಗಲ ಬಳೆ ಸದ್ದ ನಾನು ಕೇಳಲು

ಕುಂಕುಮ ಹಣೆಗಿರಸಬಾರದೆಂಬ ರೂಲಿದೆ
ಹೂವ ಮುಡಿಯಬಾರದಂತೆ ಎಂದಿಗೂ
ಬಳೆಯ ತೊಟ್ಟವರ್ಗೆ ಒಳಗೆ ಅನುಮತಿಯಿರದೆ
ಸಂಪ್ರದಾಯದುಡುಗೆ ಸಲ್ಲ ಇಂದಿಗೂ

ಪುಟ್ಟ ಬಾಯಿ ದೊಡ್ಡ ಪ್ರಶ್ನೆ ಕೇಳಲೇನು ಹೇಳು
ನಮ್ಮತನವದೆಂಬುದೊಂದು ನಮಗಿಲ್ಲವೆ
ತುಂಡುಲಂಗ ಧರಿಸಿದೊಡನೆ ಬಂದುದೇನು ಹೇಳು
ಮೈಯ ತುಂಬ  ಬಟ್ಟೆ ಧರಿಸಬೇಡವೆ

ಯವನರೆಮ್ಮ ತೊರೆದು ಏಳುದಶಕವಾಯಿತು
ನಾವು ಅವರನನುಕರಿಸುತಲಿರುವೆವು
ಜಗಕೆ ಬಾಳ ತಿರುಳನೊರೆದ ರಾಷ್ಟ್ರಕೇನಾಯಿತು
ಸ್ವಂತಿಕೆಯನು ಮರೆತು ಬಾಳುತಿರುವೆವು



ಕೊಂದವರಾರು?
ಮಹೇಶ್ ಕುಟುಂಬ ಮತ್ತು ಅವಿನಾಶ್ ನ ಕುಟುಂಬದ ಸ್ನೇಹ ಸುಮಾರು ಹತ್ತಿರ ಹತ್ತಿರ ಎರಡು ದಶಕಗಳಷ್ಟು. ಮಹೇಶ್ ಕಂಡ ಹಾಗೆ ಅವಿನಾಶ್ ಯಾವುದೇ ದುಶ್ಚಟಗಳಿಂದಲೂ ಮಾರು ದೂರ. ಮೃದು ಭಾಷಿ. ತನ್ನ ಕೈಯಲ್ಲಿ ಸಾಧ್ಯವಾದಷ್ಟೂ ಇನ್ನೊಬ್ಬರ ಕಷ್ಟಕ್ಕೆ ನೆರವಾಗುವ ಗುಣ. ಅವಿನಾಶ್ ನ ಒಡನಾಟದಲ್ಲಿ ಅವರ ಈ ಗುಣ ಮಹೇಶ್ ನ ಅರಿವಿಗೆ ಬಂತು.
ಆರತಿಗೊಬ್ಬಳು ಕೀರ್ತಿಗೊಬ್ಬ ಎನ್ನುವಂತೆ ಅವಿನಾಶ್ ಗೆ  ಇಬ್ಬರು ಮಕ್ಕಳು. ಅವಿನಾಶ್ ಪತ್ನಿ ನಳಿನಿ ಕೂಡ ವಿದ್ಯಾವಂತೆ. ಮನೆ ಹತ್ತಿರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಮಹೇಶ್ ಬಾಡಿಗೆ ಮನೆಯಲ್ಲಿ ವಾಸಿಸುವಾಗ ಅವರ ಮನೆ ಮಹೇಶ್ ಮನೆಗೆ ಕಲವೇ ಹೆಜ್ಜೆಗಳಷ್ಟು ಸನಿಹ.
ಇಬ್ಬರೂ ಅವಕಾಶ ಸಿಕ್ಕಾಗಲೆಲ್ಲಾ ಭೇಟಿಯಾಗುತ್ತಿದ್ದರು. ಉಭಯಕುಶಲೋಪರಿಯ ನಂತರ ಸ್ವಲ್ಪ ಸಮಯದವರೆಗೆ ರಾಜಕೀಯವೋ ಅವಿನಾಶ್ ನ ಕೆಲಸಕ್ಕೆ ಸೇರುವಾಗ ಆಗಿದ್ದ ಅನುಭವಗಳನ್ನೋ  ಮಾತನಾಡಿ ಪರಸ್ಪರ ಬೀಳ್ಕೊಳ್ಳುತ್ತಿದ್ದರು. ಇದು ಆಗಾಗ ನಡೆಯುತ್ತಿತ್ತು. ಹಾಗೆಂದು ಮನೆ ಹೊರಗೆ ನಿಂತು ಗಂಟೆ ಗಟ್ಟಲೆ ಪಟ್ಟಂಗ ಹೊಡೆಯುವ ಅಭ್ಯಾಸ ಇಬ್ಬರಲ್ಲೂ ಇರಲಿಲ್ಲ. ಏನೇ ಮಾತುಕತೆ ನಡೆದರೂ ಮನೆಯ ಒಳಗೆ.
ಇಬ್ಬರೂ ಹೋಟೇಲ್ ಅಷ್ಟು ಇಷ್ಟ ಪಡುವವರಲ್ಲ. ಆದರೆ ಅವಿನಾಶ್ ಗೆ ದಾವಣಗೆರೆ ಬೆಣ್ಣೆ ದೋಸೆ ಎಂದರೆ ಸ್ವಲ್ಪ ಅಕ್ಕರಾಸ್ತೆ. ಯಾವಾಗಲಾದರೂ ಒಮ್ಮೆ  ಹತ್ತಿರದ ಹೋಟೆಲ್ ನಿಂದ ಪಾರ್ಸೆಲ್ ತರುವಾಗ ಮಹೇಶ್ ಮನೆಗೂ ಮರೆಯದೇ ತರುತ್ತಿದ್ದರು.
ಒಮ್ಮೆ ಮಹೇಶ್ ಪುರಸೊತ್ತು ಮಾಡಿಕೊಂಡು ಅವಿನಾಶ್ ಬಳಿ ಬೆಣ್ಣೆ ದೋಸೆ ಯ ಕರ್ಮಕಾಂಡವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ತದನಂತರ ಅವಿನಾಶ್ ಗೆ ಬೆಣ್ಣೆ ದೋಸೆ ಮೇಲೆ ಸಂಪೂರ್ಣ ಅಸಹ್ಯ. ಮತ್ತೆಂದೂ ಕನಸಿನಲ್ಲೂ ಸ್ಮರಿಸಲಿಲ್ಲ.
ಮಕ್ಕಳು ಬೆಳೆದು ದೊಡ್ಡವರಾದಂತೆ ಅವಿನಾಶ್ ಮನೆಯ ವಾತಾವರಣವೂ ನಿಧಾನವಾಗಿ ಬದಲಾವಣೆ ಹೊಂದಲಾರಂಭಿಸಿತ್ತು. ಈ ನಡುವೆ ಮಹೇಶ್ ತಾನಿದ್ದ ಬಾಡಿಗೆ ಮನೆಯನ್ನು ಬಿಡಬೇಕಾಗಿ ಬಂತು.
ಆಗಿದ್ದಿಷ್ಟು. ಮಹೇಶ್ ಸುಮಾರು ನಾಲ್ಕು ವರ್ಷಗಳ ಕಾಲ ಆ ಮನೆಯಲ್ಲಿ ಬಾಡಿಗೆಗೆ ಇದ್ದ. ಎಂದೂ ಬಾಡಿಗೆಯನ್ನು ಪ್ರತಿ ತಿಂಗಳು ಒಂದನೇ ತಾರೀಖು ಇಲ್ಲವೇ ಅಬ್ಬಬ್ಬಾ ಎಂದರೆ ಎರಡನೇ ತಾರೀಖು ಕೊಟ್ಟು ಬಿಡುತ್ತಿದ್ದ. ಮನೆಯೊಡತಿಯ ಮಗಳು ಮಹೇಶ್ ಬಾಡಿಗೆಗೆ ಬಂದಾಗ ಏಳನೇ ತರಗತಿಯಲ್ಲಿ ಓದುತ್ತಿದ್ದಳು. ಮಹೇಶ್ ಆ ಮಗುವಿಗೆ ದಿನವೂ ತನ್ನ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದಮೇಲೆ ಗಣಿತ ವಿಜ್ಞಾನಗಳನ್ನು ಉಚಿತವಾಗಿ ಓನರಮ್ಮನ ಮಗಳು ಎನ್ನುವ ಮುಲಾಜಿಗೆ ಹೇಳಿಕೊಡುತ್ತಿದ್ದ. ಮಹೇಶ್ ಮನೆಗೆ ಬಂದ  ಐದನೇ ವರ್ಷ ಓನರಮ್ಮನ ಮಗಳು ಹತ್ತನೇ ತರಗತಿ ಮುಗಿಸಿ ಕಾಲೇಜಿಗೆ ಹೋಗಲಾರಂಭಿಸಿದಳು.
ಐದನೇ ವರ್ಷ ಓನರಮ್ಮನ ತಂಗಿಯೂ ಜೊತೆಗೆ ಬಂದು ಇರಲಾರಂಭಿಸಿದಳು. ನಿಧಾನವಾಗಿ ಅಕ್ಕನ ತಲೆ ತಿರುಗಿಸಲಾರಂಭಿಸಿದಳು. ಓನರಮ್ಮನ ತಲೆ ತಿರುಗಿದುದದರ ಪ್ರಭಾವ ಮಹೇಶ್ ಮೇಲೆ ಆಯಿತು. ಸಣ್ಣ ಕಾರಣವೊಂದನ್ನು ಗುಡ್ಡದಷ್ಟು ಮಾಡಿ ಜೋರು ಗಲಾಟೆ ಮಾಡಲಾರಂಭಿಸಿದಳು. ಆಗ ಅವಿನಾಶ್ ಮಹೇಶ್ ನೆರವಿಗೆ ಬಂದು ಅನವಶ್ಯಕವಾಗಿ ಓನರಮ್ಮ ಹಿಂಸೆ ಕೊಟ್ಟರೆ ತನಗೆ ತಿಳಿಸುವಂತೆ ಹೇಳಿದ. ತನಗೆ ಕೆಲವು ಪೋಲೀಸ್ ವರಿಷ್ಠರೇ ಗೊತ್ತಿದ್ದಾರೆ ಸಹಾಯ ಮಾಡುತ್ತೇನೆ ಹೆದರಬೇಡಿ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದ.
ಆ ಸಮಯಕ್ಕೆ ಸರಿಯಾಗಿ ಇನ್ನೊಂದು ಮನೆಯೂ ಸಿಕ್ಕಿ ಮಹೇಶ್ ಈ ಮನೆ ಬಿಟ್ಟು ಹೊಸ ಮನೆಗೆ ಪತ್ನಿ ಮತ್ತು ಮಗುವಿನ ಜೊತೆಗೆ ಕಾಲಿಟ್ಟ. ಅಲ್ಲಿಂದ ಮುಂದೆ ವಾರಕ್ಕೊಮ್ಮೆ ಅಥವಾ ಹದಿನೈದು ದಿನಗಳ ನಂತರ ಭೇಟಿಯಾಗುವ ಮಟ್ಟದಲ್ಲಿ ಬದಲಾಯಿತು.
ಮಹೇಶ್ ಹೊಸ ಮನೆಗೆ ಕಾಲಿಟ್ಟ ಘಳಿಗೆ ಎರಡೇ ವರ್ಷಗಳಲ್ಲಿ ಅವಿನಾಶ್ ಮನೆಯಿಂದ ಅನತಿ ದೂರದಲ್ಲಿ ಸಣ್ಣ ನಿವೇಶನ  ಒಂದನ್ನು ಖರೀದಿಸುವ ಯೋಗ ಕೂಡಿಬಂತು. ಮಹೇಶ್ ನ ಇನ್ನೋರ್ವ ಸ್ನೇಹಿತರು ತಾವೇ ಸ್ವತಃ ಮುಂದೆ ನಿಂತು ಮನೆಕಟ್ಟಲು ಬ್ಯಾಂಕ್ ಸಾಲವನ್ನೂ ಕೊಡಿಸಿಬಿಟ್ಟರು.
ಮಹೇಶ್ ನ ಮನೆ ಕಟ್ಟಿಸುವ ಕೆಲಸ ಭರದಿಂದ ಸಾಗಿತ್ತು. ಮಹೇಶ್ ಗೆ ಮಧ್ಯೆ ಹಣದ ಮುಗ್ಗಟ್ಟಾಯ್ತು. ಎಲ್ಲರನ್ನೂ ಕೇಳುವಂತೆ ಅವಿನಾಶ್ ನ್ನೂ ಬಹಳ ಸಂಕೋಚ ಪಟ್ಟುಕೊಂಡೇ ಹಣದ ಸಾಲ ಕೇಳಿದ . ಅದಕ್ಕೆ ತಗಲುವ ಬಡ್ಡಿಯನ್ನು ಕೂಡಾ ನೀಡುವೆನೆಂದ. ಅವಿನಾಶ್ " ಕ್ಷಮಿಸಿ ಮಹೇಶ್, ನನಗೆ ಬಡ್ಡಿಗೆ ದುಡ್ಡು ಕೊಟ್ಟು ಅಭ್ಯಾಸ ಇಲ್ಲ. " ಎಂದ. ಮಹೇಶ್ ಏನೇ ಸಮಜಾಯಿಷಿ ನೀಡಲೆಂದು ಹೋದರೂ ಅವಿನಾಶ್ ಕೇಳಲಿಲ್ಲ. ಅಯ್ಯೋ ನನ್ನ ಒಂದು ಮಾತು ನಮ್ಮಿಬ್ಬರ ಸ್ನೇಹವನ್ನೇ ಹಾಳುಗೆಡವಿತಲ್ಲಾ ಎಂದು ಯೋಚಿಸಿ ಮರುಗಿದ.
ಮಾರನೆಯ ದಿನವೇ ಅವಿನಾಶ್ ಮಹೇಶ್ ನನ್ನು ಮನೆಗೆ ಕರೆದು " ನಾನು ಹೇಳಿದ್ದನ್ನು ನೀವು ಹೇಗೆ ಭಾವಿಸಿದಿರೋ ಏನೋ ? ನಾನು ಬಡ್ಡಿ ವ್ಯಾಪಾರ ಮಾಡುವವನಲ್ಲ ಎನ್ನುವುದನ್ನು ಹೀಗೆ ಹೇಳಿದೆ ಅಷ್ಟೇ. ಇನ್ನೊಂದು ಮಾತು. ದಯವಿಟ್ಟು ಮಾರ್ಚ್ ತಿಂಗಳ ಕೊನೆಯೊಳಗೆ ನನ್ನ ಹಣವನ್ನು ಮರಳಿಸದರೆ ಸಾಕು.‌ ನನಗೆ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಅವಶ್ಯಕತೆ ಬೀಳುತ್ತದೆ ಅದಕ್ಕೆ ಅಷ್ಟೇ"ಎಂದ.
ಮಹೇಶ್ ಗೆ ಹಣಕ್ಕಿಂತ ಹೆಚ್ಚಾಗಿ ಸ್ನೇಹ ಸಂಬಂಧ ಉಳಿಯಿತಲ್ಲ ಎಂದು ಸಮಾಧಾನ ಹೊಂದಿ ಖಂಡಿತಾ ಮರಳಿಸುತ್ತೇನೆ. ಸಾಧ್ಯವಾದರೆ ಸಂಪೂರ್ಣ ಹಣವನ್ನೂ ಮರಳಿಸಲು ಪ್ರಯತ್ನಿಸುತ್ತೇನೆಂದು ಮಾತು ಕೊಟ್ಟ.
ಮಹೇಶ್ ನ ಮನೆ ಸಂಪೂರ್ಣಗೊಂಡಿತ್ತು. ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಮಹೇಶ್ ದಂಪತಿಗಳು ಕುಳಿತು ಲೆಕ್ಕ ಹಾಕಿ ಎಲ್ಲಾ ಖರ್ಚು ಹೋಗಿ ಎಷ್ಟು ಹಣ ಉಳಿದಿದೆ ಎಂದು ನೋಡಿ ಮೊದಲು ಮಾಡಿದ ಕೆಲಸವೆಂದರೆ ಯಾರ್ಯಾರು ಕೈಸಾಲ ನೀಡಿದ್ದರೋ ಅವರುಗಳಿಗೆ ಯಥಾಶಕ್ತಿ ಸಾಲ ಮರುಪಾವತಿ ಮಾಡಿದ್ದು. ಕೆಲವರಂತೂ ನನಗೆ ಈಗ ಸದ್ಯಕ್ಕೆ ಬೇಡ. ನಿಮ್ಮಲ್ಲಿಯೇ ಇರಲಿ ನಾನು ಮುಂದೆ ಬೇಕೆಂದಾಗ ಕೇಳುತ್ತೇನೆ ಎಂದಾಗ ಮಹೇಶ್ ಆ ಹಣವನ್ನೂ ಸೇರಿಸಿದಾಗ ಅವಿನಾಶ್ ನಿಂದ ಸಾಲ ಪಡೆದುದಕ್ಕಿಂತ ಇನ್ನೂ ಹೆಚ್ಚಿನ ಮೊತ್ತವೇ ಆಗಿತ್ತು. ತಕ್ಷಣವೇ ಅವಿನಾಶ್ ಮನೆಗೆ ತೆರಳಿ ಎಲ್ಲಾ ರೀತಿಯ ಸಹಾಯ ಮಾಡಿದ್ದಕ್ಕೆ ಹೃತ್ಪೂರ್ವಕ ಕೃತಜ್ಞತೆ ತಿಳಿಸಿ ಅವಿನಾಶ್ ನಿಂದ ಪಡೆದ ಸಾಲವನ್ನು ಸಂಪೂರ್ಣವಾಗಿ ಮರಳಿಸಿಬಿಟ್ಟ.
ಅವಿನಾಶ್  ಚಕಿತನಾಗಿ ಹೋದ. " ಮಹೇಶ್, ನನ್ನ ಇಷ್ಟು ವರ್ಷಗಳ ಅನುಭವದಲ್ಲಿ ನಾನು ಕೇಳದೆಯೇ ಅವಧಿಗೂ ಬಹಳ ಮುನ್ನವೇ ಮರಳಿಸಿದವರಲ್ಲಿ ನೀವೇ ಮೊದಲು. ನೀವು ಸಾಲ ಕೇಳಿದಾಗ ಸ್ವಲ್ಪ ಬೇಸರವಾಗಿತ್ತು. ಪರಿಚಯ ಇದೆ ಎಂದ ಮಾತ್ರಕ್ಕೆ ಸಾಲ ಕೇಳುವುದು ಸರಿಯಲ್ಲ ಎನಿಸಿತ್ತು. ಆದರೆ ಏಕೋ ಕೊಟ್ಟು ನೋಡುವ ಮನಸ್ಸಾಯಿತು. ಮನಸ್ಸಿಲ್ಲದ ಮನಸ್ಸಿನಿಂದಲೇ ಕೊಟ್ಟಿದ್ದೆ. ನಿಮ್ಮ ಈ ಸ್ವಭಾವ  ನನಗೆ ನಿಮ್ಮ ಮೇಲೆ ಗೌರವವನ್ನು ಹೆಚ್ಚಿಸಿದೆ " ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ.
ಮಹೇಶ್ "ಅದರಲ್ಲಿ ನನ್ನ ವಿಶೇಷತೆ ಏನೂ ಇಲ್ಲ ಸಾರ್. ಕೆಲಸ ಮುಗಿದ ಮೇಲೆ ಉಳಿದ ಹಣವನ್ನು ಇಟ್ಟುಕೊಂಡು ನಾನು ಸಾಧಿಸುವುದಾದರೂ ಏನಿದೆ? ನನ್ನ ಅವಶ್ಯಕತೆ ತೀರಿದ ಮೇಲೆ ನಿಮ್ಮ ಹಣವನ್ನು ನಿಮಗೆ ಮರಳಿಸುವುದು ನ್ಯಾಯ , ಧರ್ಮ. ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನೂ ಇಲ್ಲ. ದೊಡ್ಡ ಮನಸ್ಸು ನಿಮ್ಮದು ಅದಕ್ಕೇ ಹೀಗೆ ಹೊಗಳುತ್ತಿದ್ದೀರಿ " ಎಂದು ಹೇಳಿ ಅವರಿಂದ ಬೀಳ್ಕೊಂಡ.
ಕಾಲ ಉರುಳಿತು. ಅವಿನಾಶ್ ನ ಮಕ್ಕಳು ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಬಂದರು. ನಳಿನಿ ತಾನು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ  ವರ್ಷಗಳೇ ಆಗಿದ್ದವು .ಅವಿನಾಶ್ ತಾನು ಕೆಲಸ ಮಾಡುವ ಕಂಪನಿಗೆ ರಾಜೀನಾಮೆ ನೀಡಿ ತನ್ನದೇ ಹೊಸದೊಂದು ಬಿಸಿನೆಸ್ ಶುರು ಮಾಡಿದ. ಮಗನ ಬಗ್ಗೆ ಅಪಾರವಾದ ನಿರೀಕ್ಷೆ ಬೆಳೆಸಿಕೊಂಡಿದ್ದನೇನೋ ತಿಳಿಯದು. ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ಅವಿಧೇಯರಾಗಲಾರಂಭಿಸಿದ್ದರು. ಅಪ್ಪ ಹೇಳಿದ ಮಾತನ್ನು ಕೇಳುವುದು ತಮಗೆ ಅವಮಾನಕರ ಎಂಬ ಧೋರಣೆ ಬೆಳೆಸಿಕೊಂಡರು. ಇಬ್ಬರು ಮಕ್ಕಳೂ ಒಂದು ಮಟ್ಟದ ಓದು ಮುಗಿಸಿದರು.
ಅಲ್ಲಿಂದ ಆರಂಭ ಹೊಸ ಅಧ್ಯಾಯ. ಅವಿನಾಶ್ ಬದುಕಿನ ಕಷ್ಟದ ದಿನಗಳು ಅನಾವರಣಗೊಂಡವು.
ಅವಿನಾಶ್ ಬಿಸಿನೆಸ್ ಕೈ ಕೊಡಲಾರಂಭಿಸಿತ್ತು. ಹಣದ ಅವಶ್ಯಕತೆ ಇತ್ತೋ ಏನೋ ಯಾರ ಬಳಿಯೂ ಹೇಳಿಕೊಂಡವನಲ್ಲ. ತನ್ನ ಸಮಸ್ಯೆ ತನಗೆ ಮಾತ್ರ ಎನ್ನುವ ಮನೋಭಾವದವನು. ಸಾಕಷ್ಟು ಪ್ರಮಾಣದಲ್ಲಿ ದುಡಿದು ಮನೆ ಆಸ್ತಿ ಮಾಡಿದ್ದರೂ ಏರುತ್ತಿರುವ ಖರ್ಚುಗಳಿಗೆ ಒಬ್ಬನ ದುಡಿಮೆ ಸಾಲದಾಗಲಾರಂಭಿಸಿತು.
ಮಗಳೂ ದುಡಿಯಲಾರಂಭಿಸಿದಳು. ಅದು ನಾಮ್ಕಾವಾಸ್ತೆಗೆ ಎನ್ನುವಂತೆ. ಹೆಸರಿಗಷ್ಟೇ ಕೆಲಸ. ಆದಾಯ ಅಲ್ಪ. ಜೊತೆಗೆ ಅಪ್ಪನಂತೆ ನಾನೂ ದುಡಿಯುತ್ತಿದ್ದೇನೆ ಎನ್ನುವ ಮದ. ಅಪ್ಪ ಮಗಳು ಯಾವ ವಿಷಯದಲ್ಲಿ ಮಾತು ಆರಂಭಿಸಿದರೂ ಜೋರು ಜಗಳದಲ್ಲಿ ಮುಕ್ತಾಯ.
ಮಗನದ್ದು ಇದಕ್ಕೆ ಭಿನ್ನ ಏನಲ್ಲ. ಅವನೂ  ಪಿ..ಜಿ. ಮುಗಿಸಿ ಮನೆಯಲ್ಲಿ ಕೆಲಸವಿಲ್ಲದೇ ಕುಳಿತಿದ್ದ. ಸ್ನೇಹಿತರ ಹುಚ್ಚು ಹುಚ್ಚು ಆಲೋಚನೆಗಳನ್ನು ಕಾರ್ಯ ರೂಪಕ್ಕೆ ತರುವ ವ್ಯರ್ಥ ಪ್ರಯತ್ನ. ಅದಕ್ಕೆ ಬೇಕಾದ ಬಂಡವಾಳಕ್ಕೆ ಮತ್ತೆ ಅಪ್ಪನ ಶ್ರಮಪಟ್ಟು ಗಳಿಸಿದ ಹಣ ಬಲಿ. ಕೊಟ್ಟರೆ ಮರಳಿಬಾರದಂಥ ನಷ್ಟ. ಕೊಡದಿದ್ದರೆ ತೀರದ ಜಗಳ. ಮಗನ ಸ್ವಂತ ಬಿಸಿನೆಸ್ ನ ಪ್ಲಾನ್ ಕೇಳಿದರೆ ಕೇಳಿದವರು ಹುಚ್ಚರಾಗುವುದು ಖಚಿತ.
ಇದಕ್ಕೆ ಸರಿಯಾಗಿ ಅವಿನಾಶ್ ಕೂಡಾ ಕೆಲವೊಮ್ಮೆ ಆತುರದ ನಿರ್ಧಾರ ಕೈಗೊಂಡು ಮಗನಿಗೆ ಮತ್ತು ಮಗಳಿಗೆ ಅವರ ದುಡಿಮೆಯೊಂದಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದಾದರೆ ಮಾಡಲಿ ಎಂದು ಪ್ರೋತ್ಸಾಹಿಸಿ ಅವರುಗಳ ಒಪ್ಪಿಗೆ ಪಡೆದು ಅವರಿಷ್ಟ ಪಟ್ಟ ಕೋರ್ಸ್ ಗಳಿಗೆ ನೋಂದಾಯಿಸಿ ಸಾವಿರಾರು ರೂಪಾಯಿ ಹಣ ಕಟ್ಟಿ ಬಂದ ಕೆಲವೇ ದಿನಗಳಲ್ಲಿ ಮಕ್ಕಳು ಇಬ್ಬರೂ ಆ ಕೋರ್ಸ್ ನಿಂದ ಲಾಭ ಇಲ್ಲ ಆ ಕೋರ್ಸ್ ಹಾಗೆ ಹೀಗೆ ಎಂದೆಲ್ಲಾ ಹೇಳಿ ಒಂದೆರಡು ತಿಂಗಳು ಹೋಗಿ ನಂತರ ತಿಲಾಂಜಲಿ ನೀಡಿದರು.
ಇದೆಲ್ಲವೂ ಮಹೇಶ್ ನ ಅರಿವಿಗೆ ಬಂದಾಗ ತಾನೇ ಸ್ವಯಿಚ್ಛೆಯಿಂದ ಇಬ್ಬರು ಮಕ್ಕಳಿಗೂ ಬುದ್ಧಿ ಹೇಳುವ ಪ್ರಯತ್ನ ಮಾಡಿದ. ಎಲ್ಲೋ ರಾಗ ಶೃತಿ ತಪ್ಪುತ್ತಿದೆ ಎನ್ನಿಸಿ ಮನೆಮಂದಿಯನ್ನೆಲ್ಲಾ ಮಹೇಶ್ ಕಷ್ಟಪಟ್ಟು ಕೌನ್ಸೆಲಿಂಗ್ ಗೆ ಹಲವಾರು ಬಾರಿ  ಕರೆದೊಯ್ದರೂ ಏನೂ ಫಲಕಾರಿಯಾಗದೆ ಮಹೇಶ್ ಕೈಚೆಲ್ಲಿದ .  ಮಕ್ಕಳ ಬಾಯಿಂದ ಬಂದ ಮಾತುಗಳು ಮಹೇಶ್ ನ ಮನಸ್ಸಿಗೆ ಘಾಸಿಯುಂಟುಮಾಡಿದವು. ದಯವಿಟ್ಟು ಕ್ಷಮಿಸಿ ಮಕ್ಕಳೇ ಎಂದಷ್ಟೇ ಹೇಳಿ ನಿರ್ಗಮಿಸಿದ.
ಬೆಳೆದ ಮಗನನ್ನು ಎದುರು ಹಾಕಿಕೊಳ್ಳಲು ಇಷ್ಟವಿಲ್ಲದೇ ಅವಿನಾಶ್ ಲಕ್ಷಾಂತರ ರೂಪಾಯಿಗಳನ್ನು ಪೋಲು ಮಾಡಿಕೊಂಡ. ಹೋಗಲಿ ಮಗನೇನಾದರೂ ಗಂಭೀರವಾಗಿ ದುಡಿಮೆ ಮಾಡಲಾರಂಭಿಸಿದನೇ? ಅದೂ ಇಲ್ಲ. ಸಾಲದ್ದಕ್ಕೆ ಮನೆ ಮುಂದೆ ರಾತ್ರಿ ಎರಡರವರೆಗೆ ಮಗ, ಮಗಳು ಅವರ ಸ್ನೇಹಿತರು ಸೇರಿ ದಿನಾ ಆಟ. ಗಲಾಟೆ. ಅಕ್ಕ ಪಕ್ಕದ ಮನೆಯವರು ನೇರವಾಗಿಯೇ ನಳಿನಿಗೆ ದೂರಿತ್ತರೂ ಫಲ ನಿಷ್ಫಲ. ನಳಿನಿ ಮಕ್ಕಳಿಗೆ ಏನೂ ಹೇಳುತ್ತಿರಲಿಲ್ಲ. ಹೇಳಿದರೂ ಆ ಮಕ್ಕಳು ಕೇಳುತ್ತಲೂ ಇರಲಿಲ್ಲ.
ನಳಿನಿ ಯಾರನ್ನೂ ತಿದ್ದಲು ಆಗದೇ ಮನಸ್ಸೂ ಮಾಡದೇ   ಮನೆಬಿಟ್ಟು ಹೊರಗೆ ತಿರುಗಲಾರಂಭಿಸಿದಳು. ಯಾವುದೋ ಸಂಘಗಳಲ್ಲಿ ಸದಸ್ಯೆಯಾಗಿ ಸಾಕಷ್ಟು ಸಮಯ ಹೊರಗೇ ಕಳೆಯಲಾರಂಭಿಸಿದಳು. ಕೆಲವೇ ದಿನಗಳಲ್ಲಿ ಅದರ ತೆವಲು ಚೆನ್ನಾಗಿ ಮೈಗೂಡಿಬಿಟ್ಟಿತು. ಮಕ್ಕಳು ಸ್ಕೂಲು ಕಾಲೇಜುಗಳಲ್ಲಿ ಓದುವಾಗ ಪಕ್ಕದಲ್ಲಿಯೇ ಕುಳಿತು ಗಮನಿಸುತ್ತಾ ಇದ್ದ ನಳಿನಿ ಇದೀಗ ದಿನಕ್ಕೊಂದು ಬಾರಿ ಮಕ್ಕಳನ್ನು ಭೇಟಿ ಮಾಡಲಾರಂಭಿಸಿದಳು.
ಮಕ್ಕಳೂ ಕೂಡಾ  ಬೇಜವಾಬ್ದಾರಿಯನ್ನು ಚೆನ್ನಾಗಿ ಮೈಗೂಡಿಸಿಕೊಂಡು ಬೆಳೆಯಲಾರಂಭಿಸಿದರು. ಅವಿನಾಶ್ ಗೆ ಮಕ್ಕಳು ತನ್ನ ಮಾತು ಕೇಳದ ಹೆಂಡತಿ ಮಕ್ಕಳ ಮೇಲೆ ಒಂದು ರೀತಿಯ ಕೋಪವಲ್ಲದೇ ಮಕ್ಕಳು ನಳಿನಿಯ ಮಾತು ಕೇಳುತ್ತಾರೆ ಎನ್ನುವ ಉರಿ. ಬೆಳೆದ ಮಕ್ಕಳು ಅಚ್ಚುಕಟ್ಟಾಗಿ ದುಡಿಮೆ ಮಾಡಿಕೊಂಡು ಬದುಕುವುದನ್ನು ಕಲಿಯುವುದನ್ನು ನೋಡಲು ಯಾವ ತಂದೆಗೆ ಇಷ್ಟವಿರದು? ಆದರೆ ಮಕ್ಕಳಿಗೆ ಇಂಥಾ ಯಾವ ಉಪದೇಶಗಳೂ ರುಚಿಸದಾದವು.
ಗಳಿಸಿಟ್ಟಿ ಆಸ್ತಿಗಳು ಒಂದೊಂದೇ ಕೈಬಿಟ್ಟು ಹೋಗಲಾರಂಭಿಸಿದ್ದವು. ಅವಿನಾಶ್ ನ ತಮ್ಮ ವಿದೇಶಕ್ಕೆ ಕೆಲಸದ ನಿಮಿತ್ತ ತೆರಳಿದಾಗ ಅಲ್ಲಿಯೇ ಅಪಘಾತದಲ್ಲಿ ಸಾವನ್ನಪ್ಪಿದ. ತಮ್ಮನ ಹೆಣವನ್ನು ಇಲ್ಲಿಗೆ ತರಲೂ ಕೂಡಾ ಅವಿನಾಶ್ ಒಬ್ಬನೇ ಒದ್ದಾಡಬೇಕಾಯಿತು. ಪರಿಣಾಮ ವಿಪರೀತ ಮರಳಿಬಾರದಂಥ ಖರ್ಚು.
ಈಗಂತೂ ಮನೆಯಲ್ಲಿ ಎಲ್ಲಾ ಕುಳಿತು ತಿನ್ನುವವರೇ. ಅವಿನಾಶ್ ಆದಾಯಕ್ಕೆ ಕೆಲವು ದಾರಿಗಳನ್ನು ಮಾಡಿಕೊಂಡಿದ್ದರಿಂದ ಜೀವನ ಹೇಗೋ ಸಾಗುತ್ತಿತ್ತು.  ದಿನೇದಿನೇ ಅವಿನಾಶ್ ಮನಸ್ಸು ಹತಾಶೆ ಜಿಗುಪ್ಸೆಗಳ ಗೂಡಾಗಲಾರಂಭಿಸಿತ್ತು. ಮಕ್ಕಳು ತಪ್ಪು ದಾರಿಯಲ್ಲಿ ನಡೆಯುತ್ತಿರುವುದು ನಿಚ್ಚಳವಾಗಿ ತೋರುತ್ತಿದ್ದರೂ ಏನೂ ಮಾಡಲಾಗದ ನಿಸ್ಸಹಾಯಕ ಸ್ಥಿತಿ ತಲುಪಿದ. ಕೈಹಿಡಿದವಳು ಮನೆಯ ಉದ್ಧಾರ ನಿರ್ಲಕ್ಷಿಸಿ ಊರಿನುದ್ಧಾರಕ್ಕೆ ನಿಂತಿರುವುದು ಅವನಿಗೆ ನುಂಗಲಾರದ ತುತ್ತಾಗಿತ್ತು. ಅದರ ಬಗ್ಗೆ ಅವಿನಾಶ್ ನಿಂದ ಯಾವ ಪ್ರತಿಕ್ರಿಯೆಯನ್ನೂ  ಕೇಳಿಸಿಕೊಳ್ಳದವಳಾಗಿದ್ದಳು. ಅವಳಿಗೆ ನಾಲ್ಕು ಜನ ಹೊಗಳಿದರೆ ಅಟ್ಟಕ್ಕೇರುವವಳಾಗಿದ್ದಳು.
ಮನೆ ಮನೆಯಾಗಿರಲಿಲ್ಲ. ಎಲ್ಲರೂ ಒಟ್ಟಾಗಿ ಸೇರಿದಾಗ ಅಂದರೆ ರಾತ್ರಿ ಊಟದ ಸಮಯದಲ್ಲಿ ಜಗಳ ಗಲಾಟೆಗಳ ಯುದ್ಧ ಭೂಮಿ ಎನ್ನಬಹುದಾಗಿತ್ತು. ಯಾರಾದರೂ ಸರಿಯೇ ಅವಿನಾಶ್ ನ ಮಕ್ಕಳ ಬೇಜವಾಬ್ದಾರಿ ಮಾತುಗಳನ್ನು ಕೇಳಿದರೆ ಕಪಾಳಮೋಕ್ಷ ಮಾಡುವಷ್ಟು ಕೋಪ ಬರುತ್ತಿತ್ತು. ಅಷ್ಟು ಉದ್ಧಟರಾಗಿ ಹೋಗಿದ್ದರೆಂದರೆ ತಪ್ಪಾಗಲಾರದು.
ಅವಿನಾಶ್ ಮನೆಯಲ್ಲಿ ಈ ಪರಿಸ್ಥಿತಿ ಸುಮಾರು ನಾಲ್ಕೈದು ವರ್ಷಗಳಿಂದ ಬೇರುಬಿಟ್ಟಿತ್ತು. ಈ ವಿಷಯ ತಿಳಿದ ಮಹೇಶ್ ಪರೋಕ್ಷವಾಗಿ ಅವಿನಾಶ್ ಜೊತೆಗೆ ಮಾತನಾಡಲಾರಂಭಿಸಿದಾಗ ಅವಿನಾಶ್ ನ ನಿಸ್ಸಹಾಯಕ ಸ್ಥಿತಿ , ಉಕ್ಕಿ ಬರುವ ಅಳು , ಆ ನೋಟದಲ್ಲಿ.ಮನೆಮಾಡಿದ ವೇದನೆಗಳನ್ನು  ನೋಡಲಾರದೇ ವಿಷಯಾಂತರ ಮಾಡಿಬಿಡುತ್ತಿದ್ದ. ಅವಿನಾಶ್ ಗೆ ತಿಳಿಯದಂತೆ ಮಹೇಶ್ ತನ್ನ ಬುದ್ಧಿಗೆ ನಿಲುಕಿದ ಪರಿಹಾರಗಳನ್ನೆಲ್ಲಾ ಮಾಡಿದನಾದರೂ ಪರಿಣಾಮ ಶೂನ್ಯ.
ಅವಿನಾಶ್ ದೈಹಿಕವಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿರುವುದು ಮಹೇಶ್ ಗೆ ತಾಳಿಕೊಳ್ಳಲಾರದ ನೋವಾಗಿತ್ತು. ಏನಾದರೂ ಮಾಡೋಣವೆಂದರೆ ಸಂಪೂರ್ಣ ನಿರುಪಾಯ ಸ್ಥಿತಿ. ಆರು ತಿಂಗಳ ಹಿಂದೆ ಅವಿನಾಶ್ ನನ್ನು ಮಹೇಶ್ ಭೇಟಿಯಾದಾಗ ಅವಿನಾಶ್ ಮೂಳೆಯ ಹಂದರವಾಗಿ ಹೋಗಿದ್ದ. ಉಕ್ಕಿ ಬರುವ ಕಣ್ಣೀರನ್ನು ತೊಡೆದುಕೊಳ್ಳುತ್ತಾ ಮಹೇಶ್ ಅವಿನಾಶ್ ಜೊತೆಗೆ ಮಾತನಾಡಲಾರಂಭಿಸಿದಾಗ ಅವಿನಾಶ್ " ಮಹೇಶ್ ನನ್ನ ಹಣೆಯಲ್ಲಿ ಬರೆದುದನ್ನು ಅಳಿಸಲು ಆ ಭಗವಂತನಿಗೇ ಅಸಾಧ್ಯವಾಗಿರುವಾಗ ನಾನು ಯಃಕಶ್ಚಿತ್ ನರಮಾನವ. ಅನುಭವಿಸಲೇಬೇಕು. ಎಲ್ಲಿಯವರೆಗೆ?  ಸಾಯುವವರೆಗೆ ತಾನೇ ? ಆಮೇಲೆ ? ಏನಿಲ್ಲವಲ್ಲ? ಎಂದು ತನ್ನ ವಿಚಿತ್ರ ಹಾಸ್ಯಕ್ಕೆ ತಾನೇ ಪೇಲವದ ನಗೆ ನಕ್ಕು ಮಂತ್ರದ ಕ್ಲಾಸ್ ಗೆ ಹೋಗುತ್ತಿದ್ದೇನೆಂದು ತಿಳಿಸಿ ಹೊರಟೇ ಹೋದ.
ಮನೆಗೆ ಬಂದ ಮಹೇಶ್ ಪತ್ನಿಯ ಜೊತೆಗೆ ಚರ್ಚಿಸಿದ. ಅವಳು ತನಗೆ ಎಲ್ಲವೂ ಗೊತ್ತು. ಈಗ ಅವರ ಕುಟುಂಬದಲ್ಲಿ ಬದಲಾವಣೆ ಕಷ್ಟ ಸಾಧ್ಯ. ಏಕೆಂದರೆ ಯಾರೂ ಯಾರ ಮಾತನ್ನೂ ಕೇಳುವ ಸ್ಥಿತಿ ಮೀರಿಯಾಗಿದೆ. ಯಾರ ಉಪದೇಶವೂ ಅವರುಗಳ ಮನಸ್ಸಿಗೆ ಇಳಿಯುವುದು ಕಷ್ಟ. ದೇವರೇ ಏನಾದರೂ ದಾರಿತೋರಬೇಕಷ್ಟೇ ಎಂದಳು. ಮಹೇಶ್ ಗೂ ಸರಿ ಎನ್ನಿಸಿತು.
ಎರಡು ದಿನಗಳ ಹಿಂದೆ ಮಹೇಶ್ ನ ಪತ್ನಿಗೆ ಇದ್ದಕ್ಕಿದ್ದಂತೆ ಫೋನ್ ಕಾಲ್ ಬಂತು. ಅವಳು ಕ್ಷಣಕಾಲ ನಿಶ್ಚೇಷ್ಟಿತಳಾದಳು. ಎದುರಲ್ಲೇ ಕುಳಿತಿದ್ದ ಮಹೇಶ್ ಗಾಬರಿಯಿಂದ ವಿಚಾರಿಸಿದಾಗ.ಅಳುತ್ತಾ ಅವಿನಾಶ್ ಮರಣಿಸಿದ ವಿಷಯ ತಿಳಿಸಿದಳು. ಮಹೇಶ್ ಗೆ ಕಣ್ಣು ಕತ್ತಲಿಟ್ಟಂತಾಯಿತು. ತಕ್ಷಣವೇ ಸಾವರಿಸಿಕೊಂಡು ಮಹೇಶ್ ದಂಪತಿಗಳು ಅವಿನಾಶ್ ಮನೆಗೆ ಭೇಟಿ ನೀಡಿದರು.
ಅವಿನಾಶ್ ನ ಶವ ಹೊರಗೆ ವೆರಾಂಡದಲ್ಲಿ ಇಡಲ್ಪಟ್ಟಿದೆ. ಮುಖದಲ್ಲಿ ಎಂಥದೋ ವಿಲಕ್ಷಣ ತೃಪ್ತ ಭಾವ.  ಕಡೆಗೂ ಈ ಜಂಜಾಟಗಳಿಂದ ಮುಕ್ತಿ ಸಿಕ್ಕಿದ್ದಕ್ಕೆ ದೇವನಿಗೆ ಕೃತಜ್ಞತೆ ಸಲ್ಲಿಸಿದ ಭಾವ.  ನಳಿನಿ ಜೋರಾಗಿ ಅಳುತ್ತಿದ್ದಾಳೆ. ಮಗಳೂ ಅಳುತ್ತಿದ್ದಾಳೆ‌. ಮಗ ಅತ್ತು ಕಣ್ಣು ಕೆಂಪಾಗಿವೆ. ಇದೆಲ್ಲ ಹೇಗಾಯಿತು ಎಂದು ವಿಚಾರಿಸಿದಾಗ ಸಂಜೆ ಐದರ ವೇಳೆ ವಾಕಿಂಗ್ ಗೆ ತೆರಳಿದ್ದನಂತೆ. ಇದ್ದಕ್ಕಿದ್ದಂತೆ ತಲೆ ತಿರುಗಿದಂತಾಗಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದ ಪರಿಣಾಮ ಕೂಡಲೇ ಪ್ರಜ್ಞಾಹೀನನಾಗಿದ್ದಾನೆ. ಅಲ್ಲಿಯೇ ಹತ್ತಿರ ಇದ್ದವರ್ಯಾರೋ ಆಂಬುಲೆನ್ಸ್ ಗೆ ಫೋನ್ ಮಾಡಿ ಹತ್ತಿರವಿದ್ದ ಅಸ್ಪತ್ರೆಗೆ ಒಯ್ಯುವ ವೇಳೆಗೆ ಸಾವು ಸಂಭವಿಸಿದೆ ಎಂಬ ವಿಷಯ ತಿಳಿಯಿತು.
ಮಹೇಶ್ ನ ಕಣ್ಣಿಂದ ಕಣ್ಣೀರು ಧಾರಾಕಾರವಾಗಿ ಹರಿದು ಹೋಗುತ್ತಿದೆ. ನಳಿನಿ " ನೋಡಿ , ಹೇಗೆ ನಮ್ಮನ್ನು ಬಿಟ್ಟೇ ಹೋದರು. ಹೀಗೆ ಮಾಡಬಹುದೇ " ಎಂದು ಮಹೇಶ್ ನ ನೋಡಿ ಗೋಳಿಡುತ್ತಾ ಹೇಳಿದಳು. ಮಗಳೂ ನಾನು ಬದುಕಿರುವುದಿಲ್ಲ. ನಾನೂ ಅಪ್ಪನ ಜೊತೆಗೆ ಹೋಗುತ್ತೇನೆ ಎಂದೆಲ್ಲಾ ದುಃಖದಲ್ಲಿ ಬಡಬಡಿಸಲಾರಂಭಿಸಿದ್ದಳು.
" ಬಾಯಿ ಮುಚ್ಚಿ. ನಾಯಿಗಳಾ, ನಿಮ್ಮಂಥವರಿಗೆ ಮನೆ ಏಕೆ? ಅಪ್ಪ ಏಕೆ? ನಿಮ್ಮ ನಿಮ್ಮ ಸ್ವಪ್ರತಿಷ್ಠೆಗಳೇ ಅತಿಯಾದವಲ್ಲವೇ? ಅಪ್ಪನ ಮಾತು ಕೇಳುವುದಕ್ಕೆ ನಿಮಗಿಬ್ಬರಿಗೂ ನಿಮ್ಮ ಗೌರವಕ್ಕೆ ಧಕ್ಕೆ ಎಂದುಕೊಂಡ ಬೇವರ್ಸಿಗಳು ನೀವು. ದುರಂಹಂಕಾರದಿಂದ ಮೆರೆದಿದ್ದೂ ಅಲ್ಲದೆ ನನ್ನ ಬಂಗಾರದಂಥ ಸ್ನೇಹಿತನ ಪ್ರಾಣವನ್ನೇ ಬಲಿ ಪಡೆದಿರಲ್ಲಾ. ನೀವಿಬ್ಬರೂ ಮನುಷ್ಯಜಾತಿಯವರಾ? ಏನಮ್ಮಾ ನಳಿನಿ , ನೀನೊಂದು ಹೆಣ್ಣಾ? ಬೀದಿ ಬೀದಿ ಸುತ್ತುತ್ತಾ ಬೆಂದ ಮನೆ ಯಾವುದು ಬೇಯದ ಮನೆ ಯಾವುದು ಎಂದು ಅಲೆಯುತ್ತಾ ನಿನ್ನ ಮನೆಗೇ ಕೊಳ್ಳಿಯಿಟ್ಟು ಬಿಟ್ಟೆಯಲ್ಲಮ್ಮಾ? ಏನು ಸಾಧಿಸಿದೆ ಹೇಳು ? ಸಮಾನತೆ ಸಾಧಿಸಲಿಕ್ಕಾ? ಅಥವಾ ಅವಿನಾಶ್ ಗಿಂತ ನಾನು ಹೆಚ್ಚು ಎಂದು ತೋರಿಸಲಿಕ್ಕಾ? ನಿನ್ನ ಯೋಗ್ಯತೆಗಿಷ್ಟು. ನೀನು ನನ್ನ ಸ್ನೇಹಿತನಿಗೆ ಎಂದೂ ಯಾವತ್ತೂ ಸಮಾನವಾಗಲು ಸಾಧ್ಯವೇ ಇಲ್ಲ. ಈಗ ? ನನ್ನ ಸ್ನೇಹಿತ ಬದುಕಿದ್ದಾಗಲೇ ಚೆನ್ನಾಗಿ ನೋಡಿಕೊಳ್ಳಲಾಗದ ನಿಮ್ಮಂಥವರಿಗೆ ಮದುವೆ ಏಕೆ, ಮನೆ ಏಕೆ, ಮಕ್ಕಳೇಕೆ, ? ದುಡಿದೂ ದುಡಿದೂ ಸಾಯಲಿಕ್ಕೆ ನಿಮಗೆ ಗಂಡ ಅಪ್ಪ ಬೇಕು ಅಲ್ಲವೇ? ಥೋ ನಿಮ್ಮ ಸ್ವಾರ್ಥ ಲಾಲಸೆಗಿಷ್ಟು. ನಿಮಗೇನಾದರೂ ಮನುಷ್ಯತ್ವ ಎನ್ನುವ ಪದದ ಅರ್ಥ ತಿಳಿದಿದ್ದರೆ ನಾಚಿಕೆಯಾಗಬೇಕು "  ಎಂದು ಇನ್ನೂ ಏನೆಲ್ಲಾ ಬೈದು ಕ್ಯಾಕರಿಸಿ ಆ ಮೂವರ ಮುಖಗಳಿಗೆ ಉಗಿಯ ಬೇಕೆಂದು ಕೊಂಡ. ಆದರೆ ಉಕ್ಕಿ ಬರುತ್ತಿದ್ದ ದುಃಖ ಗಂಟಲನ್ನು ಕಚ್ಚಿ ಹಿಡಿದು ದನಿ ಹೊರಬರದಂತೆ ತಡೆದಿತ್ತು.
ಈ ದುಃಖದ ನಡುವೆಯೂ  ಮಹೇಶ್ ಆಗ ಅಲ್ಲೊಂದು ವಿಷಯ ಗಮನಿಸಿದ. ಆ ಬಡಾವಣೆಯ ಅಕ್ಕ ಪಕ್ಕದ ಮನೆಯವರು , ಮತ್ತು ಅವಿನಾಶ್ ನ ಮೂವರು ಬಂಧುಗಳನ್ನು ಮತ್ತು ಕೆಲವು ಮಂತ್ರದ ತರಗತಿಯ ಸಹಪಾಠಿಗಳನ್ನು ಬಿಟ್ಟರೆ ಇನ್ಯಾರೂ ಕಾಣಲಿಲ್ಲ. ಹಿಂದಿನ ದಿನ ಸಂಜೆ ಸಾವು ಸಂಭವಿಸಿದ್ದು ಮಾರನೆಯ ದಿನ ಹೆಣವನ್ನು ಸಾಗಿಸುವವರೆಗೂ ಅವಿನಾಶ್ ನ ಸಂಬಂಧಿಕರು ಹೆಚ್ಚಿನವರು ಯಾರೂ ಬಂದಂತೆ ಕಾಣಲಿಲ್ಲ. ಕಾರಣ ತಿಳಿದ ಮಹೇಶ್ ಸ್ಥಂಭೀಭೂತನಾಗಿದ್ದ. ತನ್ನ ಕಾಲ ಮೇಲೆ ನಿಂತು ಸ್ವಾಭಿಮಾನಿಯಾಗಿ ಬಾಳುತ್ತಿದ್ದ ಅವಿನಾಶ್ ಕಂಡರೆ ಕೆಲವು ಸಂಬಂಧಿಕರಿಗೆ ಮತ್ಸರವಂತೆ. ಅಬ್ಬಾ ಮನುಷ್ಯನ ಸಾವಿನಲ್ಲೂ ದ್ವೇಷ ವೈಮನಸ್ಸುಗಳನ್ನು ಸಾಧಿಸಬೇಕೆ? ಎನ್ನಿಸಿತು . ದುಃಖದಲ್ಲಿಯೇ ಮಹೇಶ್ ಕಾರ್ಯ ಪ್ರವೃತ್ತನಾದ. ಕೆಲವೆಡೆ ಫೋನ್ ಮಾಡಿ ಶವ ಸಂಸ್ಕಾರಕ್ಕೆ ಮತ್ತು ಮುಂದಿನ ಕಾರ್ಯಗಳಿಗೆ ತಕ್ಕ ಏರ್ಪಾಡು ಮಾಡಿದ.
ಮಹೇಶ್ ಮನಸ್ಸು ನಡುನಡುವೆ ಅವಿನಾಶ್ ಬಗ್ಗೆ ಚಿಂತಿಸಲಾರಂಭಿಸಿತ್ತು. ಆ ಜೀವ ಅದಿನ್ನೆಷ್ಟು ರೋಸಿ ಹೋಗಿರಬಹುದು?  ತೀರಾ ಸಾವನ್ನೇ ಅಪ್ಪುವ ಮಟ್ಟಿಗಾ? ಏಕೋ ಆ ಕ್ಷಣಕ್ಕೆ ಏನಿದ್ದರೇನು ಮನಸ್ಸಿಗೆ ಶಾಂತಿ ಸಮಾಧಾನಗಳೇ ಇಲ್ಲದೇ ಇದ್ದರೆ?   ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ , ಅಂತ್ಯೇಚ ತವ ಸಾನ್ನಿಧ್ಯಂ ದೇಹಿಮೇ ಕರುಣಾಕರ ಎನ್ನುವ ಅವಿನಾಶ್ ನ ನಿತ್ಯ ಪ್ರಾರ್ಥನೆಗೆ ಆ ದೇವ ಅಸ್ತು ಎಂದಿರಬೇಕು ಎನ್ನಿಸಿತು.
ಅನತಿ ದೂರದಲ್ಲಿ ಡಾ. ರಾಜ್ ಕುಮಾರ್ ಅವರ ಸುಶ್ರಾವ್ಯ ಕಂಠದಲ್ಲಿ ಇದು ಯಾರು ಬರೆದ ಕಥೆಯೋ ಎನ್ನುವ ಗೀತೆ ಕೇಳಿಬರುತ್ತಿತ್ತು. 

ಮಾತಿನ ಮದ್ದು
ಮಾತೇ ಮುತ್ತು ಮಾತೇ ಮೃತ್ಯು- ಈ ಗಾದೆ ಜನ ಸಾಮಾನ್ಯರನ್ನು ಕುರಿತು.
ಮದ್ದು ಮಾತಿನದ್ದೋ ಅಥವಾ ರಾಸಾಯನಿಕದ್ದೋ, ಜೀವರಕ್ಷಕವಾಗಬೇಕೇ ಪರಂತು ಪ್ರಾಣಭಕ್ಷಕವಾಗಕೂಡದು.
ಡಾಕ್ಟರ್ ಎಂದರೆ ನನ್ನ ಕಣ್ಣಾಲಿಗಳು ತಮಗೆ ತಾವೇ ತುಂಬಿ ಕೊಳ್ಳುತ್ತವೆ.
ನಾನಾಗ ಸಣ್ಣ ಹುಡುಗ. ಬಹುಶಃ ಐದನೇ ಅಥವಾ ಆರನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ನಮ್ಮ ತಂದೆ ಸಾಗರದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯ ಸರ್ಕಾರೀ ಆಸ್ಪತ್ರೆಯಲ್ಲಿ ಡಾಕ್ಟರ್ ರಂಗೇಗೌಡರು ಅಂತ. ಬಹುಶಃ ನಮ್ಮ ಪಾಲಿಗೆ ದೇವರೇ ಎನ್ನುವಷ್ಟು ಗೌರವ . ನಮ್ಮ ಮನೆಯಲ್ಲಿ ಯಾರಿಗೇ ಏನೇ ಜಡ್ಡು ಜಾಪತ್ರೆಗಳಾದರೂ ಸೀದಾ ಸರ್ಕಾರೀ ಆಸ್ಪತ್ರೆಗೆ ಭೇಟಿ ನೀಡಿ ರಂಗೇಗೌಡರು ಒಮ್ಮೆ ಪಲ್ಸ್ ಹಿಡಿದು ಮಂದಹಾಸದಲ್ಲಿ " ಇಷ್ಟಕ್ಕೆಲ್ಲಾ ಹೆದರಿಕೊಳ್ತಾರೇನೋ . ಥೂ ನಿನ್ನ. ಮುಠ್ಠಾಳ. ಈ ಮೂರು ಮಾತ್ರೆ ತಗೋ. ಎಲ್ಲಾ ಸರಿಹೋಗುತ್ತದೆ. " ಎಂದುಬಿಟ್ಟರೆ ದೊಡ್ಡ ಪ್ರಮಾಣದ ಅಭಯವೇ ದೊರೆತಷ್ಟು ಸಮಾಧಾನ ನನ್ನ ತಂದೆ ತಾಯಿಗಳಿಗೆ.
ನಮ್ಮ ಮನೆಯಲ್ಲಿ ಯಾರೇ ಆಸ್ಪತ್ರೆಗೆ ಹೋದರೂ ಅಥವಾ ಇತರರು ಯಾರೇ ಆಸ್ಪತ್ರೆಗೆ ಹೋದರೂ ರಂಗೇಗೌಡರು ರೋಗಿಗಳನ್ನು ನೋಡುತ್ತಿದ್ದ, ಉಪಚರಿಸುತ್ತಿದ್ದ ಪರಿ ಅನನ್ಯ.  ಹೀಗಿರುವಾಗ ಒಮ್ಮೆ ನನಗೆ ವಿಪರೀತ ಛಳಿ ಜ್ವರ ಮೈಕೈ ನೋವು ಬಂದಿತು.  ನಮ್ಮಪ್ಪ ಅಮ್ಮ ಕಂಗಾಲಾಗಿ ಹೋದರು. ಸಾಲದ್ದಕ್ಕೆ ನಮ್ಮಮ್ಮನಿಗೂ ಜ್ವರ. ದಿಕ್ಕು ತೋಚದೆ ನಮ್ಮಪ್ಪ ನಮ್ಮಿಬ್ಬರನ್ನೂ ರಂಗೇಗೌಡರ ಬಳಿ ಒಯ್ದರು. ಗೌಡರು  ಸ್ಥೂಲವಾಗಿ ಪರೀಕ್ಷೆ ನಡೆಸಿ ಯಥಾ ಪ್ರಕಾರ ಮೂರು ಮಾತ್ರೆ ಕೊಟ್ಟು ಕಳಿಸಿದರು.
ಈ ಬಾರಿ ದುರದೃಷ್ಟ ಹೆಗಲೇರಿತ್ತು. ಮಾತ್ರೆ ತೆಗೆದುಕೊಂಡಾಗ ಮಾತ್ರ ಕಡಿಮೆ ಆಗುತ್ತಿದ್ದ ಛಳಿ ಜ್ವರ ಮತ್ತೆ ಮರುಕಳಿಸುತ್ತಿತ್ತು. ತಡಮಾಡದೆ ನಮ್ಮಪ್ಪ ಮತ್ತೆ ರಂಗೇಗೌಡರ ಬಳಿಸಾರಿದರು. ಈ ಬಾರಿ ಗೌಡರು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದಾಗ ನಮ್ಮಪ್ಪ ಅಲ್ಲೇ ಭಯಗೊಂಡರು. ಆಗ ಗೌಡರು " ರಾಯರೇ ಯಾಕೆ ಧೈರ್ಯ ಕಳ್ಕೋತೀರಿ? ನಾನಿದೀನಿ. ದೇವರಿದಾನೆ‌. ನಿಮ್ಮ ಮಗನಿಗೆ ಅಂಥಾ ಸೀರಿಯಸ್ ಏನೂ ಆಗಿಲ್ಲ. ಅವನಿಗೆ ಪ್ಯಾರಾ ಟೈಫಾಯಿಡ್ ಆಗಿದೆ. ಅದಕ್ಕೆ ಮನೆಯಲ್ಲಿ ಸೂಕ್ತ ಉಪಚಾರ ಸಿಗುವುದಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಎಂದೆ " ಎಂದರು. ಆಗ ನಮ್ಮಪ್ಪನಿಗೆ ಹೋದ ಜೀವ ಮರಳಿ ಬಂದಂತಹ ಭಾವ. ಸುಮಾರು ಹದಿನೈದು ದಿನಗಳ ಕಾಲ ಆಸ್ಪತ್ರೆ ವಾಸ ಮುಗಿಸಿ ಮನೆಗೆ ಮರಳುವಾಗ ಗೌಡರನ್ನು ಕಂಡು " ಹೋಗಿಬರುತ್ತೇನೆ ಡಾಕ್ಟ್ರೇ " ಎಂದಾಗ ಡಾಕ್ಟರ್ " ಹೋಗು. ಬರಬೇಡ ಮತ್ತೆ. " ಎಂದು ನಗುನಗುತ್ತಾ ಬೀಳ್ಕೊಟ್ಟಿದ್ದರು. ಅವರ ಕೊನೆಯ ಮಾತಿನ ಅಂತರಾರ್ಥ ನನಗೂ ಅರ್ಥ ಆಗಿತ್ತು.
ಶೃಂಗೇರಿಯಲ್ಲಿ ನಾನು ಡಿಗ್ರಿ ಮಾಡುವಾಗ ಡಾಕ್ಟರ್ ಒಬ್ಬರ ಬಗ್ಗೆ ತಿಳಿದುಬಂತು. ಡಾಕ್ಟರ್ ರಾಮಚಂದ್ರ ಅಂತ. ನನ್ನ ಸ್ನೇಹಿತ ತನಗೆ ಒಮ್ಮೆ ಅನಾರೋಗ್ಯವಾದಾಗ  ಅವರ ಬಳಿ ಅವನ ಜೊತೆಗೆ ಹೋಗಿದ್ದೆ. ಅವತ್ತು ತುಂಬಾ ರಶ್ ಇತ್ತು. ಕ್ಲೀನಿಕ್ ನಲ್ಲಿ ಕಾಲಿಡಲು ಆಗದಷ್ಟು ರೋಗಿಗಳು. ಒಬ್ಬೊಬ್ಬರಾಗಿ ಒಳಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಹೊರಗೆ ಬರುತ್ತಿದ್ದರು. ಇಬ್ಬರಾದ ಮೇಲೆ ನನ್ನ ಸ್ನೇಹಿತನ ಸರದಿ. ಆ ಇಬ್ಬರಲ್ಲಿ ಮೊದಲನೆಯವ ನರಳುತ್ತಾ ಒಳಗೆ ಹೋದ. ನಾವಿಬ್ಬರೂ ಮುಂದೆ ಬಂದಿದ್ದ ಕಾರಣ ರೋಗಿ ಮತ್ತು ವೈದ್ಯರ ನಡುವಿನ ಸಂಭಾಷಣೆ ಸ್ಪಷ್ಟವಾಗಿಯೇ ಕೇಳುತ್ತಿತ್ತು
ಡಾ. ಎಂತಾಯ್ತ?
ರೋ. ತುಂಬಾ ಹೊಟ್ಟೆ ನೋವು ಡಾಕ್ಟರ್.
ಡಾ. ಸಿಕ್ತು ಅಂತ ಕಸ ಪಸ ತಿಂದ್ಯನಾ ಪರದೇಶಿ.?
ರೋ.ಇಲ್ಲ ಡಾಕ್ಟರ್
ಡಾ. ನಿನ್ನೆ ಎಂತ ತಿಂದೆ ಸಾಯುಕೆ?
ರೋಗಿ ಏನೋ ಹೇಳಿದ.
ಡಾ. ನಿನಗೆಂತ ದೆವ್ವ ಮೆಟ್ಕಂಡಿದಿಯೇನಾ. ಹಾಳು ಮೂಳು ತಿನ್ನುದು. ಸಿಕ್ಕ ಸಿಕ್ಕಲ್ಲಿ ಬಾಯಾಡ್ಸುದು. ಹಡದಿ ದನದ ಥರಾ. ಇಲ್ಲಿ ಬನ್ಕಂಡ್ ಸರಿ ಮಾಡ್ರಿ ಅಂದ್ರೆ ನಾ ಎಂತ ಮಾಡ್ಲೋ ನಿನ್ನ ಹೆಣ?
ರೋ. ಎಂತಾರೂ ಮಾಡಿ ಡಾಕ್ಟರ್.
ಡಾ. ಬಾಟಲಿ ತಂದಿದಿಯೇನಾ ?
ರೊ. ತಂದಿದೀನಿ ಡಾಕ್ಟರ್
ಡಾ. ಚಂದಮಾಡಿ ತೊಳ್ದಿದೀಯೇನಾ ಬಾಟ್ಳೀನಾ?
ರೊ. ತೊಳ್ದಿದೀನಿ ಡಾಕ್ಟರ್
ಡಾ. ಮುಚ್ಚಳ ತೆಗೆಯೋಕೂ ಹೇಳ್ಬೇಕೇನಾ?
ರೋ. ತೆಗ್ದೆ ಡಾಕ್ಟರ್
ಡಾ. ಇಲ್ಲಿ ಕೊಡಾ. ಇದ್ರಲ್ಲಿ ಔಷಧಿ ಉಂಟು. ನಾ ಹೇಳಿದ ಹಾಗೆ ತಗೊಂಡ್ರೆ ಚಂದ ಬದುಕ್ತೀ. ಇಲ್ಲಾ ಹೀಗೇ ನರಳಿ ಸಾಯ್ತಿ. ಮತ್ತೆ, ಎಂತ ಡಿಸೈಡ್ ಮಾಡ್ದಿ? ಸಾಯುಕಾ ? ಬದುಕುಕಾ?
ಡಾ. ಮತ್ತೆ ಮರೀದೇ ಔಷಧಿ ತಕೋ.
ರೋ‌. ಸರಿ ಡಾಕ್ಟರ್. ಫೀಸ್ ಎಷ್ಟು?
ಡಾಕ್ಟರ್ ಫೀಸ್ ಹೇಳಿದರು.
ರೋ. ಅಯ್ಯೋ ಡಾಕ್ಟರ್ ನಾನು ದುಡ್ಡು ತರೋದೇ ಮರ್ತೆನಲ್ಲಾ. ಎಂತ ಮಾಡ್ಲಿ?
ಡಾ. ನೀಯೇನು ನಾಳೆನೇ ಸಾಯುದಿಲ್ಲಲ್ಲ. ಆದರೆ ನಾಳೆ ತಂದ್ಕೊಡು. ಇಲ್ಲಾ ನೀ ಸತ್ತೇ ಹೋದರೆ ನಿನ್ನ ಹೆಣದ ಮೇಲೆ ಹಾಕ್ಕೋ. ಸರಿಯಾ ? . ನಿನ್ನ ದುಡ್ಡಿಲ್ಲದಿದ್ರೆ ನಾ ಸಾಯುದಿಲ್ಲಲ್ಲ. ನಿನ್ ಕೈಲಿ ಕೊಡೂಕೆ  ಆಗುದಿಲ್ಲ ಅಂದ್ರೆ ದುಡ್ಡೇನೂ ಬ್ಯಾಡ.     ಇನ್ಯಾರೋ ಅಲ್ಲಿ?
ಈ ರೋಗಿ ಹೊರಗೆ ಬಂದ. ನಾನು ತಡೆಯಲಾರದೆ ಆ ರೋಗಿಯನ್ನೇ ಕೇಳಿದೆ. ಅಲ್ರೀ ಡಾಕ್ಟರ್ ನಿಮ್ಮನ್ನು ಅಷ್ಟು ಬೈತಿದಾರೆ. ನಿಮಗೆ ಬೇಜಾರೇ ಆಗಿಲ್ವಾ?  ಅಂದೆ ಅದಕ್ಕೆ ನನ್ನ ಸ್ನೇಹಿತ ಅವನಿಗೆ ಹೋಗಲು ಹೇಳಿ ಈ ಡಾಕ್ಟರ್ ವಿಷಯ ಹೇಳಿದ. ಇವರು ಮಾತಾಡೋದೇ ಹೀಗೆ ಕಣೋ. ತಿಳಿದೋರು ಯಾರಿಗೂ ಬೇಜಾರಾಗಲ್ಲ. ಹೊಸಬರಿಗೆ ಬೇಜಾರಾದ್ರೂ ಡಾಕ್ಟರ್ ಒಳ್ಳೇ ಗುಣ ಕೈಗುಣ ಎರಡೂ ಅವರ ಬಾಯಿ ಮುಚ್ಚಿಸತ್ತೆ ಅಂದ. ನನಗೂ ಹೌದು ಅನ್ನಿಸಿತ್ತು. ಇಲ್ದೇ ಇದ್ದರೆ ಈ ಪಾಟಿ ಬೈಯೋ ಡಾಕ್ಟರ್ ನ ಜನ ಹಿಗ್ಗಾಮುಗ್ಗಾ ಬಾರ್ಸೊಲ್ಲವೇ ಎಂದುಕೊಂಡು ಸುಮ್ಮನಾದೆ. ನನ್ನ ಸ್ನೇಹಿತನ ಸರದಿ ಬಂದು ಅವನಿಗೂ ಇದೇ ರೀತಿ ಮಂಗಳಾರತಿ ಆಗಿದ್ದು ಸ್ನೇಹಿತನ ಮಾತಿಗೆ ಪುಷ್ಟಿ ನೀಡಿತ್ತು

ಕೆಲವು ವರ್ಷಗಳ ನಂತರ ನಾನು ಬೆಂಗಳೂರಿನಲ್ಲಿ ಕೆಲಸ ಮಾಡಲು ಬಂದೆ. ಡಿಗ್ರಿ ಮುಗಿಸಿ ಸಿಕ್ಕ  ಕೆಲಸವೊಂದನ್ನು ಮಾಡುತ್ತಿದ್ದೆ.ಒಂದು ದಿನ ಇದ್ದಕ್ಕಿದ್ದಂತೆ ಅಪ್ಪ ನಾನಿದ್ದ ರೂಮಿಗೆ ಬಂದರು. ಮುಖ ಪೇಲವವಾಗಿ ಹೋಗಿತ್ತು. ಏನು ಎತ್ತ ಎಂದು ವಿಚಾರಿಸಲು ಹೇಳಲಾರಂಭಿಸಿದರು . ನನನ್ನ ಚಿಕ್ಕಪ್ಪ ಈ ನಡುವೆ ತಾನು ತಾನೇ  ಮಾತನಾಡಿಕೊಳ್ಳೋದು. ಕಾರಣ ಇಲ್ಲದೇ ನಗೋದು. ಅಳೋದು.ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳೋದು.ಇತ್ಯಾದಿಯಾಗಿ ಆಡಲಾರಂಭಿಸಿದ್ದರೆಂದು ಹತ್ತಿರದ ವೈದ್ಯರಿಗೆ ತೋರಿಸಿದಾಗ ಅವರು ಒಂದು ದಿನ ಇಡೀ ತಮಗೆ ತಿಳಿದ ಪರೀಕ್ಷೆಗಳನ್ನು ಮಾಡಿ ಚಿಕ್ಕಮ್ಮನಿಗೆ ಹೇಳಿದರಂತೆ. " ನೋಡಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಚಿಕ್ಕಪ್ಪನನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ಕರೆದೊಯ್ಯಿರಿ " ಎಂದು ಹೇಳಿ ಧೈರ್ಯ ತುಂಬಿ ಕಳಿಸಿದರಂತೆ. ಆ ವಿಷಯ ತಿಳಿದ ನಮ್ಮಪ್ಪ ಸೀದಾ ನನ್ನ ಬಳಿ ಬಂದಿದ್ದರು.
ತಕ್ಷಣವೇ ಚಿಕ್ಕಪ್ಪನನ್ನು ನಿಮ್ಹಾನ್ಸ್ ಗೆ ದಾಖಲಿಸಿದೆವು. ಚಿಕ್ಕಪ್ಪ ಪ್ರಜ್ಞಾಹೀನನಾಗಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದಾರೆ. ಚಿಕ್ಕಮ್ಮ ಅಳುತ್ತಾ ನಿಂತಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ನರರೋಗ ವೈದ್ಯರೊಬ್ಬರು ಬಂದರು. ಚಿಕ್ಕಪ್ಪನ ಕೈ ಹಿಡಿದು ಏನೋ ಪರೀಕ್ಷೆಗಳನ್ನು ನಡೆಸಿದರು. ಸೀದಾ ಚಿಕ್ಕಮ್ಮನ ಕಡೆ ತಿರುಗಿದವರೇ " ಈ ಪೇಷೆಂಟ್ ಕಡೆಯೋರು ನೀನೇ  ಏನಮ್ಮಾ?  ಈವಾಗ್ಲಾ ಕರ್ಕೊಂಬರೋದು? ಈಗ ಏನೂ ಮಾಡೋಕಾಗಲ್ಲ. ನಿನ್ನ ಗಂಡ ಸತ್ತೋದ." ಅಂತ ಮುಖದ ಮೇಲೆ ಹೊಡೆದ ಹಾಗೆ ಹೇಳಿ ಹೊರಟೇ ಹೋದರು. ಚಿಕ್ಕಮ್ಮ ಅಲ್ಲೇ ಕುಸಿದೇ ಹೋದಳು. ನನಗೆ ದಿಕ್ಕೇ ತೋಚದೆ ಚಿಕ್ಕಮ್ಮನಿಗೆ ಸಮಾಧಾನ ಮಾಡಿ ಒಂದು ಮಟ್ಟಕ್ಕೆ ತರುವಷ್ಟರಲ್ಲಿ ಸಾಕುಸಾಕಾಗಿಹೋಗಿತ್ತು. ಕಡೆಗೆ ಇನ್ನೊಬ್ಬರು ವೈದ್ಯರು ಬಂದು ಬೇರೆ ಬೇರೆ ಪರೀಕ್ಷೆಗಳನ್ನು ನಡೆಸಲಾರಂಭಿಸಿದರು
ಸುಮಾರು ಒಂದು ವಾರ ಹತ್ತು ದಿನಗಳಲ್ಲಿ ನಾವೆಲ್ಲರೂ ಸೋತು ಸುಣ್ಣವಾಗಿ ಹೋಗಿದ್ದೆವು.
ಚಿಕ್ಕಪ್ಪನ ಶವ ಮನೆಗೆ ತಂದು ಅಂತ್ಯಕ್ರಿಯೆ ನೆರವೇರಿಸಿದೆವು.
ಕೆಲವು ವರ್ಷಗಳ ನಂತರ ನನಗೆ ಮದುವೆ ಆಗಿ ಮಗ ಹುಟ್ಟಿದ. ಅವನಿಗೆ ಒಂದು ವರ್ಷ ತುಂಬಿತ್ತು. ಶಿವರಾತ್ರಿಯ ದಿನ . ಮನೆಯಲ್ಲಿ ಪೂಜೆ ಮಾಡಲು ಕುಳಿತೆ. ಮಗ ಕುರ್ಚಿಯ ಮೇಲಿಂದ ಕೆಳಗೆ ಬಿದ್ದು ಹಣೆಗೆ ಗಾಯ ಮಾಡಿಕೊಂಡ. ಹಣೆಯಿಂದ ಬಳಬಳ ರಕ್ತ ಹರಿಯಲಾರಂಭಿಸಿತ್ತು. ನನಗೆ ಜಂಘಾಬಲವೇ ಉಡುಗಿಹೋಯಿತು. ಮಗುವನ್ನು ಎತ್ತಿಕೊಂಡು ಹತ್ತಿರದ ಡಾಕ್ಟರ್ ಬಳಿ ತೆರಳಿ ಅತೀವ ಆತಂಕದಲ್ಲಿ"  ಡಾಕ್ಟರ್ ದಯವಿಟ್ಟು ಏನಾದರೂ ಮಾಡಿ. " ಎಂದಷ್ಟೇ ಹೇಳಲು ನನಗೆ ಸಾಧ್ಯವಾಗಿದ್ದು. ಹೆದರಿದ್ದ ನನ್ನನ್ನು ಸಮಾಧಾನ ಪಡಿಸುವ ಬದಲಿಗೆ ಆ ಡಾಕ್ಟರ್ "ನೀವೇ ಭಯ ಪಟ್ಟರೆ ನಾವೇನು ಮಾಡಬೇಕು? ಸ್ವಲ್ಪ ತಡ್ಕೊಳ್ರೀ. ಯಾಕ್ಹಂಗಾಡ್ತೀರಾ ? " ಎಂದು ರೇಗಿಬಿಟ್ಟ. ನಾನಿದ್ದ ಅಸಹಾಯಕ ಪರಿಸ್ಥಿತಿಯಲ್ಲಿ  ಹಾಗೂ ಹೀಗೂ ಹಲ್ಲು ಕಚ್ಚಿಕೊಂಡು ಇದನ್ನೆಲ್ಲಾ ಸಹಿಸಿಕೊಂಡೆ. ರೇಗುತ್ತಲೇ ಆ ಡಾಕ್ಟರ್ ನನ್ನ ಮಗುವಿನ ಹಣೆಯ ಮೇಲೆ ಆದ ಗಾಯಕ್ಕೆ ಹೊಲಿಗೆ ಹಾಕಿಬಿಟ್ಟರು.
ಕೆಲವು ದಿನಗಳ ನಂತರ ಮತ್ತೇನೂ ಕಾರಣಕ್ಕೆ ಮಗುವನ್ನು ಹತ್ತಿರದ ಇನ್ನೊಂದು ಡಾಕ್ಟರ್ ಬಳಿ ಕರೆದೊಯ್ದಾಗ " ಯಾವನ್ರೀ ಡಾಕ್ಟರ್, ಈ ಎಳೇ ಮಗು ಹಣೆಗೆ ಹೊಲಿಗೆ ಹಾಕಿದ ಅಡ್ಡಕಸುಬಿ. ಬ್ಯಾಂಡೇಜ್ ಮಾಡಿದ್ರೇ ಸಾಕಿತ್ತು. ಏನು ಜನಗಳಪ್ಪಾ . ಆ ಎಳೇ ಎಷ್ಟು ನೋವು ತಿಂತೋ ಏನೋ "ಎಂದು ನಿಡುಸುಯ್ದರು.
 ನಾನು ಆ ಡಾಕ್ಟರ್ ಗೆ ಥ್ಯಾಂಕ್ಸ್ ಹೇಳಿ ಫೀಸ್ ಕೊಟ್ಟು ಮನೆಗೆ ಬಂದೆ.

 ಉಡುಗೊರೆ

ಹಿಂದೆ ನಮ್ಮನಾಳಿದ ರಾಜ ಮಹಾರಾಜರುಗಳೇ ನೀಡಿದ ಸಮೃದ್ಧ ರಾಷ್ಟ್ರ ನಮಗಿತ್ತ ಉಡುಗೊರೆ.

ನಮ್ಮ ಸಂಪತ್ತನ್ನು ಕಂಡು ಕರುಬಿ  ಆಕ್ರಮಿಸಿ ಲೂಟಿಗೈದು ಬಡ ರಾಷ್ಟ್ರವನ್ನು ನಮಗಿತ್ತ ಉಡುಗೊರೆ

ಧನಕನಕವಲ್ಲದೇ ನಮ್ಮ ಮನೆಯ ಹೆಣ್ಗಳನೂ ಅತ್ಯಾಚಾರಗೈದು  ಕೊಂದುದೇ ಅವರಿತ್ತ ಉಡುಗೊರೆ

ಆಂಗ್ಲರು ವಣಿಕರಾಗಿ ಬಂದು ಧನಿಕರಾಗಿ ಮೆರೆದು ನಮ್ಮ ಹೀನಾಯವಾಗಿ ಕಂಡುದೇ ಉಡುಗೊರೆ


ದೇಶವ ಕತ್ತಲೆಯಲಿಟ್ಟದ್ದೇ  ಕೀಳರಿಮೆ ಬಿತ್ತಿದ್ದೇ ತಾವು ಮಾತ್ರ ಬೆಳೆದದ್ದೇ ದೇಶಕವರಿತ್ತ ಉಡುಗೊರೆ

ನಮಗಾಗಿ ನಾವು ಬಾಳುತ್ತ ನಾವು ನಮ್ಮಿಂದೇನಾಗದೆನುವ ಭಾವ ನಾವು ದೇಶಕ್ಕಿಟ್ಟ ಉಡುಗೊರೆ

ಇಷ್ಟೆಲ್ಲಾ ಇದ್ದರೂ ಬೇಜವಾಬ್ದಾರಿ ರಾಜಕಾರಣಿಯ ಭಾಷಣಕೆ ಚಪ್ಪಾಳೆ ನಾವೀವ ಉಡುಗೊರೆ

ಪ್ರಜಾಪ್ರಭುತ್ವದ ಅತಿದೊಡ್ಡ ಮೋಸವೀ ಹಲರ ಮತವಿರದೀ ಚುನಾವಣೆ ಬಲು ದೊಡ್ಡುಡುಗೊರೆ

ಕರ್ತವ್ಯ ಮರೆತು ಹಕ್ಕಿಗೆ ಹೋರಾಡುತ ನಮ್ಮ ದೇಶವ ನಾವೇ ಹೀನೈಸುವುದು ನಮ್ಮುಡುಗೊರೆ

ಮತ ನೀಡದೇ ಆ ರಜೆಯಲಿ ಮೋಜುಗೈದು ಹೆಮ್ಮೆ ಪಡುವುದು ಬಹ ಪೀಳಿಗೆಗೆ ನಮ್ಮುಡುಗೊರೆ

ಹೀನ ಆಮಿಷಕೆ  ಘನರಾಷ್ಟ್ರ ಬಲಿಯ ಮೂರ್ಖತನ ನಾವೇ ವಿನಿಮಯಿಸಿಕೊಂಬ ಉಡುಗೊರೆ

 ಇದು ಜಮ್ಮುಕಾಶ್ಮೀರದ ಡಾವರ್ ಎಂಬ ಎಂಬ ಹಳ್ಳಿ..ಸತತವಾಗಿ ಬೀಳುವ ಹಿಮಗಳ ಕಾರಣ ಈ ಪ್ರದೇಶದಲ್ಲಿ ಅಲ್ಲಿನ ನಾಗರಿಕರು ವರ್ಷದಲ್ಲಿ ಕೇವಲ 6 ತಿಂಗಳು ಮಾತ್ರ ಅಲ್ಲಿ ವಾಸ ಮಾಡುತ್ತಾರೆ ಉಳಿದ ಸಮಯ ಅಂದರೆ ಚಳಿಗಾಲ ಅಲ್ಲಿ ಮನುಷ್ಯರು ವಾಸಿಸಲು ಅನುಕೂಲವಾಗುವ ವಾತವರಣ ಇರುವುದಿಲ್ಲ..
 ಆದರೆ ನಮ್ಮ ವೀರಯೋಧರು ವರ್ಷಪೂರ್ತಿ ಅಲ್ಲಿಯೇ ಇರುತ್ತಾರೆ.. ಆ ಚಿತ್ರದಲ್ಲಿ ಕಾಣುತ್ತಿರುವ ಬೆಟ್ಟ ಇದೆಯಲ್ಲಾ ಅದರಾಚೆಗೆ ಇರುವುದು ಶತ್ರು ದೇಶ ಪಾಕಿಸ್ತಾನ್...
ರುದ್ರರಮಣೀಯ ಚಿತ್ರದ ಹಿಂದೆ ನಮ್ಮ ಗಡಿ ಕಾಯುವ ವೀರಯೋಧರ ಕರ್ಣಕಠೋರ ಕಥೆಯಿದೆ...
ಆ ಯೋಧರ ಅನಿಸಿಕೆಗಳನ್ನು ಪದ್ಯ ರೂಪದಲ್ಲಿ ಬರೆದಿದ್ದೇನೆ

ಸುತ್ತೆಲ್ಲ ಎಡೆಬಿಡದೆ  ಮಂಜು ಸುರಿಯುತಿದೆ
ಮೂಳೆರಕ್ತವ ಛಳಿಯು ಹೆಪ್ಪುಗಟ್ಟಿಸಿದೆ
ಶತೃವೆಂದೆರಗುವನೋ ಯಾವ ದಿಕ್ಕಿನಲೋ
ಗಡಿಯಲ್ಲಿ ನಿಂತು ನಾ ಕಾಯಲೇಬೇಕಿದೆ

              ಶತೃ ಎದುರಲಿ ನಿಂದು ಬಂದೂಕವೆದೆಗಿಡಲು
              ಮಾನವೀ ಮೌಲ್ಯಗಳ  ತಿಳಿಪರಾರು?
              ಗುಂಡಿಗೆಗೆ ಗುಂಡಿಳಿವ ಮುನ್ನ ಮುಂದಡಿಯಿಡಲು
              ಬಾಳ್ನನಿಶ್ಚಿತತೆಯ ತೋರ್ವರಾರು?

ಅಧಿಕಾರಲಾಲಸೆಗೆ ದೇಶ ಒಡೆದರು ಅಂದು
ಆಂಗ್ಲರಿಂ ಸ್ವಾತಂತ್ರ್ಯ ಪಡೆಯುವಂದು
ದಶಕಗಳೆ ಉರುಳಿದರು ದ್ವೇಷದುರಿನಂದದು
ಈ ಸಾವು ನೋವ್ಗಳಿಗೆ ಕೊನೆಯು ಇನ್ನೆಂದು

               ಡಾವರದ ಮಣ್ಣಿನಲಿ ಕನಸಿನಲಿ  ತಿನಿಸಿನಲಿ
               ಬೀಸುವಲರಲಿ ಹೂವ ಸೌಗಂಧದಲ್ಲಿ
               ಮಕರಂದದಲಿ ಹರಿವ ನೀರ ಹನಿಹನಿಯಲ್ಲಿ
               ರುಧಿರ ವಾಸನೆ ತುಂಬಿ ತುಳುಕುತಿಲ್ಲಿ

ಸೈನಿಕರಿಗಾಗಿಯೇ ಈ ದೇಶವಿದೆಯೇನು
ಸೈನಿಕರು ಮಾತ್ರವೇ ಕಾಯಬೇಕೇನು
ರಾಷ್ಟ್ರರಕ್ಷಣೆ ಹೊಣೆಯು ಪ್ರಜೆಗಳಿಗೆ ಬೇಡೇನು
ಇಂಥ ಸತ್ಕಾರ್ಯಕ್ಕೆ ಮುಂಬನ್ನಿರಿನ್ನು

              ಸೈನಿಕರು ಮಾತ್ರವೇ ದೇಶ ಕಾಯಲು ಬೇಕು
              ಎಂಬ ಭ್ರಾಂತಿಯ ತೊರೆದು ನುಗ್ಗಿ ಬನ್ನಿ
              ಕಾದಲು ಕಾಯಲು ಸಿಂಹ ಗುಂಡಿಗೆ ಬೇಕು
              ಎಂಬ ಸತ್ಯವನೀಗ ಅರಿಯಬನ್ನಿ

ಪ್ರತಿ ನಾಗರಿಕನಿಗೂ ತರಬೇತಿಯನು ನೀಡಿ
ಬಂದೆಲ್ಲ ದೇಶವನು  ಕಾಯಲಿಲ್ಲಿ
ಜಾತಿ ಮತ ಲಿಂಗಗಳ ಬಿಟ್ಟೆಲ್ಲರೊಗ್ಗೂಡಿ
ಗಡಿಯಲಡಿತೆಗೆಯದೆಲೆ ನಿಲ್ಲಲಿಲ್ಲಿ

               ಶಿಸ್ತು ಸಂಯಮ ಮರೆತು ಸ್ವಾರ್ಥದಿಂದಲಿ ಮಲೆತು
               ವಾಕ್ಸಮರದಲಿ ಧೈರ್ಯ ಮೆರೆವವರೆ ಬನ್ನಿ
               ಕೇಳಿಸದು ಕಿವಿಮುಚ್ಚೆ ಇತರರಾಡುವ ಮಾತು
               ಗುಂಡಿಗಾಗತಿಯಿಲ್ಲ ನೋಡಬನ್ನಿ

ಅಧಿಕಾರ ಅಂತಸ್ತು ಅತಿ ಆಸ್ತಿ ಸಂಪತ್ತು
ಇದರಲ್ಲೇ ಮುಳುಗೇಳ್ವ ರಾಜಕಾರಣಿಯೆ
ದೇಶ ಸಂರಕ್ಷಣೆಯ ಹೊಣೆಯ ನೀ ಹೊತ್ತು
ಇಲ್ಲಿ ಬರುವಾ ಮುನ್ನ ಶ್ರಮವನರಿಯೆ

              ಸುತ್ತ ರಕ್ಷಕ ಭಟರು ಕಣ್ಗಾವಲಿನ ನಡುವೆ
              ಮೆರೆದು ಶೌರಿಯ ತೆರದಿ ಆಡುವವರೆಲ್ಲ
              ಕೊರೆವ ಛಳಿಯಲಿ ಬಟ್ಟಬಯಲಿನ ನಡುವೆ
              ನಿಂತಾಗ ತಿಳಿಯುವುದು ಶೌರ್ಯವೆಲ್ಲ

ಶತೃವನು ಕೊಂದಾಗ ಮೆಚ್ಚದೆಲೆ ಹೊಗಳದೆಲೆ
ಅದರಲ್ಲೂ ಲಾಭವು ನಿಮಗೆ ಸಿಗೆ ಸಾಕು
ಜೀವಕಾಪತ್ತಿಲ್ಲ ಉಂಬುವುದು ಖಚಿತವಿರೆ
ದೇಶ ಕಾಯುವ ಕೆಲಸ ಏಕೆ ಬೇಕು?

                 ನಿತ್ಯ ದೀಪಾವಳಿ ನಡೆದಿಹುದು ಇಲ್ಲೆಲ್ಲ
                 ಬರಲಿ ಪರಿಸರವಾದಿ ಮಾಲಿನ್ಯ ತಡೆಗೆ
                 ಸಿಡಿದ ಮದ್ದಿನಿಂ ಗಂಧಕದ ಹೊಗೆ ಎಲ್ಲ
                 ಶುದ್ಧ ಹವೆಯದು ಸಿಗಲಿ ನಮ್ಮ ನಾಸಿಕಕೆ

ಮೈಕು ಸಿಕ್ಕೊಡೆ ಕೊರೆವ ಬುದ್ದಿಜೀವಿಗಳೆಲ್ಲ
ಪಾಮರರ ಬಿಟ್ಟರಿಗಳೆದುರೊರಲಿರೈ
ಬೇಸತ್ತು ಭಾಷಣಕೆ ಓಡೆ ಶತೃಗಳೆಲ್ಲ
ಕೂಗಿರೈ ಆಗೊಮ್ಮೆ ಭಾರತಿಗೆ ಜೈ

ಸದಾ ದೇಶಭಕ್ತಿ , ಸೈನಿಕರು ಎಂದರೆ ನನ್ನ ಎದೆ ವಿಸ್ತಾರವಾಗುತ್ತದೆ. ಮನಸ್ಸಿನಲ್ಲಿ ಸದಾ ಅನಿರ್ವಚನೀಯ ಗೌರವ. ನಾನು ಪಾಠ ಮಾಡುವಾಗಲೂ ನನ್ನ ಕರ್ಮಭೂಮಿ ಭಾರತದ ಬಗ್ಗೆ ದೇಶಪ್ರೇಮೋತ್ತೇಜಕ ಮಾತುಗಳನ್ನು ಆಡಿಯೇ ಆಡುತ್ತೇನೆ. ಒಮ್ಮೆಯಂತೂ ನನ್ನ ಮಾತಿನಿಂದ ಒಬ್ಬ ವಿದ್ಯಾರ್ಥಿ ಎಷ್ಟು ದೇಶಭಕ್ತಿಯನ್ನು ಹೃದಯದ ತುಂಬಾ ತುಂಬಿಸಿಟ್ಟುಕೊಂಡಿದ್ದನೆಂದರೆ ದೇಶದ ಬಗ್ಗೆ ಹೀನಾಯವಾಗಿ ಮಾತನಾಡಿದ ತನ್ನ ಸಹಪಾಠಿಯ ಕೆನ್ನೆಗೆ ಬಾರಿಸಿದ್ದ. ಅವನನ್ನು ಪ್ರಾಂಶುಪಾಲರ ಬಳಿ ಶಿಸ್ತಿನ ಕ್ರಮಕ್ಕೆ ಒಯ್ದಾಗ ನನ್ನ ರಾಷ್ಟ್ರದ ಬಗ್ಗೆ ಕೆಟ್ಟದಾಗಿ ಆಲೋಚಿಸುವ ಮಾತನಾಡುವ ಯಾರಿಗಾದರೂ ನಾನು ಇದೇ ರೀತಿ ಮಾಡುತ್ತೇನೆ. ನನ್ನದು ತಪ್ಪಿದ್ದರೆ ನನ್ನನ್ನು ಶಿಕ್ಷಿಸಿ ಎಂದಿದ್ದ. ನನ್ನ ರಾಷ್ಟ್ರದ ಬಗೆಗೆ ನನ್ನ ವಿದ್ಯಾರ್ಥಿಗಳು ಹೀನಾಯವಾಗಿ ನನ್ನೆದುರು ಮಾತನಾಡದಂತೆ ತಾಕೀತು ಮಾಡುವುದರ ಫಲ ನನ್ನ ಕೆಲವು ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರಿ ದೇಶಸೇವೆ ಮಾಡುತ್ತಿದ್ದಾರೆ ಎಂದು ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿಕೊಳ್ಳುತ್ತೇನೆ. ನನಗಂತೂ ಆ ಸುಯೋಗ ಕೂಡಿಬರಲಿಲ್ಲವೆಂಬ ಖಿನ್ನತೆ ನನ್ನನ್ನು ಸದಾ ಕಾಡುತ್ತದೆಯಾದರೂ ನನ್ನ ವಿದ್ಯಾರ್ಥಿಗಳನ್ನು ನೆನೆದು ನನ್ನ ಖಿನ್ನತೆಯಿಂದ ಹೊರಬರುತ್ತೇನೆ.
ಜಯ ಭಾರತ ಜಯ ಭಾರತ ಜಯಜಯ ಭಾರತ 
               
               











ಗುರುವಿನಡಿದಾವರೆಗಳಿಗೆ

ಸಚ್ಚಿದಾನಂದ ರೂಪಾಯ ಬಿಂದು ನಾದಾಂತರಾತ್ಮನೇ  ಆದಿಮಧ್ಯಾಂತ ಶೂನ್ಯಾಯ ಗುರೂಣಾಂ ಗುರುವೇ ನಮಃ
ಅಂತಹ ಗುರುವಿಗೆ ಶಿರಸಾಷ್ಟಾಂಗ ಪ್ರಣಾಮಗಳು
ಚಿತ್ತದನುಭವ ಭಾವ ಸಂಭಾವನೆಗಳೆಲ್ಲ ।.   ಭತ್ತವದನು ವಿಚಾರಯುಕ್ತಿಗಳು ಕುಟ್ಟೆ ॥
ತತ್ತ್ವತಂಡುಲ ದೊರೆಗುಮದು ವಿವೇಚಿತತತ್ತ್ವ ।. ನಿತ್ಯ ಭೋಜನ ನಮಗೆ - ಮಂಕುತಿಮ್ಮ ॥
ನಮ್ಮ ಮನಸ್ಸಿನಲ್ಲಿ ಬರುವ ಭಾವ, ಅನುಭವ ಮತ್ತು ಆಲೋಚನೆಗಳೆಲ್ಲ ಬತ್ತದಂತೆ. ಅದನ್ನು ಯುಕ್ತಿ ಮತ್ತು ವಿಚಾರವೆಂಬ ಒನಕೆಗಳಿಂದ ಕುಟ್ಟಿದರೆ ತತ್ವವೆಂಬ ಅಕ್ಕಿ ನಮಗೆ ದೊರೆಯುವುದು. ಹಾಗೆ ದೊರೆತ ಅಕ್ಕಿರೂಪದ ತತ್ವವೇ ನಮ್ಮ ಬೌದ್ಧಿಕತೆಗೆ ಆಹಾರ. ಈ ರೀತಿಯ ಆಹಾರ ತಯಾರಿಸಿ ನೀಡುವವನು ಗುರು

ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ

ಅರ್ಚಕನ ಸಾಧನೆ ತಪೋಬಲ ಜ್ಞಾನ ಸಿದ್ಧಿಗಳಿಂದ ಹೇಗೆ ಸಾಮಾನ್ಯ ಕಲ್ಲೊಂದು ಪೂಜಾರ್ಹವಾದ ಮೂರ್ತಿಯಾಗಿ ಬದಲಾಗಿ ಸಹಸ್ರಾರು ಭಕ್ತರನ್ನು ಪೊರೆಯುವ ಬಲ ಹೊಂದುವುದೋ ಅಂತೆಯೇ ಗುರುವಿನ ಪ್ರಭಾವದಿಂದ ಎಂಥಾ ಮಗುವೂ ಲೋಕವಿಖ್ಯಾತರಾಗಿ ಸಾಧಕರಾಗಿ ಬದಲಾಗುತ್ತಾರೆ. ಹೇಗೆ ಅಕ್ಕಸಾಲಿಗ ರತ್ನ ವಜ್ರಗಳನ್ನು ಹುಡುಕುತ್ತಾನೋ ಹಾಗೆಯೇ ಗುರು ಪ್ರತಿಶಿಷ್ಯನಲ್ಲೂ ಆಂತರ್ಯದಲ್ಲಿ ಹುದುಗಿರುವ ಪ್ರತಿಭೆ, ಸದ್ವಿಚಾರ, ಸದ್ವರ್ತನೆಗಳೆಂಬ ರತ್ನೋಪಮ ಗುಣಗಳು ಹುಡುಕಿ ತನ್ಮೂಲಕ ಶಿಷ್ಯನ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತನಾಗುತ್ತಾನೆ. ನಮ್ಮಲ್ಲಿ ಅಡಗಿರುವ ಯಾವುದೇ ರೀತಿಯ ಕತ್ತಲೆಯನ್ನು ಕಳೆದು ಅಲ್ಲಿ ಅರಿವಿನ ಬೆಳಕನ್ನು ಹಚ್ಚುವ ಯಾರಾದರೂ ಗುರುವೇ. ಗುರು ಎಂದರೆ ತಿಮಿರದರಿ ಎನ್ನುತ್ತಾರೆ ಬಲ್ಲವರು.

ವರ್ಣ ಮಾತ್ರಂ ಕಲಿಸಿದಾತಂ ಗುರು 

ಜಗತ್ತನ್ನೇ ಗುರುವನ್ನಾಗಿ ಭಾವಿಸಿದವನನ್ನು ಜಗತ್ತು ಜಗದ್ಗುರು ಎಂದು ಗೌರವಿಸುತ್ತದೆ. ಅಂದರೆ ಗುರುವೂ ನಿರಂತರ ಜ್ಞಾನಪಿಪಾಸಿಯಾಗಿದ್ದು ಜ್ಞಾನಾರ್ಜನೆಯಲ್ಲಿ ಅಧ್ಯಯನದಲ್ಲಿ ತೊಡಗಿರಲೇಬೇಕು.
ತನ್ನೊಳಗೆ ಕತ್ತಲಿರಿಸಿಕೊಂಡವನು ಗುರುವಾಗಲಾರ. ಬೆಳಕಾಗಲಾರ. ಒಳಗಣ ಅಂಧಕಾರ ಅತಿಯಾದಂತೆ ಸಂಪೂರ್ಣ ಕಣ್ಮರೆಯಾಗುವ ಕ್ಷುದ್ರ ಜೀವಿಯೂ ಆಗಬಲ್ಲ..
ತನ್ನ ತಾನರಿದು     ತನ್ನ ತಾ ತರಿದು      ತಾನುರಿದು     ತಾ ನುರಿದು 
ಜಗಕೆಲ್ಲ ಬೆಳಕ ಬದುಕ ನೀಡಲನುವಾದವನು, ಜ್ಞಾನ ಬ್ರಹ್ಮ ಸರಸ್ವತಿಯರೆದುರು ನತಮಸ್ತಕನಾಗಲರಿತವನು,  ಸದಾ ಕಲಿಯುವವ , ಮಾತ್ರವೇ ಗುರುವಾಗಬಲ್ಲ.
ಮುಕ್ತಾನಾಂ ಪರಮಾಗತಿಃ ಎನ್ನುವಂತೆ ಗುರು ಮಾತ್ರ ಆ ಮುಕ್ತತ್ವ ಪಥವನ್ನು ಪ್ರಸಾದಿಸಬಲ್ಲ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸವಾಣಿ ಇಂದಿಗೂ ಎಂದಿಗೂ ಪ್ರಸ್ತುತ.
ನಮಗೆಲ್ಲಾ ಆ ಸದ್ಗುರುವಿನ ಕರುಣಾಕೃಪಾಕಟಾಕ್ಷ ನಿರಂತರವಾಗಿ ಲಭಿಸುತ್ತಿರಲಿ.
ಗುರು ಜ್ಞಾನ ಸಾಗರ ವಾದರೆ ಶಿಷ್ಯ ಜ್ಞಾನ ದಾಹ ಸಾಗರ. ಗುರುಶಿಷ್ಯರ ಸಮಾಗಮ ಎರಡು ಸಾಗರಗಳ ಸಮಾಗಮ.
ಗುರು ಹೀಗಿದ್ದಲ್ಲಿ ಶಿಷ್ಯ ಹೇಗಿರಬೇಕು ಎನ್ನುವ ಜಿಜ್ಞಾಸೆ ಮೂಡುವುದು ಸಹಜ. ಶಿಷ್ಯ ಗುರು ಗೋವಿಂದ ಭಟ್ಟರ ಶಿಷ್ಯ ಶಿಶುನಾಳ ಷರೀಫರಂತೆ ಇರಬೇಕು. ಅದರೊಟ್ಟಿಗೆ ತನ್ನ ಗುರುವನ್ನು ಪರೀಕ್ಷೆಗೊಳಪಡಿಸಿಯೇ ನಂತರ ಗುರುವಾಗಿ ಸ್ವೀಕರಿಸಿದ , ನಂತರ  ಒಮ್ಮೆ ಗುರುವೆಂದು ಒಪ್ಪಿ ಸ್ವೀಕರಿಸಿದ ಮೇಲೆ ನಿಶ್ಶ್ಯಂಕಿತನಾಗಿ ಮುಂದುವರೆದ ಈ ದೇಶ ಕಂಡ ಮಹಾನ್ ಚೇತನ ವೀರಸನ್ಯಾಸಿ ವಿವೇಕಾನಂದ ರಂತೆಯೂ ಇರಬೇಕು. ಒಮ್ಮೆ ಗುರುವಾದವನು ಎಂದಿಗೂ ಗುರುವೇ. ಅದೇ ರೀತಿ ಒಮ್ಮೆ ಶಿಷ್ಯನಾದವನು ಮತ್ತೆಂದೂ ಆ ಗುರುವಿಗೆ ಶಿಷ್ಯನೇ.
ಕಲಿಯಬಲ್ಲಾತಂಗೆ ಶಿಲೆಕೂಡ ಗುರುವಾಯ್ತು ಕಲಿಯಲಾರದವಂಗೆ ಗುರುವೇ ಶಿಲೆಯಾದ ಎನ್ನುವಂತಾಗಬಾರದು.

ಅದ್ದೂರಿ ಮದುವೆಗಳ ಅವಶ್ಯಕತೆ

ಮದುವೆ ಅವಶ್ಯಕತೆ ವಿಷಯಕ್ಕೆ ಬಂದರೆ ಬೀಚಿಯವರ ಮಾತಿನಂತೆ ಒಂದೋ ಮದುವೆಯಾಗಬೇಕು ಇಲ್ಲ ಸುಖವಾಗಿರಬೇಕು. ಮದುವೆಯಲ್ಲಿ ಹರಸುತ್ತಾರಲ್ಲ ವಿಷ್ ಯೂ ಹ್ಯಾಪಿ ಮ್ಯಾರೀಡ್ ಲೈಫ್ ಅಂತ. ಅದೊಂದು ದೊಡ್ಡ ಪ್ರಮಾಣದ ಸುಳ್ಳೆಂಬ ಸತ್ಯ ಸ್ವಾನುಭವವೇದ್ಯ.
ಅದ್ದೂರಿ ಮದುವೆಗಳಾ ?
ಎಲ್ಲಿ ? 
ಒಂದೇ ಒಂದು ಮದುವೆಯೂ ಅದ್ದೂರಿಯಲ್ಲ.
 ಯಾರ ಪ್ರಕಾರ ?
ಖರ್ಚು ಮಾಡಲು ಶಕ್ತಿ, ಯೋಗ್ಯತೆ ಇರುವ ಯಾವುದೇ ವ್ಯಕ್ತಿಯ ಪ್ರಕಾರ.
ಅದ್ಧೂರಿ ಮದುವೆ
ಯಾರ ಪ್ರಕಾರ ?
ಆ ಮದುವೆಗೆ ಭೇಟಿ ನೀಡುವ ಅತಿಥಿಗಳ ಪ್ರಕಾರ ಯಾ ಅಷ್ಟು ಖರ್ಚು ಮಾಡಲು ಶಕ್ತಿ ಇರದವರ ಪ್ರಕಾರ , ಹೊರಗೆ ನಿಂತು ನೋಡುವವರ ಪ್ರಕಾರ, ಕಾರ್ಯಕ್ರಮ ಆದ ಮೇಲೆ ಕಸದ ರಾಶಿಯನ್ನು ಎತ್ತಲು ಬರುತ್ತಾರಲ್ಲಾ ಅವರ ಪ್ರಕಾರ.
ಆರು ದೋಸೆ ಕೊಟ್ಟರೆ ಅತ್ತೆ ಕಡೆ, ಮೂರು ದೋಸೆ ಕೊಟ್ಟರೆ ಸೊಸೆ ಕಡೆ ಎನ್ನುವ ಬುದ್ಧಿ ಜೀವಿಗಳ ಪ್ರಕಾರ ಖಂಡಿತಾ ಅಲ್ಲ. ಏಕೆಂದರೆ ಕಾರ್ಯಕ್ರಮದ ಪರವಾಗಿಯೇ ಮಾತನಾಡಿ ಸಮರ್ಥಿಸಬೇಕೆಂದು ಅವರಿಗೆ ತಾಕೀತು ಗೌರವ(?) ಧನ, ಕಾಣಿಕೆಗಳ ಮೂಲಕ ಆಗಿರುತ್ತದೆ. ಹಾಗಾಗಿ ಶ್ರೀಮಂತರು ಮಾಡುವ ಮದುವೆ ಅದ್ದೂರಿ ಅಲ್ಲ.
ಇಷ್ಟಾಗಿ ಅದ್ದೂರಿ ಮದುವೆಯ ಮೇಲೇಕೆ ನಮ್ಮೆಲ್ಲರ ಕಣ್ಣು?  ಏಕೆ ಆಗ ಮಾತ್ರ ಮೌಲ್ಯಗಳನ್ನು ಎತ್ತಿ ಹಿಡಿದು ಮಾತಾಡುತ್ತೇವೆ?
ಕಾರಣಗಳು ಹೀಗಿರಬಹುದೇ?
೧. ನಮಗೆ ಹಾಗೆ ಮಾಡಲು ಶಕ್ತಿ ಇಲ್ಲ
೨. ನಮಗೆ ಹಾಗೆ ಮಾಡಲು ದಮ್ಮಿಲ್ಲ.
೩. ನಾವೇ ಕಷ್ಟಪಟ್ಟು ದುಡಿದು ಕೂಡಿಟ್ಟು ಕೊಂಡ ಹಣದ ಮೇಲೆ ಸಾಕಷ್ಟು ರೂಪುರೇಷೆ ಸಿದ್ಧ ಪಡಿಸಿ ಕೆಲಸ ಕೊಡದಿದ್ದರೂ ಗಳಿಸಿದ ಗಳಿಕೆಗೆ  ತೆರಿಗೆ ಅಧಿಕಾರಿಗಳ ಕಣ್ಣು ಬಿದ್ದು ಎಲ್ಲಿ ಸಮಸ್ಯೆ ಅನುಭವಿಸಬೇಕೋ ಎಂಬ ಅವ್ಯಕ್ತ ಭಯ.
೪. ನಾವು ಅನಾಥರು. ಅಂದರೆ ಅಪ್ಪ ಅಮ್ಮ ಇಲ್ಲದೇ ಅಲ್ಲ. ಅವರಿದ್ದೂ ಅನಾಥರು. ಹೇಗೆಂದರೆ ಏಕೆಂದರೆ ಇಂದಿನ ದಿನಗಳಲ್ಲಿ ಯಾರಿಗೆ MLA, MP, ಮಂತ್ರಿಗಳು ಪರಿಚಯ ಇಲ್ಲ ಅವರೆಲ್ಲ ಅನಾಥರೇ. ಆ ಸಾಲಿನಲ್ಲಿ ನಾವೂ ಇದ್ದೇವೆ.
ನಿಜವಾಗಿಯೂ ಆದರ್ಶಗಳನ್ನು ಪ್ರೀತಿಸುವ, ಪಾಲಿಸುವವರು ಮಾತ್ರ ಯಾವ ರೀತಿಯಲ್ಲೂ ಅದ್ದೂರಿ ಮದುವೆ ಮಾಡುವುದಿಲ್ಲ
ನಾನೊಂದು ಅದ್ದೂರಿ ಮದುವೆಯಲ್ಲಿ ಭಾಗವಹಿಸಿದ್ದೆ.
ಆ ಮದುವೆಯಲ್ಲಿ ಯಾರೂ ಉಡುಗೊರೆ ತರುವಂತಿಲ್ಲ . ಕೊಡುವಂತಿಲ್ಲ. ಪಡೆಯುವಂತಿಲ್ಲ.
ಮದುವೆ ನಡೆದ ದಿನಗಳೆಲ್ಲೆಲ್ಲಾ ಭರ್ಜರಿ ರುಚಿಕರವಾದ ಖಾದ್ಯಗಳ ಔತಣ.
ಯಾರಿಗೆ ?
ರಸ್ತೆಯ ಬದಿಯಲ್ಲಿ ಬೇಡುವ ನಿಜವಾಗಿಯೂ ಕೈಲಾಗದವರೆಂದು ಪರೀಕ್ಷಿಸಿ ಗುರುತಿಸಿ ಇಟ್ಟುಕೊಂಡವರಿಗೆ.
ಖಾದ್ಯಗಳ ತಯಾರಿ ಮತ್ತು ವಿತರಣೆ ಖರ್ಚು ?
ನಯಾಪೈಸೆ ಇಲ್ಲ.
ಯಾಕೆ ?
ಗಂಡು ಹೆಣ್ಣು ಗಳ ಈ ಸದುದ್ದೇಶ ತಿಳಿದ ಕೇಟರರ್ಸ್ ಒಂದೇ ಒಂದು ಪೈಸೆ ಮುಟ್ಟಲೂ ಒಪ್ಪಲಿಲ್ಲ. ಆದರೂ ಮದುವೆಯ ಜೋಡಿ ಎಷ್ಟು ಖರ್ಚು ಬರಬಹುದು ಎಂಬ  ಲೆಕ್ಕಾಚಾರ ಹಾಕಿ ಆ ಹಣವನ್ನು ಚೆಕ್ ರೂಪದಲ್ಲಿ ನೀಡಲು ತಯಾರಾಗಿ ಇದ್ದರು.
ಕಾರ್ಯಕ್ರಮ ಮುಗಿಯಲೆಂದು ಕಾಯುತ್ತಿದ್ದರು.
ಕಾರ್ಯಕ್ರಮ ಮುಗಿಯಿತು. ಎಲ್ಲೂ ಒಂದೇ ಒಂದು ಎಲೆಯಾಗಲೀ ನೀರಿನ ಲೋಟವಾಗಲೀ ಕುಪ್ಪೆಯಾಗಲೇ ಇಲ್ಲ.
ಕಾರಣ ಬಡಿಸಲು ಬಳಸಿದ ತಟ್ಟೆ ಲೋಟ ಚಮಚೆಗಳೂ ಕೂಓಡಾ ಖಾದ್ಯಯೋಗ್ಯ.
ಇಷ್ಟಾದರೂ ತಿಳಿಯದೇ ಹೊರ ಚೆಲ್ಲಿದ ತಟ್ಟೆ ಲೋಟಗಳನ್ನು ಕಲೆಹಾಕಿ ತೊಳೆದು ಸ್ವಚ್ಛ ಪಡಿಸಿ ಮರುಬಳಕೆಗೆ ಸಿದ್ಧಪಡಿಸಲಾಯ್ತು.
ನೂರಾರು ಮಂದಿ ಊಟ ಮಾಡಿದರು. ಆ ನೂರಾರು ಮಂದಿ ಕೂಡಾ ಹಸಿವಿನ ಬೆಲೆ ತಿಳಿದವರೇ ವಿನಃ ಬಂದ ಅತಿಥಿಗಳಲ್ಲ.
ಆಹ್ವಾನಿತರಾರಿಗೂ ಊಟದ ವ್ಯವಸ್ಥೆ ಇಲ್ಲ. ಬೇಕಿದ್ದರೆ ಸ್ವಯಿಚ್ಛೆಯಿಂದ ಹಸಿದವರಿಗೆ ಬಡಿಸಬಹುದು. ಬಲವಂತವಿಲ್ಲ.
ಮೂರ್ನಾಲ್ಕು ದಿನಗಳ ಕಾಲ ಮದುವೆ ನಡೆದರೂ ಎಲ್ಲಿಯೂ ಚಪ್ಪರ ತೋರಣಗಳ ಬಳಕೆಯಿಲ್ಲ. ಮದುವೆ ನಡೆದದ್ದು ವೃಕ್ಷಗಳ ಸಮ್ಮುಖದಲ್ಲಿ. ಅದೂ ನೂರಾರು ಮಂದಿ ಎದುರು.
ಮದುವೆಗೆ ಮಂತ್ರ ಹೇಳಿದ ಜೋಯಿಸರೂ ಒಂದು ನಾಣ್ಯ ದಕ್ಷಿಣೆ ಪಡೆಯಲಿಲ್ಲ. ಆದರೆ ವಧೂವರರು ಅವರ ಸಂಭಾವನೆಯನ್ನೂ ಚೆಕ್ ನಲ್ಲಿ ಸೇರಿಸಿ ಬರೆದರು.
ಎಲ್ಲಿಯೂ ಯಾವ ಕಾರಣದಿಂದಲೂ ಪರಿಸರ ನೈರ್ಮಲ್ಯಕ್ಕೆ ಧಕ್ಕೆಯೂ ಇಲ್ಲ. ಕಸದ ರಾಶಿಯ ಕಾಣಿಕೆಯೂ ಇಲ್ಲ.
ಯಾರ ಬಾಯಲ್ಲೂ ಮನಃಪೂರ್ವಕವಾಗಿ ಮೆಚ್ಚುಗೆ ಮಾತು ಬಿಟ್ಟರೆ ಹಸಿದು ಉಂಡವರಿಂದ ಹೃತ್ಪೂರ್ವಕ ಹಾರೈಕೆ ಬಿಟ್ಟರೆ ಬೇರೆ ನಿಂದನಾತ್ಮಕ ಮಾತುಗಳಿಗೆ ಎಡೆಯೇ ಇರಲಿಲ್ಲ.
ಈ ಅಭೂತಪೂರ್ವ ಮದುವೆಗೆ ಮಂತ್ರಿ ಶಾಸಕರಿಗೆ ರಾಜಕೀಯ ಧುರೀಣರ್ಯಾರಿಗೂ ಆಹ್ವಾನ ಇಲ್ಲ.
ಇಲ್ಲಿ ಬಂದವರೆಲ್ಲ ನಿಜವಾದ ಬಂಧು ಮಿತ್ರರು
ಅಂದಹಾಗೆ ಈ ಮದುವೆ ನಡೆದದ್ದು ಎಲ್ಲಿ?
ತಿಳಿಯಲಿಲ್ಲವೇ?
ನನ್ನ ಕನಸಿನಲ್ಲಿ.😁😁😁😁😁😁

ಮಕ್ಕಳಿಗೆ ಶೈಕ್ಷಣಿಕ (?) ಪ್ರವಾಸ

ನಾನು ಪ್ರವಾಸ ಹೋಗಿದ್ದು ಒತ್ತಟ್ಟಿಗಿರಲಿ. ಈಗ ಶಾಲಾ ಮಕ್ಕಳಿಗೆ ಪ್ರವಾಸ ಏರ್ಪಡಿಸ್ತೀವಲ್ಲ ಅಲ್ಲಿದೆ ನನ್ನ ಗಮನ.

ನಾನು ಕೆಲಸ ಮಾಡೋದು ಪ್ರತಿಷ್ಠಿತ ಶಾಲೆ ಯೊಂದರಲ್ಲಿ. ಇಲ್ಲಿ ಈಗ್ಗೆ ಎರಡು ವರ್ಷಗಳ ಹಿಂದೆ ಪ್ರತೀವರ್ಷ ಹತ್ತನೇ ತರಗತಿ ಮಕ್ಕಳನ್ನು ಮೂರು ಅಥವಾ ನಾಲ್ಕು ದಿನಗಳ ದೂರದ ಊರಿಗೆ ಕರೆದುಕೊಂಡು ಹೋಗುವ ಸಂಭ್ರಮ ಪ್ರಯಾಸಗಳು ವರ್ಣನಾತೀತ.

ಹೊರಡುವ ದಿನ ನಿಗದಿತ ಸಮಯಕ್ಕೆ ಮುಂಚೆ ಹಣ ಪಾವತಿ ಮಾಡಿ ನೋಂದಾಯಿಸಿಕೊಂಡಿರುವ ಮಕ್ಕಳಲ್ಲಿ ಯಾರೊಬ್ಬರು ಬರದೇ ಹೋದರೂ ಒಂದೋ ಕಾಯಬೇಕು ಇಲ್ಲವೇ ಆ ಮಗುವನ್ನು ಬಿಟ್ಟು ಹೊರಡಬೇಕು.
 ಸಮಯಪ್ರಜ್ಞೆ ಇಲ್ಲದ ಪೋಷಕರು. ತಕ್ಕಂತೆ ಮಕ್ಕಳು. ಅಕಸ್ಮಾತ್ ಉಗಿಬಂಡಿ ಯಲ್ಲಿ ಪ್ರಯಾಣ ನಿಶ್ಚಯವಾದರಂತೂ ಕೇಳಲೇ ಬೇಡಿ ನಾವೇನೋ ಕಾಯಬಹುದು. ಆದರೆ ಉಗಿಬಂಡಿ ಕಾದೀತೇ? ಆಗ ನೋಡಬೇಕು ಶಿಕ್ಷಕರ ತೊಳಲಾಟ ಒದ್ದಾಟಗಳನ್ನು. ಅಂಡು ಸುಟ್ಟ ಬೆಕ್ಕಿನಂತೆ ಆಡುತ್ತಿರುತ್ತೇವೆ  (ತಾನೇ ಲೇಟಾಗಿ ಬಂದರೂ ನಿಗದಿತ ಸಮಯಕ್ಕೆ ಸರಿಯಾಗಿ ಹೊರಟ ಎಷ್ಟೋ ಅನುಭವ ನನಗಾಗಿದೆ. ಇರಲಿ.)

ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸಿದೆವು. ಯಥಾ ಪ್ರಕಾರ ಕೆಲವು ಪೋಷಕರು ಸುಮಾರು ಒಂದು ಗಂಟೆಗಳಷ್ಟು ತಡವಾಗಿ ತಮ್ಮ ಮುದ್ದಿನ ಮಕ್ಕಳನ್ನು ಕರೆದುಕೊಂಡು ಬಂದರು. ಮುಖದ ಮೇಲೆ ಕಿಂಚಿತ್ತೂ ನಮಗಾಗಿ ಇಷ್ಟೊಂದು ಜನ ಕಾಯುವಂತಾಯಿತಲ್ಲ ಎನ್ನುವ ಪಾಪಪ್ರಜ್ಞೆ ಎಳ್ಳಷ್ಟೂ ಇಲ್ಲ. ಬದಲಾಗಿ ಅದು ತಮ್ಮ ಹಕ್ಕು ಎನ್ನುವ ಮುಖಭಾವ.

ಲಗ್ಗೇಜಿನ ವಿಷಯವಂತೂ ಕೇಳಲೇಬೇಡಿ. ನಾನೇ ಹೇಳಿಬಿಡುತ್ತೇನೆ. ಇನ್ನೇನು ಮರಳಿ ಬರುವುದೇ ಇಲ್ಲ. ಮನೆಖಾಲಿ ಮಾಡಿಕೊಂಡು ಬಂದಿದ್ದಾರೇನೋ ಎನ್ನುವಷ್ಟು. ಬಹಳಷ್ಟು ಜನ ಹುಡುಗಿಯರು ಮತ್ತು ಕೆಲವು ಜನ ಹುಡುಗರದ್ದು ಇದೇ ಹಣೇಬರಹ.

ಅಂತೂ ಇಂತೂ ಪ್ರಯಾಣ ಆರಂಭವಾದೊಡನೆ ಎಲ್ಲಾ ಮಕ್ಕಳಿಗೂ ಸರಿಯಾಗಿ ಸೀಟು ಸಿಕ್ಕಿದೆಯೇ ಅವರ ಲಗ್ಗೇಜುಗಳು ಬಸ್ ಒಳಗೆ ಸೇರಿವೆಯೇ ಎನ್ನುವ ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ನಮಗೆ ಶಿಕ್ಷಕರಿಗೆ ಕುಳಿತು ಕೊಳ್ಳಲು ಸೀಟಿಲ್ಲ. ನಮ್ಮದು ಮಹಿಳಾ ಪ್ರಧಾನ ಶಾಲೆಯಾದ್ದರಿಂದ ಪುರುಷರನ್ನು ಮನುಷ್ಯರೆಂದು ಭಾವಿಸುವುದಿಲ್ಲ. ಸುಮಾರು ಇನ್ನೂರರಿಂದ ಇನ್ನೂರಿಪ್ಪತ್ತೈದು ಮಕ್ಕಳ ಮೇಲುಸ್ತುವಾರಿಗೆ ಮೂರು ಜನ ಗಂಡು ಶಿಕ್ಷಕರು. ಎಂಟು ಜನ ಶಿಕ್ಷಕಿಯರು. ಎಂಟೂ ಜನ ಶಿಕ್ಷಕಿಯರಿಗೆ ಸೀಟುಗಳನ್ನು ಮಾಡಿಕೊಡಲಾಗಿದೆ. ಮೂರು ಜನ ಗಂಡು ಶಿಕ್ಷಕರಿಗೆ ಫುಟ್ ಬೋರ್ಡ್ ಮೇಲೇ ಕುಳಿತು ಪ್ರಯಾಣ ಮಾಡುವ ಸೌಭಾಗ್ಯ.
ಅಯ್ಯೋ, ಶಿಕ್ಷಕರು ಕೆಳಗೆ ಕುಳಿತಿದ್ದಾರೆ. ಅವರನ್ನು ಕರೆದು ಜೊತೆಯಲ್ಲಿ ಕುಳ್ಳಿರಿಸಿ ಕೊಳ್ಳೋಣ ಇಲ್ಲವೇ ಜಾಗ ಬಿಟ್ಟು ಕೊಡೋಣ ಎಂದು ಯೋಚಿಸುವ ಒಂದೇ ಒಂದು ಕ್ರಿಮಿಯನ್ನೂ ಊಹಿಸಿಕೊಳ್ಳಬೇಡಿ. ಬದಲಾಗಿ ನಮ್ಮ ದುಡ್ಡಲ್ಲಿ ಬಿಟ್ಟಿ ಪ್ರಯಾಣ ಮಾಡುತ್ತಿರುವವರಿಗೇನು ಮರ್ಯಾದೆ ನೀಡುವುದು ಎನ್ನುವ ಭಾವ. ಇಷ್ಟೆಲ್ಲಾ ಅವಮಾನಗಳ ನಡುವೆ ಎಲ್ಲೋ ಒಬ್ಬರು ಅಥವಾ ಇಬ್ಬರು ಪೋಷಕರು ಆರೋಗ್ಯ ಕಾಪಾಡಿಕೊಳ್ಳಿ ಸಾರ್ ಎನ್ನುವ ಹೃದಯವಂತರು.
ನಿಗದಿತ ಸ್ಥಳವನ್ನು ತಲುಪಿ ಕಾದಿರಿಸಲಾಗಿದ್ದ ಹೋಟೇಲ್ ಗೆ ಕಾಲಿಟ್ಟು ಎಲ್ಲಾ ಮಕ್ಕಳಿಗೂ ಒಂದು ನೆಲೆ ಕಾಣಿಸಿ ಬರುವ ವೇಳೆಗೆ ನಮಗೆ ಶಿಕ್ಷಕರಿಗೆ ಕೊಠಡಿಗಳೇನೋ ಸಿಕ್ಕವಾದರೂ ಸುಧಾರಿಸಿಕೊಳ್ಳಲು ಬಿಡುವಿಲ್ಲ. ಶಿಕ್ಷಕಿಯರಂತೂ ಮಕ್ಕಳಿಗಿಂತ ಮೊದಲು ತಾವು ರೂಮಿಗೆ ದೌಡಾಯಿಸುವ ತವಕದಲ್ಲಿ ಇರುತ್ತಾರೆ. ಮೊದಲು ಹೆಣ್ಣು ಮಕ್ಕಳಿಗೆ ಮತ್ತು ಶಿಕ್ಷಕಿಯರಿಗೆ ರೂಮ್ ಹಂಚಿಕೆ ಆದಮೇಲೆ ಶಿಕ್ಷಕರಿಗೆ. ಪುಣ್ಯಕ್ಕೆ ಅಲ್ಲಿ ಯಾವ ದುಸ್ಥಿತಿ ಎದುರಾಗಲಿಲ್ಲ.
ಸ್ವಲ್ಪ ಸಮಯದ ಬಳಿಕ ಮಕ್ಕಳನ್ನು ಕರೆದುಕೊಂಡು ಆ ಹೊಸ ಜಾಗದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಸ್ಥಳೀಯ ಗೈಡ್ ಜೊತೆಗೆ ಹೊರಟರೆ ಅನೇಕ ವಿದ್ಯಾರ್ಥಿಗಳ ಜೊತೆಗೆ ಅನೇಕ ಪ್ರೇಮಿಗಳೂ ಕೂಡಾ. ದಿರಿಸೋ ನಮಗೆ ಸಂಸ್ಕಾರವಿದ್ದರೇ ಈ ಮಕ್ಕಳನ್ನು ಕಣ್ಣೆತ್ತಿ ನೋಡಬಾರದು. ಶಾಲೆಯ ಪ್ರಾಂಶುಪಾಲರು ಯಾವ ರೀತಿಯ ದಿರಿಸುಗಳನ್ನು ನಿರ್ಬಂಧಿಸಿದ್ದರೋ ಅದೇ ದಿರಿಸುಗಳನ್ನು ಬೇಕೆಂದೇ ಧರಿಸಿಕೊಂಡು ಓಡಾಡುತ್ತ ಅಪರಿಚಿತರ ಗಮನವನ್ನು ತಮ್ಮೆಡೆಗೆ ಸೆಳೆಯುವ ಹುನ್ನಾರ ಹೊಂದಿದ್ದರೇನೋ ಎನ್ನುವ ಭಾವ ತರಿಸುವ ವರ್ತನೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ದಿರಿಸುಗಳೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬೇಜವಾಬ್ದಾರಿ ಅಮ್ಮಂದಿರನ್ನು ನೋಡಬೇಕೆಂದರೆ ಇಂತಹ ಪ್ರವಾಸಗಳಲ್ಲಿ ಭಾಗಿಯಾಗಬೇಕು. ಇದಕ್ಕೆ ಒಗ್ಗರಣೆ ಎಂಬಂತೆ ಒಬ್ಬ ಶಿಕ್ಷಕಿ " ಐ ಡೋಂಟ್ ಹ್ಯಾವ್ ಎನಿ ಪ್ರಾಬ್ಲಂ ವಿತ್ ದೇರ್ ದಿಸ್ ಕೈಂಡ್ ಆಫ್ ಡ್ರೆಸ್ " ಎಂದಳು. ಆಕೆ ಆಂಗ್ಲ ಭಾಷಾ ಶಿಕ್ಷಕಿ. ನಾನು ತಕ್ಷಣವೇ "ದಿಸ್ ಈಸ್ ನಾಟ್ ಅವರ್ ಹೋಂ ಟುಬಿ ದ ವೇ ಈಚ್ ವನ್ ಲೈಕ್ ಟು ಬಿಹೇವ್ . ವಿ ಟೀಚರ್ಸ್ ಶುಡ್  ಹ್ಯಾವ್ ಮೋರ್ ಮೆಚ್ಯೂರಿಟಿ ಅಂಡ್ ರೆಸ್ಪಾಂನ್ಸಿಬಿಲಿಟಿ." ಎಂದು ಮುಲಾಜಿಲ್ಲದೆ ಅಂದೆ. ಆಕೆಯ ಮುಖ ಚಿಕ್ಕದಾಗಿ ಹೋಗಿತ್ತು.
ನನಗಂತೂ ಕೋಪ ತಡೆಯಲಾರದೆ ಆ ರೀತಿ ದಿರಿಸು ಧರಿಸಿದ್ದ ಹೆಣ್ಣು ಕ್ರಿಮಿಗಳನ್ನು ನಿರ್ದಾಕ್ಷಿಣ್ಯವಾಗಿ ವಾಪಸ್ ರೂಮಿಗೆ ಕಳಿಸಿ ಅವರು ಮೈಮುಚ್ಚುವಂಥ ಬಟ್ಟೆ ತೊಟ್ಟ ಮೇಲೆಯೇ ನಾನು ಮತ್ತು ನನ್ನ ಇಬ್ಬರು ಶಿಕ್ಷಕರು ಸುಮ್ಮನಾಗಿದ್ದು.
ಪ್ರೇಕ್ಷಣೀಯ ಸ್ಥಳಗಳನ್ನು ತಲುಪಿದಾಗ ಸ್ಥಳೀಯ ಗೈಡ್ ಅಲ್ಲಿನ ಸ್ಥಳ ಪುರಾಣ ಮಹಾತ್ಮ್ಯೆ ಗಳನ್ನು ತನಗೆ ತಿಳಿದ ರೀತಿಯಲ್ಲಿ ವಿವರಿಸಲಾರಂಭಿಸಿದಾಗ ಆಸಕ್ತಿಯಿಂದ ಕೇಳಿ ವಿಷಯಗ್ರಹಿಸುವ ಬದಲು ಅವರ ಮಾತಿನ ಶೈಲಿ ಉಚ್ಚಾರಣೆ ಇತ್ಯಾದಿಗಳನ್ನೇ ಗಮನಿಸಿ ತಮಾಷೆ ಮಾಡಿದ್ದಾಯಿತು. ಈ ಮಕ್ಕಳೇನೋ ಪಾಶ್ಚಿಮಾತ್ಯ ಸಂತಾನ ಇಂಗ್ಲೀಷ್ ಭಾಷಾಪ್ರವೀಣರು ಉಳಿದವರು ದಡ್ಡ ಶಿಖಾಮಣಿಗಳೆನ್ನುವಂಥ ಮನೋಭಾವ. ಅದರಲ್ಲೂ ಗಮನವಿಟ್ಟು ತಿಳಿದುಕೊಳ್ಳಲು ಯತ್ನಿಸಿದ ಕೆಲವು ಮಕ್ಕಳಿದ್ದರು ಎಂದರೆ ತಪ್ಪಾಗಲಾರದು..
ಇದೆಲ್ಲಾ ಮುಗಿದು ಒಂದು ದಿನದ ಕಾರ್ಯಕ್ರಮ ಇನ್ನೇನು ಕೊನೆಯಾಗುವ ವೇಳೆಗೆ ಹೋಟೇಲ್ ನಲ್ಲಿ ಊಟದ ಸಮಯ. ಮತ್ತದೇ ಹದಿಹರೆಯದ ಪ್ರೇಮಿಗಳ ದರ್ಶನ. ಅವರ ವಿಚಿತ್ರ ಅಸಹ್ಯ ಹುಟ್ಟಿಸುವ ವರ್ತನೆ. ಡ್ರೆಸ್ ಚೇಂಜ್ ಮಾಡುವ ನೆಪದಲ್ಲಿ ಮತ್ತೆ ಸೀಥ್ರೂ ವಸ್ತ್ರ ಧಾರಣೆ. ಆಡುವಂತಿಲ್ಲ ಅನುಭವಿಸುವಂತಿಲ್ಲ.
ಮಾರನೆಯ ದಿನ ಇನ್ನೊಂದು ಸ್ಥಳ. ಅಲ್ಲಿಯೂ ಇದೇ ವರ್ತನೆ ಪುನರಾವರ್ತನೆ. ನೋಡಿ ನೋಡಿ ಬೇಸತ್ತ ನಾನು ಅಷ್ಟೂ ಜೋಡಿಗಳನ್ನು ಕರೆದು " ಇದು ಶೈಕ್ಷಣಿಕ ಪ್ರವಾಸ ನೀವು ಇಲ್ಲಿಗೆ ಬಂದಿರುವುದು ಹೊಸ ಹೊಸ ವಿಷಯಗಳನ್ನು ಕಲಿಯಲು. ಅದು ಬಿಟ್ಟು ಎಷ್ಟು ಕೆಟ್ಟ ವರ್ತನೆ ತೋರುತ್ತಿದ್ದೀರಿ. ನಿಮಗೆ ಅಷ್ಟು ಕೀಳು ಅಭಿರುಚಿ ಇದ್ದು ಈ ಸಮಯ ನಿಮ್ಮ ಕೀಳು ಅಭಿರುಚಿಗಳನ್ನು ತೀರಿಸಿಕೊಳ್ಳಲು ಸುಸಮಯವೆಂದು ನೀವೆಣಿಸಿದ್ದರೆ ನಿಮ್ಮಂಥ ಮೂರ್ಖರು ಇನ್ನಿಲ್ಲ. ನಿಮ್ಮ ಈ ವರ್ತನೆ ಮರುಕಳಿಸಿದರೆ ನಾನು ನೇರವಾಗಿ ಪ್ರಾಂಶುಪಾಲರಿಗೇ ಫೋನ್ ಮಾಡಿ ಹೇಳುತ್ತೇನೆ . ಹುಡುಗರು ಹುಡುಗರ ಹಾಗೆ ಹುಡುಗರ ಜೊತೆಯಲ್ಲಿ ಹುಡುಗಿಯರು ಹುಡುಗಿಯರ ಹಾಗೆ ಹುಡುಗಿಯರ ಜೊತೆಯಲ್ಲಿ ಇದ್ದರೆ ಬಚಾವ್. ಹುಷಾರ್ " ಎಂದು ಸುಮಾರು ಒಂದು ಗಂಟೆ ಕಾಲ ಕೂಗಾಡಿದ ಮೇಲೆ ಪರಿಸ್ಥಿತಿ ಸ್ವಲ್ಪ ತಹಬಂದಿಗೆ ಬಂದಂತೆ ಅನಿಸಿತ್ತು.
ಆ ದಿನ ರಾತ್ರಿ ಊಟ ಮುಗಿಸಿ ಎಲ್ಲರೂ ಅವರವರ ಕೊಠಡಿಗಳಿಗೆ ತೆರಳಿ ವಿಶ್ರಾಂತಿ ಪಡೆಯಲು ಆರಂಭಿಸಿದೆವು. ಎಂಟು ಜನ ಶಿಕ್ಷಕಿಯರಲ್ಲಿ ಏಳು ಜನ ಆಗಲೇ ತಮ್ಮ ತಮ್ಮ ರೂಮ್ ಗಳನ್ನು ಲಾಕ್ ಮಾಡಿಕೊಂಡು ಬಿಟ್ಟಿದ್ದರು. ಎಂಟನೆಯವಳು ಹೊರಗಿದ್ದಳು. ನಾವು ಮೂರು ಜನ ನಮ್ಮಲ್ಲೇ ಮಾತನಾಡಿಕೊಂಡು ರಾತ್ರಿ ಸ್ವಲ್ಪ ಈ ಮಕ್ಕಳ ಚಲನವಲನಗಳ ಕಡೆ ನಿಗಾ ವಹಿಸಲು ನಿರ್ಧರಿಸಿದೆವು. ಒಬ್ಬರಿಗೆ ಜ್ವರ ಇದ್ದಕ್ಕಿದ್ದಂತೆ ಆರಂಭವಾಗಿ ಅವರು ಮಾತ್ರೆಯೊಂದನ್ನು ನುಂಗಿ ಮಲಗಿಬಿಟ್ಟರು.
ಇನ್ನುಳಿದವರು ನಾವಿಬ್ಬರು. ಹುಡುಗಿಯರ ಕೊಠಡಿಗಳು ಒಂದು ಫ್ಲೋರ್ ಆದರೆ ಹುಡುಗರ ರೂಮ್ ಗಳು ಇನ್ನೊಂದು ಫ್ಲೋರ್. ಸರಿರಾತ್ರಿಯಲ್ಲಿ ಹುಡುಗಿಯರು ಹುಡುಗರ ರೂಮಿಗೆ ಹುಡುಗರ ರೂಮಿಗೆ ಹೋಗಿ ಅಲ್ಲಿಯೇ ಚಿತ್ರ ವಿಚಿತ್ರ ಅವಸ್ಥೆಗಳಲ್ಲಿ ಇರುವುದನ್ನು ಗಮನಿಸಿದ ಮೇಲಂತೂ ಪ್ರವಾಸದಲ್ಲಿ ಈ ಮಕ್ಕಳು ಪಡೆಯುತ್ತಿರುವ " ಶಿಕ್ಷಣ " ಎಂಥದ್ದು ಎನ್ನುವುದು ನಮಗೆ ಮನವರಿಕೆಯಾಯಿತು.
ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ ಎನ್ನುವಂತೆ ನಮ್ಮ ಮಕ್ಕಳಿಗೆ ಬೇಕಾಗಿದ್ದದ್ದು ಪ್ರವಾಸದ ಹೆಸರಿನಲ್ಲಿ ಸ್ವೇಚ್ಛಾಚಾರ. ಅದಕ್ಕೆ ಶಿಕ್ಷಕಿಯರ ಪರೋಕ್ಷ ಬೆಂಬಲ. (ಅವರಲ್ಲಿ ಒಬ್ಬಳು ಮಾತ್ರ ತುಂಬಾ ಮೆಲುದನಿಯಲ್ಲಿ ನನ್ನ ಬಳಿ ಬೇಸರ ವ್ಯಕ್ತಪಡಿಸಿದರು .) ಮಕ್ಕಳ ದೃಷ್ಟಿಯಲ್ಲಿ ಒಳ್ಳೆಯವರಾಗಬೇಕಲ್ಲ. ನಾವು ಇಂತಹ ಕ್ಷುಲ್ಲಕ ವಿಚಾರಗಳಿಗೆ ತಲೆ ಕೆಡಿಸಿಕೊಂಡವರೇ ಅಲ್ಲ. ಶಾಲೆ ಬಿಟ್ಟು ಮರಳಿ ಮಕ್ಕಳು ತಮ್ಮ ಮನೆ ಸೇರುವವರೆಗೆ ಅವರ ಸಂಪೂರ್ಣ ಸರ್ವ ರೀತಿಯ ಜವಾಬ್ದಾರಿ ನಮ್ಮದೇ ಎಂದು ಭಾವಿಸಿ ಅದರಂತೆಯೇ ನಡೆದವರು. ಆದಕಾರಣ ಮಕ್ಕಳಿಗೆ ನಮ್ಮನ್ನು ಅದರಲ್ಲೂ ವಿಶೇಷವಾಗಿ ನನ್ನನ್ನು ಕಂಡರೆ ಕೋಪ. ನಾನೂ ಇದಕ್ಕೆಲ್ಲಾ ಕ್ಯಾರೇ ಎಂದವನಲ್ಲ.
ಪ್ರತಿ ಬಾರಿ ಈ ಸೋ ಕಾಲ್ಡ್ ಶೈಕ್ಷಣಿಕ ಪ್ರವಾಸ ಹೊರಟಾಗಲೂ ಇಂಥದೇ ಅನುಭವಗಳಾಗಿರುವುದರಿಂದ ಯಾವ ಘನ ಉದ್ದೇಶದಿಂದ ಪ್ರವಾಸ ಏರ್ಪಡಿಸುತ್ತೇವೆಯೋ ಆ ಉದ್ದೇಶ ಕೆಲವು ಮಕ್ಕಳಿಗೆ ಮಾತ್ರ ನೆರವಾಗುತ್ತದೆ. ದುರದೃಷ್ಟಕರ ಎಂದರೆ ಅಂಥಾ ಮಕ್ಕಳ ಸಂಖ್ಯೆ ಬೆಳೆಣಿಕೆಯಷ್ಟು.
ಅದಕ್ಕಾಗಿಯೇ ಎರಡು ವರ್ಷಗಳಿಂದೀಚೆಗೆ ಕೇವಲ ಒಂದು ದಿನದ ಪ್ರವಾಸ. ಬೆಳಿಗ್ಗೆ ಮುಂಚೆ ಊರು ಬಿಟ್ಟು ರಾತ್ರಿ ಮರಳಿದರೆ ಮುಗಿಯಿತು. ಮಕ್ಕಳು ಕಲಿತವೋ ಇಲ್ಲವೋ ನಾವಂತೂ ಬಹಳಷ್ಟು ಕಲಿತಿದ್ದೇವೆ. ಕಲಿಯುತ್ತಿದ್ದೇವೆ
ಎಲ್ಲಾ ರೀತಿಯ ವ್ಯವಸ್ಥೆ ಇರುವ ಬೆರಳ್ತುದಿಯಲ್ಲಿ ಮಾಹಿತಿ ಪಡೆವ ಧನಮದದಿಂದ ಬಳಲುತ್ತಿರುವ ಶ್ರೀಮಂತ ಕುಟುಂಬದ ಮಕ್ಕಳು ಕಲಿಯುವುದು ಅದೂ ಪ್ರವಾಸದಿಂದ ಕಲಿಯುವುದು ಕನ್ನಡಿಯೊಳಗಣ ಗಂಟು.

ಮರೆತೆವಲ್ಲ  ಎಲ್ಲವನು ನಾವೆ ಮರೆತೆವಲ್ಲ
ಸ್ವಾರ್ಥದ ಬಾಳ್ ಗಾಗಿ ನಾವು ಎಲ್ಲ ಮರೆತವಲ್ಲ

ಸ್ವಂತ ಸುಖದ ಆಶೆ ಬರಿದೆ ಹೆಚ್ಚಾಯಿತಲ್ಲ
ಅತಿಯಾದ ಗಳಿಕೆ ಮೋಹ ನಚ್ಚಾಯಿತಲ್ಲ
ಅದಕೇ ಋಜುಮಾರ್ಗ ರುಚಿಸದಾಯಿತಲ್ಲ
ರಾಷ್ಟ್ರದ ಘನ. ಗೌರವವೇ ಮಣ್ಣಾಯಿತಲ್ಲ

 ರಾಷ್ಟ್ರವನು ಪರರದಾಸ್ಯ ಶೃಂಖಲೆಗಳಿಂದ
ಮುಕ್ತಗೈಯಲೆಂದು ತಳೆದು ಧ್ಯೇಯವೊಂದ
ಅದಕೆ ಸಿದ್ಧ ಬದ್ಧವಾದ ದೇಶಭಕ್ತ ವೃಂದ
ಎಲ್ಲ ಮರೆತೆವಲ್ಲಾ ನಾವೆಲ್ಲ ಮರೆತೆವಲ್ಲಾ

ರಾಷ್ಟ್ರವೆ ತಾನೆಂಬ ಭಾವ ತಳೆಯೆ ರಾಷ್ಟ್ರಕ
ನರ ರುಧಿರದಲೆಲ್ಲ ಹರಡೆ ಈ ಭಾವ ವ್ಯಾಪಕ
ಹೋರಾಡಿ ಮಡಿದವರ ಕಥೆಯಾಗೆ ಪ್ರೇರಕ
ಶಕ್ತರಾಷ್ಟ್ರ ನಿರ್ಮಾಣವೆ ಆಗ ಮೂಲ ಕಾಯಕ




ನಾನು ಬೇರೆ ನೀನು ಬೇರೆ ಎಂದರದುವೆ ವಿಕೃತಿ
ಬೇರೊಂದೇ ನಾವ್ ಕವಲೆನೆ ಭಾರತೀಯ ಸಂಸ್ಕೃತಿ
ನಾವೆಲ್ಲರೂ ಒಂದೇ ಎನಲು ಭಾರತೀಯ ಸಂಸ್ಕೃತಿ

ರಾಷ್ಟ್ರಕೀರ್ತಿ ನಭಕೆ ಒಯ್ದ ವೀರಶ್ರೀ ವಿವೇಕಾನಂದ
ಪಡುವಣಿಗರ ತಿಮಿರಳಿಸಲು ಮೂಡಣದಲಿ ಉದಿಸಿದ
ರಾಮಕೃಷ್ಣ ಪರಮಹಂಸ ಶಾರದೆಯರ ನಾಡಿದು
ನರನ ಹರಿಯನಾಗಿಸುವ ಸಂಸ್ಕೃತಿಯ ಬೀಡಿದು

ರಾಷ್ಟ್ರದ ಶಿರದಿಂದ ಪಾದ ವಿವಿಧ ಸಂಸ್ಕೃತಿಯ ನಿನಾದ
ಎಲ್ಲ ಸೇರಿ ರಿಂಗಣಿಸಲು ಮನದಿಂದಲೆ ನಾಶ ಬೇಧ
ಉತ್ತರದಲಿ ಹಿಮಪರ್ವತ ದಕ್ಷಿಣದಲಿ ಕಡಲ ಮೊರೆತ
ನಡುವೆ ನಮ್ಮ ಭಾರತ ಸಂಸ್ಕೃತಿ ಅತಿ ವಿಸ್ತೃತ

ಭೋಗಭೂಮಿ ಕರ್ಮಯೋಗಭೂಮಿಯೆಡೆಗೆ ನಡೆದಿದೆ
ಭಾರತೀಯ ಸಂಸ್ಕೃತಿಯದು ವಿಶ್ವವ್ಯಾಪಿಯಾಗುತಿದೆ
ವಿಶ್ವ ಗಮನ ನಮ್ಮ ಕಡೆಗೆ ಸುಸಮೃದ್ಧ ಬಾಳಿನೆಡೆಗೆ
ನಮ್ಮಿಂದಲೆ ಈ ಸಂಸ್ಕೃತಿಯಾಲಕ್ಷ್ಯವು ಕೂಡದು
ಭೋಗವಿಕೃತಿಯನುಕರಣೆ ಎಂದೆಂದಿಗು ಸಲ್ಲದು

ರಚನೆ: ಎನ್. ರವೀಂದ್ರ ಕುಮಾರ್.